ಸುಂದರ ಸಮಾರಂಭದಲ್ಲಿ ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗಿ.
ರವೀಂದ್ರನಾಥ ಸಿರಿವರ ನಿರ್ದೇಶನದಲ್ಲಿ ಚಾಲುಕ್ಯರ ಪ್ರಥಮ ರಾಜಧಾನಿ ಎಂದೇ ಖ್ಯಾತವಾಗಿರುವ ಐಹೊಳೆಯ ಚರಿತ್ರೆಯನ್ನು ಸಾರುವ “ಐಹೊಳೆ” ಚಿತ್ರದ ಹಾಡುಗಳು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಸಾಹಿತಿ ಹಾಗೂ ಸಂಗೀತ ನಿರ್ದೇಶಕ ಡಾ||ಹಂಸಲೇಖ, ಲತಾ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್, ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಂಟೊನಿ ದಾಸ್ ಹಾಗೂ ಮಾಜಿ ಶಾಸಕ ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಐದನಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
ಕರ್ನಾಟಕದ ಭವ್ಯ ಪರಂಪರೆಯನ್ನು ಬಿಂಬಿಸುವ, ಚಾಲುಕ್ಯರ ಮೊದಲ ರಾಜಧಾನಿ ಎಂದೇ ಖ್ಯಾತವಾಗಿರುವ ಸ್ಥಳ “ಐಹೊಳೆ”. ಈ ಚಾರಿತ್ರಿಕ ಸ್ಥಳದ ಕುರಿತಾದ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತಹ “ಐಹೊಳೆ” ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಸುಂದರವಾಗಿ ಮೂಡಿಬಂದಿದೆ. ನಾನೇ ಚಿತ್ರವನ್ನು ನಿರ್ದೇಶಿಸಿದ್ದೇನೆ. ಸಿರಿವರ ಕ್ರಿಯೇಷನ್ಸ್ ಅರ್ಪಿಸುವ ಹಾಗೂ ಎಂ.ಕೆ.ಬಿ ಸ್ಟುಡಿಯೋ ಮೂಲಕ ನಾನು ಸೇರಿದಂತೆ ಎಂಟು ಜನ ಮಿತ್ರರು ಚಿತ್ರವನ್ನು ನಿರ್ಮಿಸಿದ್ದೇವೆ. ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ “ಐಹೊಳೆ”ಗಿದೆ. ಮನೋಜ್ ಕುಮಾರ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರದ ಕಥೆಯನ್ನು ಮಂಜುನಾಥ್ ಬರೆದಿದ್ದಾರೆ. ಸಂಭಾಷಣೆ ಶಂಕರ್ ಪಾಗೋಜಿ ಅವರದು. ರೇವಂತ್ ಮಾಳಿಗೆ, ಪ್ರಗತಿ ಸುರ್ವೆ, ಬಿರಾದಾರ್, ಡ್ರಾಮ ಜ್ಯೂನಿಯರ್ ಮಂಜು ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರವಾಸೋದ್ಯಮದ ಕುರಿತಾಗಿರುವ ಈ ಚಿತ್ರದ ಬಗ್ಗೆ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರ ಬಳಿ ಹೇಳಿದಾಗ ತುಂಬಾ ಖುಷಿಪಟ್ಟರು. ಸಮಾರಂಭಕ್ಕೆ ಅವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬರುವುದಕ್ಕೆ ಆಗಿಲ್ಲ. ಶುಭಾಶಯ ತಿಳಿಸಿದ್ದಾರೆ. ಟ್ರೇಲರ್, ಹಾಡುಗಳು ಹಾಗೂ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ನನ್ನ ಧನ್ಯವಾದ ಎಂದರು ರವೀಂದ್ರನಾಥ ಸಿರಿವರ.
ನವೆಂಬರ್ ಕನ್ನಡ ಮಾಸ ಎಂದೇ ಖ್ಯಾತಿ. ಅಂತಹ ಮಾಸದಲ್ಲಿ ಸ್ನೇಹಿತ ರವೀಂದ್ರನಾಥ್ ಸಿರಿವರ ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಭವ್ಯ ಪರಂಪರೆಯನ್ನು ಸಾರುವ, “ಐಹೊಳೆ” ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲಿದ್ದಾರೆ. ನಾನು ಈ ಚಿತ್ರಕ್ಕೆ ಹಾಡುಗಳನ್ನು ಬರೆದು, ಸಂಗೀತ ನೀಡಿದ್ದೀನಿ. “ಐಹೊಳೆ” ಸೇರಿದಂತೆ ಕರ್ನಾಟಕದ ಅನೇಕ ಐತಿಹಾಸಿಕ ಸ್ಥಳಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಿ, ಹೆಚ್ಚಿನ ಜನರು ಅಲ್ಲಿಗೆ ಬರುವ ಹಾಗೆ ಮಾಡಬೇಕೆಂದು ಸರ್ಕಾರವನ್ನು ವಿನಂತಿಸಿಕೊಳ್ಳುತ್ತೇನೆ ಎಂದರು ಹಂಸಲೇಖ.
ಸ್ನೇಹಿತ ರವೀಂದ್ರನಾಥ ದೂರದ ಪ್ರಯಾಣವೊಂದರಲ್ಲಿ ನನಗೆ ಈ ಕಥೆ ಹೇಳಿದರು. ಇಷ್ಟವಾಯಿತು. ಕನ್ನಡ ಹಾಗೂ ರಾಜ್ಯೋತ್ಸವ ಅಂದರೆ ಕೇವಲ ಸಾಹಿತ್ಯ ಮತ್ತು ಪುಸ್ತಕ ಪ್ರಪಂಚ ಅಷ್ಟೇ ಅಲ್ಲ. ಕನ್ನಡದಲ್ಲಿ ಸಾವಿರಾರು ಸಂಗತಿಗಳು ಅಂತರ್ಗತವಾಗಿದೆ. ಅದರಲ್ಲಿ ಶಿಲ್ಪಕಲೆಯೂ ಒಂದು. ಸಾವಿರಾರು ವರ್ಷಗಳ ಐತಿಹ್ಯವಿರುವ “ಐಹೊಳೆ” ಚಿತ್ರವನ್ನು ರವೀಂದ್ರನಾಥ ಸಿರಿವರ ಚೆನ್ನಾಗಿ ಮಾಡಿರುತ್ತಾರೆ ಎಂಬ ಭರವಸೆ ನನಗಿದೆ. ಹಂಸಲೇಖ ಅವರು ಹೇಳಿದಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಐತಿಹಾಸಿಕ ಪ್ರವಾಸಿ ಸ್ಥಳಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ. ಸಾಕಷ್ಟು ಜನರು ಅಲ್ಲಿಗೆ ಬರುವಂತಾಗಲಿ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಮಾಜಿ ಶಾಸಕ ಲಕ್ಷ್ಮೀನಾರಾಯಣ, ಜೀ ವಾಹಿನಿಯ ಆಂಟೊನಿ ದಾಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್ ಸಹ ಚಿತ್ರದ ಕುರಿತು ಮಾತನಾಡಿ, ತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಅಭಿನಯಿಸಿರುವ ಮಂಜು, ರೇವಂತ್ ಮಾಳಿಗೆ ಸೇರಿದಂತೆ ಅನೇಕ ಕಲಾವಿದರು, ನಿರ್ಮಾಪಕರು, ಹಾಡು ಹಾಡಿರುವ ಗುರುಕಿರಣ್, ಅಂಕಿತ ಕುಂಡು ಮತ್ತು ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.