Saptha Sagaradaache Ello 4/5
ಸಮುದ್ರದ ತೀರದಲ್ಲೊಂದು ಮನೆ ಕಟ್ಟಿಸಬೇಕು, ಹಾಡುಗಾರ್ತಿಯಾಗಬೇಕು ಅಂತೆಲ್ಲಾ ಬದುಕಿನ ಬಗ್ಗೆ ಕನಸಿಟ್ಟುಕೊಂಡ ಹುಡುಗಿ. ಇವನು ಶ್ರೀಮಂತರ ಮನೆಯ ಕಾರ್ ಡ್ರೈವರ್. ಎದುರಿಗೆ ಇವನಿದ್ದರೇನೆ ವೇದಿಕೆಯಲ್ಲಿದ್ದವಳ ಗಂಟಲಿನಿಂದ ಸ್ವರ ಹೊಮ್ಮೋದು. ಇವನಿಗೂ ಅಷ್ಟೇ ಅವಳೆಂದರೆ ವಿಪರೀತ ಪ್ರೀತಿ. ಭವಿಷ್ಯ ಹೀಗೀಗೇ ಇರಬೇಕು ಅಂತಾ ಬಯಸಿದವನು.
ಡ್ರೈವರ್ ಕೆಲಸ, ಸಣ್ಣ ಸಂಬಳವನ್ನು ನೆಚ್ಚಿಕೊಂಡ ಮಿಡ್ಲ್ ಕ್ಲಾಸ್ ಮಂದಿಯ ಮೆಂಟಾಲಿಟಿ ಬಹುತೇಕ ಹೀಗೇ ಇರತ್ತೆ. ಜೀವಮಾನವಿಡೀ ದುಡಿದರೂ ಬದುಕು ಬದಲಾಗೋದಿಲ್ಲ ಅನ್ನೋದು ಗೊತ್ತಿರುತ್ತದಲ್ಲಾ? ʻʻಸ್ವಲ್ಪ ರಿಸ್ಕಿ ಅನಿಸಿದರೂ ಪರವಾಗಿಲ್ಲ.
ಯಾವುದಾದರೊಂದು ʻದೊಡ್ಡ ಕೆಲಸʼ ಹಿಡಿದು ಕಾಸು ಸಂಪಾದಿಸಬೇಕು.ʼʼ ಎನ್ನುವ ಮನಸ್ಥಿತಿಯೇ ಹೆಚ್ಚು. ಆ ಹೊತ್ತಿನಲ್ಲಿ ಆಯ್ಕೆ ಮಾಡಿಕೊಳ್ಳುವ ʻಆ ಕೆಲಸʼದ ಮೇಲೆ ಅವರ ಜೀವನದ ಮುಂದಿನ ದಿನಗಳು ನಿರ್ಣಯಗೊಂಡಿರುತ್ತವೆ. ಅದು ಆ ವ್ಯಕ್ತಿಯನ್ನು ಬದುಕನ್ನು ಮಹಾ ತಿರುವೊಂದರ ಅಂಚಿಗೆ ನಿಲ್ಲಿಸಲೂಬಹುದು. ಇಲ್ಲಿ ಹೀರೋ ಆಯ್ಕೆ ಮಾಡಿಕೊಳ್ಳುವ ʻಶಾರ್ಟ್ ಕಟ್ʼ ಅವನ ನಸೀಬನ್ನು ಹೇಗೆಲ್ಲಾ ಬದಲಿಸುತ್ತದೆ ಅನ್ನೋದು ʻಸಪ್ತಸಾಗರದಾಜೆ ಎಲ್ಲೋʼ ಚಿತ್ರದ ಒಂದು ಬದಿಯ ಕತೆ…
ಮಧ್ಯಮವರ್ಗದ ಆತಂಕ, ಬಯಕೆಗಳು ಮತ್ತು ಶ್ರೀಮಂತಿಕೆಯ ಆವರಣ, ಅಮಲಿನಲ್ಲಿ ನಡೆಯುವ ಕ್ರೌರ್ಯ, ಪ್ರತಿಷ್ಠೆಗಾಗಿ ನಡೆಯುವ ವ್ಯಾಪಾರ, ಗಾಢವಾಗಿ ಪ್ರೀತಿಸುತ್ತಲೇ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಪ್ರೇಮಿಗಳು, ತೀರಾ ಚಿಕ್ಕ ವಯಸ್ಸಿಗೆ ಗಂಡನನ್ನು ಕಳಕೊಂಡು, ಮಕ್ಕಳಿಗಾಗಿ ತನ್ನೆಲ್ಲಾ ಬಯಕೆಗಳನ್ನು ತ್ಯಾಗ ಮಾಡಿದ ತಾಯಿ, ಕಂಡವರ ಬದುಕನ್ನು ಹಳ್ಳಕ್ಕೆ ನೂಕಿ, ಕಾಸು ಮಾಡಿಕೊಳ್ಳುವ ನೀಚ, ಮಾಡಿದ ಪಾಪಗಳ ನಿವೇದನೆಗಾಗಿ ಬದುಕಿಡೀ ಜೈಲಿನಲ್ಲಿ ನೂಲು ನೇಯಲು ನಿಂತವರು, ಒಂದಾ ಎರಡಾ, ಬದುಕಿನ ಹತ್ತಾರು ಸತ್ಯಗಳನ್ನು ರೂಪಕಗಳ ಮೂಲಕ ತೆರೆದಿಟ್ಟಿರುವ ಚಿತ್ರ ಸಪ್ತಸಾಗರದಾಚೆ ಎಲ್ಲೋ. ತೀರಾ ಸೂಕ್ಷ್ಮ ಬರಹಗಾರ ಮಾತ್ರ, ಇಂಥದ್ದೊಂದು ಕೃತಿಯನ್ನು ದೃಶ್ಯರೂಪದಲ್ಲಿ ಚಿತ್ರಿಸಲು ಸಾಧ್ಯ. ಅದನ್ನು ಸಾಧ್ಯವಾಗಿಸಿರೋದು ನಿರ್ದೇಶಕ ಹೇಮಂತ್ ರಾವ್. ಬಹುಶಃ ಹೇಮಂತ್ ಕಂಡ ಕನಸನ್ನು ಅದ್ವೈತ ಗುರುಮೂರ್ತಿ ಯಥಾವತ್ತಾಗಿ ತೆರೆಗೆ ಅಳವಡಿಸಿದ್ದಾರೆ. ಜೈಲಿನ ಚಿತ್ರಣವಿಲ್ಲಿ ತೀರಾ ನೈಜವೆನ್ನುವಷ್ಟರ ಮಟ್ಟಿಗೆ ತೆರೆದುಕೊಂಡಿದೆ.
ಹಾಗೆ ನೋಡಿದರೆ, ರಕ್ಷಿತ್ ಶೆಟ್ಟಿ ಇಲ್ಲಿ ತಮ್ಮ ಇಮೇಜು ಮರೆತು ಪಾತ್ರವನ್ನು ಒಪ್ಪಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ನಟಿಸಿದ್ದಾರೆ. ಗೋಪಾಲ್ ದೇಶಪಾಂಡೆ, ರಮೇಶ್ ಇಂದಿರಾ ಮತ್ತು ಶರತ್ ಲೋಹಿತಾಶ್ವ ಪಾತ್ರಗಳನ್ನು ಪೋಣಿಸಿರುವ ರೀತಿಯೇ ಚೆಂದ ಚೆಂದ… ಇಡೀ ಸಿನಿಮಾವನ್ನು ನೋಡುಗರ ಎದೆಗಿಳಿಸುವುದು ನಟಿ ರುಕ್ಮಿಣಿ ವಸಂತ್. ಅಬ್ಬಾ… ʻನಟನೆʼ ಅನ್ನೋದರ ಕುರುಹೂ ಸಿಗದಷ್ಟು ಈಕೆ ನೈಜವಾಗಿ ತೊಡಗಿಸಿಕೊಂಡಿದ್ದಾರೆ. ಚರಣ್ ರಾಜ್ ಅವರ ಕಂಟೆಂಪರರಿ ಮ್ಯೂಸಿಕ್ಕು ಹಲವು ಕಡೆ ಸಾಹಿತ್ಯವನ್ನು ನುಂಗಿಕೊಂಡಿದೆ. ಹಿನ್ನೆಲೆ ಸಂಗೀತದಲ್ಲಿ ಫೀಲ್ ಇದೆ.
ಸಪ್ತಸಾಗರದಾಚೆ ನೋಡಿದ ಕೆಲವರಿಗೆ ಸಿನಿಮಾ ನಿಧಾನವಾಯ್ತಾ ಅಂತನ್ನಿಸಬಹುದು. ಆದರೆ, ಇದಕ್ಕಿಂತಾ ವೇಗ ಮಾಡಿದರೆ, ಭಾವನೆಗಳನ್ನು ನೋಡುಗರ ಮನಸ್ಸಿಗಿಳಿಸೋದು ಕಷ್ಟ. ಇಷ್ಟೆಲ್ಲದರ ಹೊರತಾಗಿ, ಕತೆಗೆ ಇನ್ನಷ್ಟು ತಿರುವು ಕೊಡುವ ಸಾಧ್ಯತೆ ಇತ್ತು. ಅದನ್ನು ಬೇಕಂತಲೇ ನಿರ್ದೇಶಕರು ಮರೆತಂತಿದೆ. ಸತ್ತ ವ್ಯಕ್ತಿಯ ಮಗಳ ಪಾತ್ರವನ್ನು ಸ್ವಲ್ಪವೇ ಹಿಗ್ಗಿಸಿದ್ದರೂ ಚಿತ್ರಕ್ಕೆ ಬೇರೆ ಬಣ್ಣ ಬರುತ್ತಿತ್ತು. ಬಹುಶಃ ಮುಂದಿನ ಭಾಗದಲ್ಲಿ ಅವೆಲ್ಲವೂ ಇರಲೂ ಬಹುದು… ಮೊದಲ ಭಾಗ ಕುತೂಹಲ ಹುಟ್ಟಿಸಿದೆ. ʻಬಿʼ ಸೈಡಿನಲ್ಲಿ ಏನೇನಿದೆಯೋ? ಮುಂದೆ ನೋಡೋಣ!