Vikranth Rona 4/5
ಕನ್ನಡ ಚಿತ್ರರಂಗವನ್ನು ಬೇರೊಂದು ಲೆವೆಲ್ಲಿಗೆ ಕೊಂಡೊಯ್ಯಬಲ್ಲ, ಕರ್ನಾಟಕದ ಹಿರಿಮೆಯನ್ನು ಜಗತ್ತಿಗೇ ಸಾರುವ ತಾಕತ್ತಿರುವ ನಟ ಸುದೀಪ್. ಇಲ್ಲಿ ಸೂಪರ್ ಸ್ಟಾರ್ ಆಗಿರುವಾಗಲೇ ಕರ್ನಾಟಕದ ಗಡಿ ದಾಟಿ ಇಡೀ ಭಾರತೀಯ ಚಿತ್ರರಂಗವನ್ನು ಆವರಿಸಿದ ಮೊದಲ ನಟ ಸುದೀಪ್. ಈಗ ಅವರ ವಿಕ್ರಾಂತ್ ರೋಣ ಬಿಡುಗಡೆಯಾಗಿದೆ. ಈ ಸಲ ಸುದೀಪ್ ಜಾಗತಿಕ ಮಟ್ಟದಲ್ಲಿ ಗೆಲುವು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ವಿಕ್ರಾಂತ್ ರೋಣ ಮುನ್ನುಡಿ ಬರೆಯುತ್ತಾನಾ ಎನ್ನುವ ಪ್ರಶ್ನೆಗೆ ಉತ್ತರದಂತೆ ಮೂಡಿಬಂದಿರುವ ಸಿನಿಮಾ ವಿಕ್ರಾಂತ್ ರೋಣ…
ಬನ್ನಿ ಸಿನಿಮಾ ಹೇಗಿದೆ? ಅದರ ಹೂರಣವೇನು? ವಿಕ್ರಾಂತ್ ರೋಣ ಜನರಿಗೆ ಇಷ್ಟವಾಗ್ತಾನಾ ಅನ್ನೋದನ್ನು ಹೇಳ್ತೀನಿ
ಕರಾವಳಿಯಲ್ಲಿ ನಡೆಯುವ ಭೂತಾರಾಧನೆಯ ಸುತ್ತ ಒಂದೊಳ್ಳೆ ಕಥೆ ಕಟ್ಟಿ ʻರಂಗಿತರಂಗʼ ಎನ್ನುವ ಸಿನಿಮಾವನ್ನು ತೆರೆಗೆ ತಂದಿದ್ದವರು ನಿರ್ದೇಶಕ ಅನೂಪ್ ಭಂಡಾರಿ. ಈಗ ಬಂದಿರುವ ವಿಕ್ರಾತ್ ರೋಣ ಚಿತ್ರ ಅದರದ್ದೇ ಇನ್ನೊಂದು ಆವೃತ್ತಿಯಾ ಅನ್ನಿಸುವಂತಿದೆ. ಅದೇ ಕಮರೊಟ್ಟು, ಅಲ್ಲಿ ಭೂತಾರಾಧನೆಯನ್ನು ನಿಲ್ಲಿಸಿದ ಒಂದು ಫ್ಯಾಮಿಲಿ ಅದಕ್ಕೊಂದು ಕಾರಣ. ಅದರ ಸುತ್ತ ತೆರೆದುಕೊಳ್ಳುವ ಕಥೆ ಹಲವು ಮಜಲುಗಳೊಂದಿಗೆ ಸಾಗುತ್ತದೆ.
ರಂಗಿತರಂಗ ಸಿನಿಮಾದಲ್ಲಿ ಗರ್ಭಿಣಿ ಮಹಿಳೆಯರ ಕೊಲೆಯಾಗುತ್ತಿರುತ್ತದಲ್ಲಾ? ಹಾಗೇ ಇಲ್ಲಿ ಆಡುವ ಮಕ್ಕಳ ಮಾರಣ ಹೋಮ ನಡೆಯುತ್ತಿರುತ್ತದೆ. ಅದರ ಜೊತೆಗೆ ಆ ಊರಿನ ಪೊಲೀಸ್ ಇನ್ಸ್ ಪೆಕ್ಟರ್ ಕೂಡಾ ನಿಗೂಢವಾಗಿ ಹತನಾಗಿರುತ್ತಾನೆ. ಈ ಎಲ್ಲಾ ಕೊಲೆಗಳನ್ನು ಮಾಡುತ್ತಿರುವವರು ಯಾರು? ಅವರ ಉದ್ದೇಶವೇನು? ಅನ್ನೋದನ್ನೆಲ್ಲಾ ಕಂಡು ಹಿಡಿಯಲು ಬರುವ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ…. ಅಸಲಿಗೆ ಇನ್ಸ್ ಪೆಕ್ಟರ್ ವಿಕ್ರಾಂತ್ ರೋಣನಿಗೂ ಇಲ್ಲಿ ನಡೆಯುವ ಹತ್ಯಾಕಾಂಡಕ್ಕೂ ಏನಾದರೂ ಪರ್ಸನಲ್ಲಾಗಿ ಏನಾದರೂ ಸಂಬಂಧ ಇದೆಯಾ ಅನ್ನೋದೇ ಅಸಲೀ ಕಥೆ!ಚೆಕ್ ಪೋಸ್ಟ್ ನ ಗೇಟ್ ಕೀಪರ್ ಯಾಕೆ ದಿಡೀರಂತ ಸತ್ತು ಬೀಳುತ್ತಾನೆ? ಸ್ಮಗ್ಲರ್ ಮೂಸಾ ಕೊಲೆಯ ಹಿಂದಿನ ರಹಸ್ಯವೇನು? ಕಮರೊಟ್ಟು ಫ್ಯಾಮಿಲಿಗೂ ಈ ಎಲ್ಲ ಕೊಲೆಗೂ ಇರುವ ನಂಟು ಯಾವುದು… ಹೀಗೆ ಅಷ್ಟ ದಿಕ್ಕುಗಳಲ್ಲೂ ಕುತೂಹಲ ಕೆರಳುವಂತೆ ಮಾಡುವ ಚಿತ್ರ ವಿಕ್ರಾಂತ್ ರೋಣ.
ಇಪ್ಪತ್ತೆಂಟು ವರ್ಷಗಳ ಹಿಂದೆ ನಡೆದ ದೇವಸ್ಥಾನದ ಒಡವೆ ಕಳ್ಳತನದ ಸುಳ್ಳು ಆರೋಪ. ಒಂದಿಡೀ ಕುಟುಂಬವನ್ನು ಹೇಗೆ ಅಪೋಶನ ತೆಗೆದುಕೊಳ್ಳುತ್ತದೆ ಮತ್ತು ಅದು ತಲೆಮಾರುಗಳ ಆಚೆಗಿನವರನ್ನೂ ಯಾವೆಲ್ಲಾ ರೀತಿಯಲ್ಲಿ ಬಾಧಿಸುತ್ತದೆ ಅನ್ನೋ ವಿಚಾರ ವಿಕ್ರಾಂತ್ ರೋಣ ಚಿತ್ರದಲ್ಲಿ ಅನಾವರಣಗೊಂಡಿದೆ. ಯಾರೂ ಊಹೆ ಮಾಡಲಾರದ ಕ್ಲೈಮ್ಯಾಕ್ಸ್ ಚಿತ್ರದ ಪ್ಲಸ್ ಪಾಯಿಂಟ್!
ಯಾರೂ ಊಹೆ ಮಾಡದ ಪಾತ್ರವನ್ನು ನಿರೂಪ್ ಭಂಡಾರಿ ಇಲ್ಲಿ ನಿಭಾಯಿಸಿದ್ದಾರೆ. ಸುದೀಪ್ ಅದ್ಭುತ ನಟ ಅನ್ನೋದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಎಂಥಾ ಪಾತ್ರ ಕೊಟ್ಟರೂ ಅದಕ್ಕವರು ನ್ಯಾಯ ಒದಗಿಸುತ್ತಾರೆ. ಇಷ್ಟಾಗಿಯೂ ಕೆಲವೊಂದು ದೃಶ್ಯಗಳಲ್ಲಿ ಸುದೀಪ್ ಡೈಲಾಗ್ ಡೆಲಿವರಿ ಬಿಗ್ ಬಾಸ್ ಶೋ ನಿರೂಪಣೆಯನ್ನು ನೆನಪಿಸುತ್ತದೆ! ಕಲಾ ನಿರ್ದೇಶಕ ಶಿವಕುಮಾರ್ ಕಾರಣಕ್ಕೆ ಇಡಿಯ ವಿಕ್ರಾಂತ್ ರೋಣ ಹೊಸ ಜಗತ್ತಿಗೆ ಕರೆದೊಯ್ಯುವಂತಿದೆ. ಬೆಳಕಿನ ದೃಶ್ಯಗಳು ಕಡಿಮೆ ಇದ್ದು ಬಹುತೇಕ ಕತ್ತಲ ಹಿನ್ನೆಲೆಯಲ್ಲಿಯೇ ಚಿತ್ರ ಸಾಗುತ್ತದೆ. ವಿಲಿಯಮ್ಸ್ ಡೇವಿಡ್ ಕೆಲಸ ಪರವಾಗಿಲ್ಲ. ಕನ್ನಡದ ಮಟ್ಟಿಗೆ ಸಂಪೂರ್ಣ ತ್ರೀಡಿ ಸಿನಿಮಾ ಇದಾಗಿರುವುದು ವಿಕ್ರಾಂತ್ ರೋಣ ಚಿತ್ರದ ಹೆಗ್ಗಳಿಕೆ.