ಭಯಾನಕ ಬಿಲ್ಡಪ್ ಜೊತೆಗೆ ತೆರೆ ಮೇಲೆ ಹೀರೋ ಎಂಟ್ರಿ ಮಾಮೂಲಿ. ಆದರೆ ಇಲ್ಲಿ ಮಾರ್ಚುರಿಯ ಸ್ಟ್ರೆಚರ್ ನಲ್ಲಿ ಸತ್ತು ಮಲಗಿದವನು ಎದ್ದು ಕೂರುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅದು ತುರ್ತು ನಿರ್ಗಮನ!
ಸಾವು ಮತ್ತು ಬದುಕಿನ ನಡುವೆ ಇರುವ ದ್ವಂದ್ವಗಳ ಕುರಿತಾದ ಸಿನಿಮಾ ಇದು. ಇಲ್ಲಿ ಯಾರೂ ಶಾಶ್ವತರಲ್ಲ. ಎಲ್ಲರೂ ಒಂದಲ್ಲಾ ಒಂದು ದಿನ ಎದ್ದು ಹೋಗಲೇಬೇಕು. ಹಾಗೆ ಎದ್ದು ಹೋದಮೇಲೂ ಹೆಸರು ಉಳಿಯುವಂತಾ ಕೆಲಸ ಮಾಡಬೇಕು ಅಂದುಕೊಂಡವರು ಕೆಲವರು. ಸುಮ್ಮನೇ ಟೈಂ ಪಾಸ್ ಮಾಡಿ ಜಾಗ ಖಾಲಿ ಮಾಡುವವರು ಹಲವರು.
ಬದುಕಿದ್ದಷ್ಟೂ ದಿನ ನಾವು ಯಾರು? ನಮ್ಮ ಸುತ್ತಲಿನ ಪರಿಸರ ಹೇಗಿದೆ? ಜೊತೆಗಿರುವವರ ಫೀಲಿಂಗ್ಸ್ ಏನು? ನಮ್ಮನ್ನು ಹೆತ್ತವರು ನಮ್ಮಿಂದ ಏನು ಬಯಸುತ್ತಿದ್ದಾರೆ? ಅನ್ನೋದನ್ನು ತಿಳಿದೇ ಇರಲ್ಲ. ಎಲ್ಲವನ್ನೂ ಒಂದು ರೀತಿಯಲ್ಲಿ ಯಾಂತ್ರಿಕವಾಗಿ ಕಾಣುತ್ತಿರುತ್ತೇವೆ. ಆಫೀಸಿಗೆ ಹೋಗುವ ಅಪ್ಪ ಸಂಜೆ ಬರುತ್ತಾರೆ, ವಾಕ್ ಮಾಡಿ, ಟೀವಿ ನೋಡಿ ಮಲಗುತ್ತಾರೆ… ಅಮ್ಮ ಅಡುಗೆ ಮಾಡಿಕೊಂಡು ಮನೆಯಲ್ಲಿರುತ್ತಾರೆ ಅನ್ನೋದನ್ನು ಬಿಟ್ಟರೆ, ಅವರ ಆಂತರ್ಯದ ಬಯಕೆಗಳೇನು? ಅವರ ಬಾಲ್ಯ ಹೇಗಿತ್ತು? ಅವರು ಬದುಕು ಕಟ್ಟಿಕೊಂಡ ಬಗೆ ಯಾವುದು ಅನ್ನೋದು ಕೂಡಾ ಅನೇಕ ಮಕ್ಕಳು ತಿಳಿದುಕೊಂಡಿರುವುದಿಲ್ಲ.
– ಹೀಗೆ ಬದುಕನ್ನು ತೀರಾ ಹಗುರವಾಗಿ ಪರಿಗಣಿಸಿದ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಹುಡುಗನೊಬ್ಬನ ಆತ್ಮ ಕಥೆಯಂತಾ ಸಿನಿಮಾ ʻತುರ್ತು ನಿರ್ಗಮನʼ. ʻʻವಯಸ್ಸು ಎಷ್ಟೇ ಆದರೂ ಜೀವದ ಮೇಲಿನ ಪ್ರೀತಿ ಕೊನೆಯಾಗಲ್ಲ. ಯಾರು ಯಾವಾಗ ಬೇಕಾದರೂ ಸಾಯಬಹುದು.ʼʼ ಅಂತಾ ಥಿಯರಿ ಮಂಡಿಸುತ್ತಾ ಕೈಲಿ ಚೈನು ಹಿಡಿದು, ಸತ್ತವರ ಲೆಕ್ಕ ಬರೆಯುವ ಚಿತ್ರಗುಪ್ತೆಯಂಥಾ ಹೆಣ್ಣು, ʻʻಯಾವುದೇ ಆಸೆ ಇರದವನು, ಹುಟ್ಟಿದ ಮೇಲೆ ನಾವಿಡೋ ಹೆಜ್ಜೆ ಆರಡಿ ಮೂರಡಿ ಕಡೆ. ಇದರ ನಡುವೆ ಬದುಕು ಬೋರೆದ್ದುಹೋಗಬಾರದು ಅಂತಾ, ನಮ್ಮ ಮನರಂಜನೆಗಾಗಿ ಕನಸು, ಗುರಿ, ಸಾಧನೆ, ವೀಕೆಂಡ್ ವಿಥ್ ರಮೇಶ್ ಅಂತೆಲ್ಲಾ ಕಾಲ ಕಳೀತಿರ್ತೀವಿ. ಏಜ್ ಬಾರ್ ಆದಮೇಲೆ ಸಾಯಬಾರದು, ಫ್ರೆಶ್ ಆಗಿದ್ದಾಗಲೇ ಸಾಯಬೇಕು. ಅದಕ್ಕೇ ನನ್ನ ಎಕ್ಸ್ ಪರಿ ಡೇಟನ್ನು ನಾನೇ ಫಿಕ್ಸ್ ಮಾಡಿಕೊಂಡುಬಿಟ್ಟೆ.ʼʼ ಎನ್ನುತ್ತಾ ಜೀವಿಸೋದೇ ಅಲರ್ಜಿ ಎನ್ನುವಂತೆ ಆತ್ಮಹತ್ಯೆ ಮಾಡಿಕೊಂಡು ಬಂದವನು ಮತ್ತು ʻʻನಾನ್ಯಾಕೆ ಸಾಯುತ್ತೇನೆ? ಏನು ತಪ್ಪು ಮಾಡಿದ್ದೇನೆಂದು ಸಾಯಬೇಕು?ʼʼ ಅಂತಾ ಪ್ರಶ್ನಿಸುವ ಅಪಘಾತಕ್ಕೀಡಾಗಿ ಸತ್ತವನು – ಈ ಮೂರೂ ಪಾತ್ರಗಳ ಚರ್ಚೆಯ ಮೂಲಕ ತೆರೆದುಕೊಳ್ಳುವ ಕಥೆ ಈ ಚಿತ್ರದ್ದು.
ಬೇಕಾಬಿಟ್ಟಿಯಾಗಿ ಬದುಕು ನಡೆಸುವ ಹುಡುಗನೊಬ್ಬ ಸತ್ತ ಮೇಲೆ ಟೈಂ ಲೂಪ್ ಮೂಲಕ ಮತ್ತೆ ಬಂದು ತನ್ನ ಬದುಕಿನ ರೀತಿಯನ್ನು ತಿದ್ದಿಕೊಳ್ಳುವ ಪ್ರಧಾನ ಅಂಶದ ಮೇಲೆ ಸಿನಿಮಾ ಕಟ್ಟಲಾಗಿದೆ. ಮತ್ತೆ ಮತ್ತೆ ಎದುರಾಗುವ ಒಂದೇ ಥರದ ದೃಶ್ಯಗಳು ಗೊಂದಲ ಅನ್ನಿಸಿದರೂ, ತಾಳ್ಮೆಯಿಂದ ನೋಡಿದರೆ ಭಿನ್ನ ಒಳಹುಗಳು ಗೋಚರಿಸುತ್ತವೆ. ವ್ಯಕ್ತಿ ಸಡನ್ನಾಗಿ ಸತ್ತುಹೋದರೆ, ದೇಹದಿಂದ ದೂರವಾದ ಆತ್ಮ ಎಷ್ಟು ವಿಲಗುಡುತ್ತದೆ? ತಾನು ಸತ್ತಿದ್ದೇನೆ ಅಂತಾ ಒಪ್ಪಿಕೊಳ್ಳಲು ಅದು ನಡೆಸುವ ಒದ್ದಾಟಗಳೇನು? ಎಂಬಿತ್ಯಾದಿ ಸ್ಪಷ್ಟ ವಿಚಾರಗಳನ್ನು ಅಮೂರ್ತ ಪಾತ್ರಗಳ ಮೂಲಕ ಬಿಡಿಸಿಟ್ಟಿರುವ ಚಿತ್ರ ತುರ್ತು ನಿರ್ಗಮನ.
ತಂಗಿಯನ್ನು ಮದುವೆಯಾಗಬಯಸುವ ಹುಡುಗನ ಮುಂದೆ ಕೂತು ಖಡಕ್ಕಾಗಿ ಮಾತಾಡುವ ಅಣ್ಣ, ಅಪ್ಪನ ಜೊತೆ ಬ್ಯಾಡ್ಮಿಂಟನ್ ಆಡುವ, ತಾಯಿಯನ್ನು ಕೆಫೆಗೆ ಕರೆದುಕೊಂಡು ಹೋಗುವ ಮಗ, ಬಿಟ್ಟು ಹೋದವವಳ ಮುಂದೆ ನಿಂತು ಪಾಪ ನಿವೇದನೆ ಮಾಡಿಕೊಳ್ಳುವ ಹುಡುಗನ ದೃಶ್ಯಗಳು ಎಲ್ಲರನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವಂತೆ ಮಾಡುತ್ತವೆ. ಜೊತೆಗೆ ಇಡೀ ಸಿನಿಮಾದ ಪವರ್ ಹೆಚ್ಚಿಸಿದೆ. ಇಂಥ ಇನ್ನಷ್ಟು ವಿಚಾರಗಳು ಬೇಕಿತ್ತು ಅಂತಲೂ ಅನ್ನಿಸುತ್ತದೆ.
ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಹಿಂದೆ ಬಂದಿರಲಿಲ್ಲ. ಸುನೀಲ್ ರಾವ್ ಹೇಳಿಕೊಳ್ಳುತ್ತಿದ್ದಂತೇ ತೀರಾ ಹೊಸ ಬಗೆಯ ಕಥೆಯೊಂದಿಗೆ ಅವರು ಕಂಬ್ಯಾಕ್ ಆಗಿದ್ದಾರೆ. ಇಷ್ಟು ವರ್ಷದ ಗ್ಯಾಪ್ ನಂತರವೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಸುಧಾರಾಣಿ ಜೀವಮಾನದಲ್ಲಿ ಇಂಥದ್ದೊಂದು ಪಾತ್ರ ಹಿಂದೆಂದೂ ಮಾಡಿರಲಿಲ್ಲ. ಮುಂದೆ ಸಿಗುತ್ತದಾ ಗೊತ್ತಿಲ್ಲ. ಅಚ್ಯುತ್ ಕುಮಾರ್ ಅವರಿಗೆ ಕೂಡಾ ಇದು ಭಿನ್ನ ಪಾತ್ರವೇ. ಅಪ್ಪನಾಗಿ ನಾಗೇಂದ್ರ ಶಾ ತುಂಬಾನೇ ಇಷ್ಟವಾಗುತ್ತಾರೆ. ಕಡಿಮೆ ಮಾತು, ವಿಶಿಷ್ಠ ಅಭಿನಯದಿಂದ ಸೆಳೆಯುತ್ತಾರೆ. ಸಂಯುಕ್ತಾ ಹೆಗಡೆ ಕೂಡಾ ಸುಂದರವಾದ ಪಾತ್ರದಲ್ಲಿ ಅಷ್ಟೇ ಚೆಂದಗೆ ನಟಿಸಿದ್ದಾಳೆ. ಅರುಣಾ ಬಾಲರಾಜ್, ಹಿತಾ ಚಂದ್ರಶೇಖರ್ ಎಲ್ಲರೂ ಇಷ್ಟವಾಗುತ್ತಾರೆ. ರಾಜ್ ಬಿ ಶೆಟ್ಟಿಯವರ ಕ್ಯಾಬ್ ಡ್ರೈವರ್ ಪಾತ್ರದ ಕಲ್ಪನೆ ಮತ್ತು ಅವರ ಅಭಿನಯ ಚಿತ್ರದ ಹೈಲೇಟ್.
ನಿಜಕ್ಕೂ ಹೊಸ ಪ್ರಯತ್ನದ ʻತುರ್ತು ನಿರ್ಗಮನʼ ಮನಸ್ಸಿನಲ್ಲಿ ಉಳಿಯುವ ಚಿತ್ರ.