ನಾವು ಇಂದು ಸುಲಲಿತವಾಗಿ ಜೀವನ ನಡೆಸುತ್ತಿರುವುದಕ್ಕೆ ಮುಖ್ಯ ಕಾರಣ ಆರಕ್ಷಕರು. ಅಂತಹ ಆರಕ್ಷಕರಿಗೂ ಒಂದು ಜೀವನವಿದೆ. ಅವರಿಗೂ ಹೆಂಡತಿ, ಮಕ್ಕಳು, ತಂದೆ, ತಾಯಿ ಇದ್ದಾರೆ. ಅವರಿಗಿರುವ ಸಾಕಷ್ಟು ಕಷ್ಟಗಳ ನಡುವೆ, ಕರ್ತವ್ಯನಿಷ್ಠೆಯನ್ನು ಹೇಗೆ ಮಾಡುತ್ತಾರೆ ಎಂಬ ವಿಚಾರವನ್ನು “ಸೆಲ್ಯೂಟ್” ಎಂಬ ಇಪ್ಪತ್ತೇಳು ನಿಮಿಷಗಳ ಕಿರುಚಿತ್ರದ ಮೂಲಕ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ ನಿರ್ದೇಶಕ ತ್ಯಾಗರಾಜ್.
ದೀಪಕ್ ಗೌಡ ನಿರ್ಮಿಸಿರುವ ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಆರಕ್ಷಕರ ಬಗ್ಗೆ ಇಪ್ಪತ್ತೇಳು ನಿಮಿಷಗಳಲ್ಲಿ ಸುಂದರವಾಗಿ ಕಿರುಚಿತ್ರದ ಮೂಲಕ ತೋರಿಸಿರುವ ನಿರ್ದೇಶಕರಿಗೆ ಹಾಗೂ ಇಂತಹ ಕಿರುಚಿತ್ರವನ್ನು ನಿರ್ಮಿಸಿರುವ ದೀಪಕ್ ಗೌಡ ಅವರಿಗೆ ವಂದನೆ. ಕೊರೋನ ಕಾಲದಲ್ಲಿ ಪೊಲೀಸರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಾನು ಆ ಸಮಯದಲ್ಲಿ ಕಾರ್ಯ ನಿರ್ವಹಿಸಿದ್ದೆ. ಅದೇ ಸಮಯದಲ್ಲೇ ನಿವೃತ್ತನಾದೆ. ಒಂದು ಬೇಜಾರಿನ ವಿಚಾರವೆಂದರೆ, ನಾನು ನಿವೃತ್ತನಾಗುವ ದಿವಸ ನಮ್ಮ ಠಾಣೆಯಲ್ಲಿ ನಾನು ಮಾತ್ರ ಇದ್ದೆ. ಬೇರೆ ಯಾರು ಇರಲಿಲ್ಲ. ಈ ರೀತಿ ನಿವೃತ್ತಿಯಾಗಿರುವುದು ನಾನೊಬ್ಬನೆ ಅನಿಸುತ್ತದೆ ಎಂದರು ನಿವೃತ್ತ ಎಸ್.ಪಿ ಉಮೇಶ್.
ಈ ಕಿರುಚಿತ್ರ ನಿರ್ಮಿಸಿರುವ ದೀಪಕ್ ಗೌಡ ಅವರು ನನ್ನ ಅಣ್ಣ. ಅವರು ನನಗೆ ಮಾಡಿರುವ ಸಹಾಯ ಅಪಾರ. ಇನ್ನೂ “ಸೆಲ್ಯೂಟ್” ಕಿರುಚಿತ್ರವನ್ನು ತ್ಯಾಗರಾಜ್ ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನಾನು ಕೂಡ ಎರಡು ವರ್ಷಗಳ ಹಿಂದೆ ಸಮಸ್ಯೆ ಎದುರಿಸಿದೆ. ಅ ಸಮಯದಲ್ಲಿ ಆರಕ್ಷಕರು ಮಾಡಿದ್ದ ಸಹಾಯ ಮರೆಯುವ ಹಾಗಿಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ತಿಳಿಸಿದರು.
ನನಗೆ ಸ್ನೇಹಿತ ಬಾಲಾಜಿ ಯಾದವ್ ಮೂಲಕ ನಿರ್ಮಾಪಕ ದೀಪಕ್ ಗೌಡ ಪರಿಚಯವಾದರು. ಅವರಿಗೆ ಈ ಕಥೆ ಹೇಳಿದೆ. ಇಷ್ಟವಾಯಿತು .ನಿರ್ಮಾಣ ಮಾಡಿದರು. ಅಶ್ವಿನ್ ಹಾಸನ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಆದಿಯಾಗಿ ಎಲ್ಲಾ ತಂತ್ರಜ್ಞರ ಕಾರ್ಯ ವೈಖರಿ ಚೆನ್ನಾಗಿದೆ ಎಂದರು ನಿರ್ದೇಶಕ ತ್ಯಾಗರಾಜನ್. ಈ ಹಿಂದೆ ಎರಡು ಕಿರುಚಿತ್ರಗಳನ್ನು ತ್ಯಾಗರಾಜನ್ ನಿರ್ದೇಶಿಸಿದ್ದಾರೆ. ಕೆಲವು ಪ್ರಶಸ್ತಿಗಳು ಸಹ ಬಂದಿದೆ.
ನಾನು ಉಮಾಪತಿ ಅವರ ನಿರ್ಮಾಣದ “ಹೆಬ್ಬುಲಿ” ಚಿತ್ರದಲ್ಲಿ ಅಭಿನಯಿಸಿದ್ದೆ. ಅಲ್ಲಿ ಅವರು ಕಲಾವಿದರನ್ನು ಗೌರವಿಸುತ್ತಿದ್ದ ರೀತಿ ನೋಡಿ ಸಂತೋಷವಾಗಿತ್ತು. ಈಗ ಅವರ ಸಹೋದರ ದೀಪಕ್ ಗೌಡ ಅವರು ನಿರ್ಮಿಸಿರುವ “ಸೆಲ್ಯೂಟ್” ಕಿರುಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು ನಟ ಅಶ್ವಿನ್ ಹಾಸನ್.
ನಾನು “ಸೆಲ್ಯೂಟ್” ಕಿರುಚಿತ್ರವನ್ನು ನನ್ನ ತಂದೆ ಗೋವಿಂದರಾಜು ಅವರಿಗೆ ಅರ್ಪಿಸುತ್ತಿದ್ದೇನೆ. ಅವರು ಸಹ ಪೊಲೀಸ್ ಅಧಿಕಾರಿಯಾಗಿದ್ದರು. ಈ ಕಿರುಚಿತ್ರವನ್ನು ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ದೀಪಕ್ ಗೌಡ. ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಸಹ “ಸೆಲ್ಯೂಟ್” ಬಗ್ಗೆ ಮಾತನಾಡಿದರು.ಅಜಿತ್ ಎ.ಯು ಛಾಯಾಗ್ರಹಣ, ರವಿ ಸಹ ನಿರ್ದೇಶನ ಹಾಗೂ ಕಿರಣ್ ಅವರ ಸಂಕಲನವಿರುವ ಈ ಕಿರುಚಿತ್ರದಲ್ಲಿ ಅಶ್ವಿನ್ ಹಾಸನ್, ಶ್ರೀನಾಥ್ ಚಿತ್ತಾರ, ನವೀನ್ ಸಾಣೇಹಳ್ಳಿ, ಲೋಕೇಶ್ ಆಚಾರ್, ವಾಣಿಶ್ರೀ ಕುಲಕರ್ಣಿ ಮುಂತಾದವರು ಅಭಿನಯಿಸಿದ್ದಾರೆ.