ಕವಿ ಗೋಪಾಲಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತು” ಹಾಡನ್ನು ಕೇಳದ ಕಿವಿಗಳೇ ಇಲ್ಲ ಅನಿಸುತ್ತದೆ. ಈಗಲೂ ಈ ಹಾಡು ಎಲ್ಲೋ ಕೇಳಿ ಬಂದರೂ, ಅದರೊಟ್ಟಿಗೆ ಗುನಗುವ ಗೀತೆ ಅದು.
ಈಗ ಆ ಹಾಡಿನ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. “ಯಾವ ಮೋಹನ ಮುರಳಿ ಕರೆಯಿತು” ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ.ನಗರದ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ನೆರವೇರಿತು. ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿ, ಶುಭ ಕೋರಿದರು. ನಾಗೇಂದ್ರ ರೆಡ್ಡಿ ಹಾಗೂ ಲಕ್ಕಿ ಕ್ಯಾಮೆರಾ ಚಾಲನೆ ಮಾಡಿದರು. ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.
ಪ್ರಕೃತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶ್ವಾಸ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ.
ಕನ್ನಡದ ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ವಿಶ್ವಾಸ್ ಕೃಷ್ಣ ಅವರಿಗೆ ಇದು ಮೊದಲ ನಿರ್ದೇಶನದ
ಚಿತ್ರ.
ಕೌಟುಂಬಿಕ ಕಥಾಹಂದರದ ಈ ಚಿತ್ರಕ್ಕೆ ನಿರ್ದೇಶಕರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನೀಡಲಿದ್ದಾರೆ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಜೋಗದ ಬಳಿಯ ಕಾರ್ಗಲ್ ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ನಡೆಯಲಿದೆ. ಮಾಧವ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ. ಸ್ವಪ್ನ ಶೆಟ್ಟಿಗಾರ್. ಬೇಬಿ ಪ್ರಕೃತಿ, ಪಟೇಲ್ ವರುಣ್ ರಾಜು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಾಯಿ ರಾಕಿ ಕೂಡ ಈ ಚಿತ್ರದಲ್ಲಿ ಪ್ರಮುಖಪಾತ್ರ ನಿರ್ವಹಿಸುತ್ತಿದೆ.