ತಮಿಳಿನ ಖ್ಯಾತ ನಟಿ ಸಾಯಿಪಲ್ಲವಿ ಅಭಿನಯದ ‘ಗಾರ್ಗಿ’ ಎಂಬ ತಮಿಳು ಚಿತ್ರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ ಎಂದು ಸುದ್ದಿಯಾದಾಗ, ಯಾರೂ ಅಷ್ಟೇನೂ ಆಸಕ್ತಿ ತೋರಿಸಲಿಲ್ಲ. ಏಕೆಂದರೆ, ಹಲವು ಪರಭಾಷೆಯ ಚಿತ್ರಗಳು ಆಗಾಗ ಕನ್ನಡಕ್ಕೆ ಡಬ್ ಆಗುತ್ತಿರುತ್ತವೆ. ಆದರೆ, ಗಾರ್ಗಿ ಚಿತ್ರದ ಹಿಂದೆ ರಕ್ಷಿತ್ ಶೆಟ್ಟಿ ನಿಂತಿದ್ದಾರೆ. ಈ ಚಿತ್ರವನ್ನು ಅವರು ಕನ್ನಡದಲ್ಲಿ ತಮ್ಮ ಪರಂವಾ ಸ್ಟುಡಿಯೋಸ್ ಮೂಲಕ ಅರ್ಪಿಸುತ್ತಿರುವುದಷ್ಟೇ ಅಲ್ಲ, ಅದನ್ನು ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.
‘ಗಾರ್ಗಿ’ ಸಿನಿಮಾ ಜುಲೈ 15ರಂದು ಬಿಡಗುಡೆಯಾಗುತ್ತಿದ್ದು, ಅದಕ್ಕೆ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ವಿಭಿನ್ನ ಹಾಗೂ ಸೂಕ್ಷ್ಮ ಕಥೆಯಿಂದ ಗಮನಸೆಳೆಯುತ್ತಿದೆ. ಇನ್ನೊಂದು ವಿಶೇಷತೆಯೆಂದರೆ, ತಮಿಳು ನಟಿ ಸಾಯಿಪಲ್ಲವಿ ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಡಬ್ ಮಾಡಿರುವುದು.
ಇಷ್ಟಕ್ಕೂ ರಕ್ಷಿತ್ಗೆ ಈ ಚಿತ್ರವನ್ನು ಕನ್ನಡದಲ್ಲಿ ಅರ್ಪಿಸಬೇಕು ಎಂದು ಅನಿಸಿದ್ದು ಏಕೆ? ಈ ಕುರಿತು ಅವರೇ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ನಿರ್ದೇಶಕ ಗೌತಮ್ ರಾಮಚಂದ್ರನ್ ಅವರ ಒಳ್ಳೆಯ ಸ್ನೇಹಿತರಂತೆ. ‘ನಾವು ಭೇಟಿಯಾದಾಗಲೆಲ್ಲ ಸಿನಿಮಾ ಮತ್ತು ಕಥೆಗಳ ಕುರಿತು ಮಾತನಾಡುವುದೇ ಹೆಚ್ಚು. ಗೌತಮ್ ಅವರ ಸಿನಿಮಾ ಪ್ರೀತಿ ಮತ್ತು ಸಿನಿಮಾ ಮೂಡಿ ಬಂದಿರುವ ರೀತಿ, ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತು. ಸಾಯಿಪಲ್ಲವಿ ಈ ಚಿತ್ರದಲ್ಲಿ ಮುಖ್ಯ ಪಾತ್ರ ನಟಿಸಿರುವುದು ಮತ್ತೊಂದು ಕಾರಣ’ ಎಂದಿದ್ದಾರೆ ರಕ್ಷಿತ್.
‘ಗರುಡಗಮನ ವೃಷಭವಾಹನ’ ನಂತರ, ಹೃದಯ ಕದಲಿಸಿದ ಇನ್ನೊಂದು ಸಿನಿಮಾ ಎಂದರೆ ಅದು ‘ಗಾರ್ಗಿ’ ಎನ್ನುವ ರಕ್ಷಿತ್, ‘ಒಟ್ಟಾರೆ ಚಿತ್ರ ನಮ್ಮನ್ನು ಗಾರ್ಗಿಯ ಪ್ರಪಂಚದೊಳಗೆ ಸೆಳೆಯುತ್ತದೆ, ಅವಳ ಧೈರ್ಯ ಮತ್ತು ಹೋರಾಟ ಮನಕಲಕುವಂತೆ ಮಾಡುತ್ತದೆ. ಸಾಯಿಪಲ್ಲವಿ ಅವರು ಗಾರ್ಗಿ ಪಾತ್ರವನ್ನು ಜೀವಿಸಿ ನಿಜ ಜೀವನಕ್ಕೆ ಹತ್ತಿರವಿದೆ ಎನಿಸುವಂತೆ ನಟಿಸಿದ್ದಾರೆ’ ಎನ್ನುತ್ತಾರೆ ರಕ್ಷಿತ್.
‘ನಮ್ಮ ಚಿತ್ರಗಳನ್ನು ನಾವು ಬೇರೆ ಭಾಷೆ ಮತ್ತು ಬೇರೆ ರಾಜ್ಯಗಳಲ್ಲಿ ಬಿಡಗುಡೆ ಮಾಡಲು ಧೈರ್ಯ ಮಾಡುತ್ತಿರುವಾಗ, ಬೇರೆ ಭಾಷೆಯ ಚಿತ್ರಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ, ಗೌತಮ್ ನಮ್ಮ ಬೆಂಗಳೂರಿನವರೇ ಹಾಗೂ ಸಾಯಿಪಲ್ಲವಿ ಸ್ವತಃ ಕನ್ನಡಕ್ಕೆ ಡಬ್ ಮಾಡಿದ್ದಾರೆ. ಇದೆಲ್ಲ ಕಾರಣಗಳಿಗಾಗಿ ಪರಂವಾ ಪಿಕ್ಚರ್ಸ್ ಸಂಸ್ಥೆಯು ಹೆಮ್ಮೆಯಿಂದ ಈ ಚಿತ್ರವನ್ನು ಕನ್ನಡದಲ್ಲಿ ಅರ್ಪಿಸುತ್ತಿದೆ’ ಎಂದಿದ್ದಾರೆ. ‘ಗಾರ್ಗಿ’ ಚಿತ್ರದಲ್ಲಿ ಸಾಯಿಪಲ್ಲವಿ ಜೊತೆಗೆ ಕಾಳಿ ವೆಂಕಟ್, ಐಶ್ವರ್ಯ ಲಕ್ಷ್ಮೀ, ಆರ್.ಎಸ್. ಶಿವಾಜಿ, ಕಲೈಮಾಮಣಿ ಶರವಣನ್ ಮುಂತಾದವರು ನಟಿಸಿದ್ದು, ಗೋವಿಂದ ವಸಂತಾ ಸಂಗೀತ ಸಂಯೋಜಿಸಿದ್ದಾರೆ.