ದಕ್ಷಿಣ ಕನ್ನಡದ ಅಚ್ಚುಮೆಚ್ಚಿನ ಕಂಬಳದ ಕುರಿತಾಗಿ ಬರುತ್ತಿರುವ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ” ವೀರ ಕಂಬಳ” ಚಿತ್ರದಲ್ಲಿ ಕಂಬಳದ ಪರ ವಕೀಲರಾಗಿ ಪ್ರಕಾಶ್ ರೈ ನಟಿಸಿದ್ದಾರೆ. ಪ್ರತಿವಾದಿಯಾಗಿ ರವಿಶಂಕರ್ ಅಭಿನಯಿಸಿದ್ದಾರೆ. ಈ ಕೋರ್ಟ್ ಸನ್ನಿವೇಶವನ್ನು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಸೆರೆ ಹಿಡಿಯಲಾಯಿತು. ನಂತರ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಪ್ರಕಾಶ್ ರೈ,
,ರವಿಶಂಕರ್, ರಾಜೇಂದ್ರ ಸಿಂಗ್ ಬಾಬು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಆದಿತ್ಯ, ವೀಣಾ ಪೊನ್ನಪ್ಪ ಮುಂತಾದವರು ಹಾಜರಿದ್ದರು.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ. 16 ಸಾವಿರ ಪುಟಗಳ ಚರ್ಚೆಯಾಗಿದೆ. ಕೋರ್ಟಿನಿಂದ ತರಿಸಿ, ಈ ವಾದಗಳನ್ನು ಯಾವ ರೀತಿ ತರಬೇಕು ಎಂಬುದು ಮುಖ್ಯ. ಏಕೆಂದರೆ, ಕಾಮೆಂಟರಿ ಅಥವಾ ಸಾಕ್ಷ್ಯಚಿತ್ರ ಆಗಬಾರದು. ದೊಡ್ಡ ಸವಾಲಿತ್ತು. ತುಂಬಾ ಜನರ ಸಲಹೆ ಪಡೆದೆ. ಟಿ.ಎನ್.ಸೀತಾರಾಮ್ ಅವರಿಂದ ಬೇಕಾದಷ್ಟು ವಿಷಯ ಕಲೆ ಹಾಕಿದೆವು. ಒಂಭತ್ತು ತಿಂಗಳಿನಿಂದ ಇದೊಂದು ಸೀನ್ ಮೇಲೆ ನಾನು ಮತ್ತು ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಕೆಲಸ ಮಾಡುತ್ತಿದ್ದೇವೆ. ಅದೇ ಕಾರಣಕ್ಕೆ ಚಿತ್ರೀಕರಣ ಕೊನೆಯಲ್ಲಿಟ್ಟುಕೊಂಡೆವು. ಇದನ್ನು ಹೇಗೆ ಹೇಳಬೇಕು ಎಂದು ಯೋಚಿಸಿ, ಇವತ್ತು ಚಿತ್ರೀಕರಣ ಮಾಡುತ್ತಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್ ರೈ ಮತ್ತು ರವಿ ಶಂಕರ್ ಅವರ ಅಭಿನಯ, ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು.
ಪ್ರಕಾಶ್ ರೈ ಈ ಹಿಂದೆ “ಮುತ್ತಿನ ಹಾರ” ಚಿತ್ರದಲ್ಲಿ ನಟಿಸಿದ್ದರು. ಒಳ್ಳೆಯ ಕ್ಷಣ ಕಳೆದಿದ್ದೇವೆ. ಅದನ್ನು ನೆನಪಿಟ್ಟುಕೊಂಡು ಅವರು ಬಂದು ನಟಿಸುತ್ತಿದ್ದಾರೆ. ಎರಡು ಫೋನ್ ಮಾಡಿದೆ. ಅವರು ಒಪ್ಪಿ ನಟಿಸಿದರು. ಹೈದರಾಬಾದ್ನಿಂದ ನೇರವಾಗಿ ಚಿತ್ರೀಕರಣಕ್ಕೆ ಬಂದರು. ಭಾರತ ಅಲ್ಲ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ನಟಿಸಲಿ. ಎಲ್ಲಿ ಹೋದರು ಗೆದ್ದು ಬರುತ್ತಾರೆ. ಅವರಿಗೆ ಆ ಪ್ರತಿಭೆ ಇದೆ. ಕನ್ನಡಿಗರ ಆಶೀರ್ವಾದವಿದೆ. ರವಿಶಂಕರ್ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇಲ್ಲೂ ಒಂದೊಳ್ಳೆಯ ಪಾತ್ರವಿದೆ.
ಎರಡು ವರ್ಷ ಸ್ಕ್ರಿಪ್ಟ್ ಮಾಡಿದ್ದೇವೆ 10-15 ಕಂಬಳಗಳಿಗೆ ಹೋಗಿ, ನೋಡಿ, ಅಲ್ಲಿಯ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿದ್ದೇವೆ. ಯಾರು ಹೀರೋ? ಹೀರೋ ಹಾಕಿದರೆ, ಕಂಬಳ ಓಡಿಸುವವರ ಡ್ಯೂಪ್ಲಿಕೇಟ್ ಹಾಕುವುದಕ್ಕೆ ಇಷ್ಟ ಇರಲಿಲ್ಲ. ನನಗೆ ಒರಿಜಿನಲ್ ಬೇಕಿತ್ತು. ಶ್ರೀನಿವಾಸ್ ಗೌಡ ಅವರನ್ನು ಹೀರೋ ತರಹ ಹಾಕಿ, ಸ್ವರಾಜ್ ಅವರಿಗೆ ಟೆನ್ ಮಾಡಿ, ನೇಟಿವಿಟಿ ಮಿಸ್ ಆಗಬಾರದು ಎಂಬ ಕಾರಣಕ್ಕೆ. 800 ವರ್ಷಗಳ ಕ್ರೀಡೆ. ಪ್ರತಿಯೊಂದನ್ನೂ ಗಮನಿಸಿ, ಯಾವುದೇ ಚ್ಯುತಿ ಬರದಂತೆ ಮಾಡಿದ್ದೇವೆ. ಎಲ್ಲ ನೈಜ. ಯಾವುದು ಕೃತಕವಲ್ಲ. ಅದನ್ನು ನಮ್ಮ ಕಥೆಗೆ ಪೂರಕವಾಗಿ ಬಳಸಿಕೊಂಡಿದ್ದೇವೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ಇದುವರೆಗೂ ಹಲವು ಕೋರ್ಟ್ ದೃಶ್ಯಗಳಲ್ಲಿ ಭಾಗವಹಿಸಿದ್ದರೂ ಇದು ಬೇರೆ. ಇದು ನನ್ನ ಮಣ್ಣಿನ ಒಂದು ವಿಷಯ. ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ. ಇಲ್ಲಿ ಸಂಭಾಷಣೆಯ ಮಾತುಗಳಿಗಿಂತ ನನ್ನ ಭಾವನೆಯೂ ಮುಖ್ಯವಾಗುತ್ತದೆ. ಇದು ನನಗೆ ಬಹಳ ಪರ್ಸನಲ್ ಆದಂತಹ ಚಿತ್ರ. ಹಲವು ಚಿತ್ರಗಳು ನನಗೆ ಯಾವುದೇ ಸಂಬಂಧವಿರುವುದಿಲ್ಲ. ಅಲ್ಲಿ ನಾನು ಒಬ್ಬ ನಟನಾಗಿ ನನ್ನ ಪಾತ್ರ ಮಾಡುತ್ತೇನೆ ಅಷ್ಟೇ. ಅದನ್ನು ಹೊರತುಪಡಿಸಿ, ಒಬ್ಬ ಕನ್ನಡಿಗನಾಗಿ ಒಂದು ಜವಾಬ್ದಾರಿ ಇರುತ್ತದೆ. ಒಬ್ಬ ತುಳುವನಾಗಿ, ಆ ಮಣ್ಣಿನ ವಿಷಯದ ಚಿತ್ರ ಮಾಡಿದಾಗ, ಅದರ ಪರವಾಗಿ ವಾದಿಸುವಂತಹ, ಅದರ ಕುರಿತಾಗಿ ಇರುವ ಊಹಾಪೋಹಗಳನ್ನ ಮತ್ತು ಅಪಪ್ರಚಾರಗಳನ್ನು ನೀಗಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರೋ
ಒಬ್ಬರು ಕಂಬಳದ ನೀರು ಕೆಸರು ಎಂದಾಗ, ಇಲ್ಲ ಅದು ಕೆಸರಲ್ಲ, ಅದು ತೀರ್ಥ ಅಂತ ಹೇಳುವ ದೃಶ್ಯಗಳಿವೆ ಎಂದರು ಪ್ರಕಾಶ್ ರೈ.
ನಾನು ಈ ಚಿತ್ರದಲ್ಲಿ ನಟಿಸಲು ಮೂರು ಕಾರಣಗಳಿವೆ. ಮೊದಲು ನನಗೆ ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಆಸೆಯಿತ್ತು. ನಂತರ ನಾನು ರಾಜೇಂದ್ರ ಸಿಂಗ್ ಬಾಬು ಅವರ ಅಭಿಮಾನಿ. “ಬಂಧನ”, ” ಮುತ್ತಿನ ಹಾರ” ಚಿತ್ರಗಳನ್ನು ಸಾಕಷ್ಟು ಸಲ ನೋಡಿದ್ದೀನಿ ಮತ್ತು ಭಾರತದ ಶ್ರೇಷ್ಠ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಈ ಎಲ್ಲಾ ಕಾರಣಕ್ಕೆ “ವೀರ ಕಂಬಳ” ನನಗೆ ವಿಶೇಷವೆಂದರು ರವಿಶಂಕರ್.