ವಿಂಡೋಸೀಟ್ ಎಂದ ಕೂಡಲೇ ನಮಗೆ ಬಸ್ ಆಥವ ಟ್ರೈನ್ ಜರ್ನಿ ನೆನಪಾಗುತ್ತದೆ. ಈಗ ಅದೇ ಟೈಟಲ್ ನಡಿ ನಟಿ, ನಿರೂಪಕಿ ಶೀತಲ್ ಶೆಟ್ಟಿ ಅವರು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಈ ವಿಂಡೋಸೀಟ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು, ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಶಾಲಿನಿ ಮಂಜುನಾಥ್, ಶೀತಲ್ ಶೆಟ್ಟಿ, ನಾಯಕ ನಿರೂಪ್ ಭಂಡಾರಿ, ನಾಯಕಿ ಅಮೃತಾ ಅಯ್ಯಂಗಾರ್, ನಟ ಸೂರಜ್ ಹಾಗೂ ಚಿತ್ರತಂಡ ಹಾಜರಿತ್ತು.
ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ನಿರೂಪಕಿ ಶೀತಲ್ಶೆಟ್ಟಿ ಅವರು ಇದೇ ಮೊದಲಬಾರಿಗೆ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, ಕಥೆ ಹಾಗೂ ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬಿಗ್ಬಾಸ್ ಮನೆಯಿಂದ ಹೊರಬಂದಮೇಲೆ ಈ ಕಥೆ ರೆಡಿ ಮಾಡಿದೆ. ಸ್ನೇಹಿತರೆಲ್ಲ ನೀವೇ ಡೈರೆಕ್ಟ್ ಮಾಡಿ ಎಂಬ ಸಲಹೆ ನೀಡಿದರು. ನಂತರ ನಿರ್ಮಾಪಕರ ಹುಡುಕಾಟ ನಡೆಸುತ್ತಿದ್ದೆವು. ಯಾರೂ ಸಿಗಲಿಲ್ಲ ಒಮ್ಮೆ ಸುದೀಪ್ರನ್ನು ಕಂಡು ಯಾರಾದರೂ ನಿರ್ಮಾಪಕರು ಇದ್ರೆ ಹೇಳಿ ಎಂದಾಗ ಅವರು ಜಾಕ್ ಮಂಜು ಅವರನ್ನು ಸಜೆಸ್ಟ್ ಮಾಡಿದರು.
ಮಂಜಣ್ಣ ಅವರ ಬಳಿ ಈ ಕಥೆ ಹೇಳಿದೆ, ಒಂದಷ್ಟು ಕರೆಕ್ಷನ್ ಹೇಳಿ ಬಂಡವಾಳ ಹಾಕಲು ಸಿದ್ದರಾದರು. ಇನ್ನು ನಾಯಕನ ಪಾತ್ರಕ್ಕೆ ನಿರೂಪ್ ಅವರು ಒಪ್ತಾರೋ ಇಲ್ವೋ ಎಂಬ ಅನುಮಾನವಿತ್ತು. ಆದರೆ ಅವರು ಕಥೆ ಕೇಳಿದ ಕೂಡಲೇ ಹೊಸಬಳೆಂದು ಯೋಚಿಸದೆ ಗ್ರೀನ್ ಸಿಗ್ನಲ್ ಕೊಟ್ಟರು. ಹೀಗೆ ನಿರ್ಮಾಣವಾದ ಈ ಚಿತ್ರ ಜುಲೈ ಒಂದರಂದು ಬಿಡುಗಡೆಯಾಗುತ್ತಿದೆ ಎಂದರು,
ನಂತರ ನಿರ್ಮಾಪಕಿ ಶಾಲಿನಿ ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆಯಿಂದ ಯಾವಾಗಲೂ ಹೊಸಬರಿಗೇ ಅವಕಾಶ ನೀಡುತ್ತ ಬಂದಿದ್ದೇವೆ. ಅದು ಲೈಫು ಇಷ್ಟೇನೇ, ಡೆಡ್ಲಿಸೋಮನೇ ಇರಬಹುದು. ಹೊಸಬರು ಬಂದಾಗ ಹೊಸ ಐಡಿಯಾ ಹೊರಬರುತ್ತದೆ, ಹೊಸತನ ಕೊಟ್ಟಾಗ ಜನನೂ ಮನೆಯಿಂದ ಹೊರಬರುತ್ತಾರೆ. ಈಗ ಒಬ್ಬ ಮಹಿಳೆಗೆ ಅವಕಾಶ ಕೊಟ್ಟಿದ್ದೇವೆ. ಶೀತಲ್ ಶೆಟ್ಟಿ ಅದ್ಭುತವಾಗಿ ಈ ಚಿತ್ರ ಮಾಡಿಕೊಟ್ಟಿದ್ದಾರೆ, ಫಸ್ಟ್ ಟೈಮ್ ನಿರ್ದೇಶನ ಮಾಡಿದ್ದಾರೆ ಅನಿಸುವುದೇ ಇಲ್ಲ.
ಶೀತಲ್ ಅವರಂತೆಯೇ ನಮ್ಮ ಎಲ್ಲಾ ಹೆಣ್ಣುಮಕ್ಕಳು ಮುಂದೆ ಬರಬೇಕು, ಅವರು ಅಡುಗೆ ಮನೆಯಿಂದ ಹೊರಬರಬೇಕು. ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಒಂದು ಶಕ್ತಿ ಇರುತ್ತದೆ ಇರುತ್ತದೆ. ನಮ್ಮ ಇಂಡಸ್ಟ್ರಿ ಈಗ ಪ್ರಪಂಚ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿದೆ, ಅದಕ್ಕೆ ತಕ್ಕಂತೆ ನಾವು ಸಿನಿಮಾಗಳನ್ನು ಮಾಡಬೇಕಿದೆ ಎಂದರು.
ವಿಂಡೋಸೀಟ್ ಎಂದ ಕೂಡಲೇ ಇದೊಂದು ಬರೀ ಜರ್ನಿ ಕಥೆ ಅಂದುಕೊಳ್ಳಬೇಕಿಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಿಸ್ಟ್ರಿ ಕೂಡ ಇದರಲ್ಲಿದೆ. ಬಿಡುಗಡೆಯಾಗಿರುವ ಟ್ರೈಲರ್ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಈ ಚಿತ್ರದ ವಿಶಿಷ್ಟ ಟ್ರೈಲರನ್ನು ನಟ ಕಿಚ್ಚ ಸುದೀಪ್ ಅವರು ಟ್ವಿಟರ್ ನಲ್ಲಿ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
ತಾಳಗುಪ್ಪದಿಂದ ಸಾಗರದವರೆಗೆ ಟ್ರೈನ್ ನಲ್ಲಿ ಪ್ರಯಾಣಿಸುವ ನಾಯಕನ ಕಥೆ ಈ ಚಿತ್ರದಲ್ಲಿದೆ, ಮಲೆನಾಡು, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುವ ಜೊತೆಜೊತೆಗೆ ಒಂದು ಕುತೂಹಲಕರ ಮರ್ಡರ್ ಮಿಸ್ಟ್ರಿಯನ್ನು ಹೇಳಹೊರಟಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು, ಜುಲೈ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಟ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ತಾಳಗುಪ್ಪದ ರಘು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಒಬ್ಬ ಹಾಡುಗಾರ. ಆತನಿಗೆ ವಿಂಡೋಸೀಟೆಂದರೆ ಬಲು ಪ್ರೀತಿ, ಈತನ ವಿಂಡೋಸೀಟಿನ ವ್ಯಾಮೋಹವೇ ಈತನನ್ನು ದೊಡ್ಡದೊಂದು ಸಂಕಷ್ಟಕ್ಕೆ ತಳ್ಳುತ್ತದೆ. ಇದರ ಸುಳಿಯಿಂದ ರಘು ಪಾರಾಗುತ್ತಾನಾ ? ಇಲ್ಲವಾ ಕಟ್ಟುಪಾಡುಗಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕುತ್ತಾನಾ? ಅನ್ನೋದು ವಿಂಡೋಸೀಟ್ ಸಿನಿಮಾದ ಮುಖ್ಯಕಥೆ. ಪ್ರೀತಿ, `ಇವನೆ, ನೋವು-ನಲಿವಿನ ಜೊತೆಗೆ ಒಂದು ಮರ್ಡರ್ ಮಿಸ್ಟ್ರಿ ಕಥೆ ಹೇಗೆ ಸಾಗುತ್ತೆ ಎನ್ನುವುದೇ ಚಿತ್ರದ ಕುತೂಹಲ.
ವಿಂಡೋಸೀಟ್ ಚಿತ್ರ ಈ ವೇಳೆಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರೀಕರಣದ ನಡುವೆ ಕೊರೊನಾ, ಲಾಕ್ಡೌನ್ ಆದ ಕಾರಣ ಬ್ರೇಕ್ಆಗಿ ಸಿನಿಮಾದ ಚಿತ್ರೀಕರಣ ಕೊಂಚ ತಡವಾಗಿತ್ತು. ಈಗ ಚಿತ್ರತಂಡ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿದೆ. ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಚಿತ್ರದ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಹಾಗೂ ವಿಘ್ನೇಶ್ರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.