Sugarless 4.0
ಆ ಹುಡುಗ ಅಪ್ಪ-ಅಮ್ಮ ಇಲ್ಲದೆ ಬೆಳೆದವನು. ಎದುರಿಗಿದ್ದವರನ್ನು ತನ್ನ ಮಾತಿನಿಂದಲೇ ಮರುಳು ಮಾಡುವ ವಿಪರೀತ ಲವಲವಿಕೆ ವ್ಯಕ್ತಿತ್ವ. ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಈತನಿಗೆ ಸಹೋದ್ಯೋಗಿ ಹುಡುಗಿ ಜೊತೆಯಾಗುತ್ತಾಳೆ. ತೀರಾ ಕದ್ದು ಮುಚ್ಚಿ ಓಡಾಡುವ ಪ್ರಮೇಯವೇನೂ ಇರೋದಿಲ್ಲ. ಡೈರೆಕ್ಟಾಗಿ ತನ್ನ ಮನೆಗೇ ಕರೆದುಕೊಂಡು ಹೋಗಿ ಪರಿಚಯಿಸುತ್ತಾಳೆ. ಮನೆಯವರು ಕೂಡಾ ಅಕ್ಕರಯಿಂದ ಮಾತಾಡಿ ಕಳಿಸುತ್ತಾರೆ. ಯಾಕೆಂದರೆ, ಇವರು ಸಿಹಿಯನ್ನೇ ತುಂಬಿಕೊಂಡ ʻಸಕ್ಕರೆ ಮನೆʼಯ ಸದಸ್ಯರು!
ಬದುಕಲು ಬೇಕಿರುವ ಬುದ್ದಿವಂತಿಕೆ, ಕೆಲಸದ ಜೊತೆಗೆ ಮದುವೆಯೂ ಆಗುತ್ತದೆ. 28ನೇ ವಯಸ್ಸಿಗೇ ಜೀವನ ಸೆಟ್ಲಾಯ್ತು ಅಂದುಕೊಳ್ಳೋ ಮುಂಚೇನೆ ಡಯಾಬಿಟೀಸು ಬಳುವಳಿಯಾಗಿ ಬಂದಿರುತ್ತದೆ. ತಾನಾಗಿಯೇ ಒಲಿದುಬಂದ ಸಂಬಂಧ, ಮನಸಾರೆ ಇಷ್ಟಪಟ್ಟ ಹುಡುಗಿ ಎಲ್ಲವೂ ಕೈಬಿಟ್ಟುಹೋಗುತ್ತದೆ ಅನ್ನೋ ಭಯದಲ್ಲಿ ಖಾಯಿಲೆಯನ್ನು ಮುಚ್ಚಿಟ್ಟಿದ್ದು ತಪ್ಪಾ? ಅನ್ನೋದು ಎದುರಾಗುವ ಬಹುಮುಖ್ಯ ಪ್ರಶ್ನೆ.
ಇವತ್ತಿನ ಒತ್ತಡದ ಲೈಫಲ್ಲಿ ಶುಗರ್ ಅನ್ನೋದು ಯಾವಾಗ ಯಾರಿಗೆ ಶುರುವಾಗುತ್ತದೋ ಹೇಳಲಿಕ್ಕಾಗುವುದಿಲ್ಲ. ಮೊದಲೆಲ್ಲಾ ಒಂದು ಹಂತದ ವಯಸ್ಸು ಮೀರಿ ಆಯಸ್ಸು ಕರಗಿದ ಮೇಲೆ ಈ ಕಾಯಿಲೆ ಅಟಕಾಯಿಸಿಕೊಳ್ಳುತ್ತದೆ ಅನ್ನೋ ನಂಬಿಕೆ ಇತ್ತು. ಇವತ್ತು ಆಡುವ ಮಕ್ಕಳಿಂದ ಹಿಡಿದ ಅಲ್ಲಾಡುವ ಮುದುಕರ ತನಕ ಯಾರಿಗೆ ಬೇಕಿದ್ದರೂ ಇದು ವಕ್ಕರಿಸಿಕೊಳ್ಳಬಹುದು. ಈ ಸಿಹಿಮೂತ್ರ ರೋಗವನ್ನು ಬರದಂತೆ ನೋಡಿಕೊಂಡು, ಬಂದಮೇಲೆ ಉಲ್ಬಣವಾಗದಂತೆ ಮೇಂಟೇಂನ್ ಮಾಡೋದು ಪ್ರತಿಯೊಬ್ಬರ ಸವಾಲಾಗಿದೆ.
ಹೀಗಿರುವಾಗ ಇಷ್ಟು ಚಟುವಟಿಕೆಯಿಂದಿರುವ, ಸಿಹಿ ಪದಾರ್ಥಗಳನ್ನು ಚಪ್ಪರಿಸಿಕೊಂಡು ತಿನ್ನುವ ಹುಡುಗನಿಗೆ ಡಯಾಬಿಟೀಸ್ ಜೊತೆಯಾಗುತ್ತದೆ. ಇನ್ನು ಸಿಹಿಯಿಂದ ದೂರಬಿದ್ದೇ ಜೀವಿಸಬೇಕು ಅಂದಾಗ ಆಗುವ ಆತನ ಮಾನಸಿಕ ಸ್ಥಿತಿಗಳು, ಸಮಾಜ ಡಯಾಬಿಟೀಸ್ ಬಂದವರನ್ನು ಟ್ರೀಟ್ ಮಾಡುವ ರೀತಿಗಳನ್ನೆಲ್ಲಾ ಶುದ್ಧ ಹಾಸ್ಯದ ಮೂಲಕ ಹೇಳಿರುವ ಚಿತ್ರ ಶುಗರ್ ಲೆಸ್. ಕ್ಷಣ ಕ್ಷಣವೂ ನಗಿಸುತ್ತಲೇ ಭಾವುಕತೆಗೂ ದೂಡುವ ಕಥೆ, ಸಂಭಾಷಣೆ ಇದರಲ್ಲಿದೆ. ಸಂಭಾಷಣೆಕಾರ ದಿ|| ಗುರು ಕಶ್ಯಪ್ ಮೂಡಿಸಿ ಹೋಗಿರುವ ಅಮೂಲ್ಯ ಗುರುತುಗಳಲ್ಲಿ ಶುಗರ್ ಲೆಸ್ ಕೂಡಾ ಸೇರ್ಪಡೆಯಾಗಿದೆ. ʻʻಮಕ್ಕಳು ಅನ್ನಿಸಿಕೊಳ್ಳೋಕೆ ಹೊಟ್ಟೇಲಿ ಹುಟ್ಟಲೇಬೇಕು ಅಂತೇನಿಲ್ಲ. ಎದೆಯಲ್ಲಿ ಪ್ರೀತಿ ಹುಟ್ಟಿದರೂ ಸಾಕುʼʼ ಎನ್ನುವ ಮಾತು ಸಾರ್ವಕಾಲಿಕವಾಗಿ ಜೀವಂತವಾಗಿರಲಿದೆ. ಕಾಮಿಡಿ, ಎಮೋಷನ್ನುಗಳೆಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿರುವ ನಿರ್ದೇಶಕ ಕೆ.ಎಂ. ಶಶಿಧರ್ ಅಚ್ಚುಕಟ್ಟಾದ ಸಿನಿಮಾ ಕಟ್ಟಿದ್ದಾರೆ ಮತ್ತು ಗೆದ್ದಿದ್ದಾರೆ.
ಪೃಥ್ವಿ ಅಂಬಾರ್ ಎಂದಿನಂತೆ ಅಮೋಘವಾಗಿ ಪಾತ್ರ ನಿರ್ವಹಿಸಿದ್ದಾರೆ. ಇಡೀ ಚಿತ್ರದಲ್ಲಿ ಧರ್ಮಣ್ಣ, ನವೀನ್ ಪಡಿಲ್ ಕಾಮಿಡಿ, ದತ್ತಣ್ಣನ ಆಪ್ತತೆ ಸಿಹಿಯಂತೆ ತುಂಬಿಕೊಂಡಿದೆ. ಒಂದೇ ದೃಶ್ಯದಲ್ಲಿ ಬಂದರೂ ಹೊನ್ನವಳ್ಳಿ ಕೃಷ್ಣ ಉಳ್ಳಾಡಿಕೊಂಡು ನಗುವಂತೆ ಮಾಡುತ್ತಾರೆ. ಪ್ರಿಯಾಂಕಾ ತಿಮ್ಮೇಶ್, ಗಿರೀಶ್ ಜತ್ತಿ ಮೊದಲಾದವರು ಚಿತ್ರವನ್ನು ಶುಗರ್ ಪ್ಲಸ್ ಆಗಿಸಿದ್ದಾರೆ! ಮನೆಯಲ್ಲಿ ಇರೋ ಬರೋರೆಲ್ಲರ ಜೊತೆಗೆ, ಒಟ್ಟಾಗಿ ಥೇಟರಿಗೆ ನುಗ್ಗಿ, ನೋಡಬಹುದಾದ ಸಿನಿಮಾ ಇದು. ಮಿಸ್ ಮಾಡ್ಕೋಬೇಡಿ!