Petromax 3.5/5
ಅವರು ಮೂರು ಜನ ಹುಡುಗರು. ಒಬ್ಬಳು ಹುಡುಗಿ. ಕಸದ ತೊಟ್ಟಿ, ಬಸ್ಸು, ಬೋಗಿ ಇತ್ಯಾದಿ ಜಾಗಗಳಲ್ಲಿ ಸಿಕ್ಕವರು. ಅನಾಥಾಶ್ರಮದಲ್ಲಿ ಒಟ್ಟಿಗೇ ಬೆಳೆದವರು. ಮೂರು ಜನ ಹುಡುಗರೊಂದಿಗೇ ಹೆಚ್ಚು ಒಡನಾಟದ ಕಾರಣಕ್ಕೋ ಏನೋ ಹುಡುಗಿ ಕೂಡಾ ಹುಡುಗನಂತೇ ಮಾತಾಡುತ್ತೆ. ಬಾಯಿತುಂಬ ರತಿ ವಿಜ್ಞಾನವನ್ನೇ ತುಂಬಿಕೊಂಡಿರತ್ತೆ.
ನಾಲ್ಕೂ ಜನ ಬೆಳೆದು ದೊಡ್ಡವರಾಗಿರುತ್ತಾರೆ. ಬದುಕಿಗಾಗಿ ಒಂದೊಂದು ಪ್ರೊಫೆಷನ್ ಆಯ್ಕೆ ಮಾಡಿಕೊಂಡಿರುತ್ತಾರೆ. ಇನ್ನು ಇಲ್ಲಿಂದ ಜಾಗ ಖಾಲಿ ಮಾಡಿ, ನಿಮ್ಮ ಜೀವನ ನೀವು ರೂಪಿಸಿಕೊಳ್ಳಿ ಅಂತಾ ಅನಾಥಾಶ್ರಮದ ಹಿರಿಯರು ಆಜ್ಞೆ ಹೊರಡಿಸುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಚತುರ್ಭುಜಗಳ ಚೇಷ್ಟೆ ಪ್ರಸಂಗಗಳು. ಮೂರು ತುಂಡು ಒಂದು ಚೆಂಡಿನ ಜೊತೆಗೆ ಒಂದು ಬೀಜ ಕೂಡಾ ಸೇರಿಕೊಳ್ಳುತ್ತದೆ!
ಮೂವರು ಹುಡುಗರ ಜೊತೆಗೆ ಒಬ್ಬಳು ಹುಡುಗಿ ಇದ್ದಾಳೆ. ಯಾರಿಗೂ ಮದುವೆ ಕೂಡಾ ಆಗಿಲ್ಲ ಅಂದರೆ ಜಗತ್ತಿನ ಲೆಕ್ಕಾಚಾರವೇ ಬೇರೆ. ಮನೆ ಬಾಡಿಗೆಗೆ ಕೊಡಲು ಯಾರೂ ಒಪ್ಪಲ್ಲ. ಈ ಮನೆ ಹುಡುಕಾಟದಲ್ಲಿ ಮನಸ್ಸಿಗೆ ಹತ್ತಿರವಾಗುವವರು ಸಿಗುತ್ತಾರೆ. ಹೆತ್ತವರನ್ನು ಬಿಟ್ಟು ನಡೆದವರು. ಇದ್ದೂ ಇಲ್ಲದವರು, ಯಾರೂ ಇಲ್ಲದೆಯೂ ಎಲ್ಲ ದಕ್ಕಿಸಿಕೊಂಡವರ ಕತೆ ಇಲ್ಲಿ ತೆರೆದುಕೊಳ್ಳುತ್ತದೆ. ಸಿನಿಮಾ ಆರಂಭದಿಂದ ಮುಗಿಯೋತನಕ ಅವರವರ ಆತ್ಮಕತೆಯನ್ನು ಅವರೇ ನಿರೂಪಿಸಿಕೊಳ್ಳುವ ಶೈಲಿಯಲ್ಲೇ ಸಾಗುತ್ತದೆ. ಬೀಜ, ಬ್ರಾ, ಕಾಯಿ, ಕಾಚ, ಕಾಂಡೋಮ್, ರತಿವಿಜ್ಞಾನದಂಥ ಪದಗಳು ಹೇರಳವಾಗಿ ಬಳಕೆಯಾಗಿದೆ. ಒಂದು ವೇಳೆ ಇದನ್ನು ಯಾರಾದರೂ ಅಶ್ಲೀಲ ಅಂತಾ ಭಾವಿಸಿದರೆ ಕೊನೆಯಲ್ಲಿ ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.
ಪರಮ ಪೋಲಿತನ, ಚೇಷ್ಟೆ ಮಾತುಗಳೊಂದಿಗೆ ಕಾಡುವ ಅಂಶಗಳನ್ನೂ ಸೇರಿಸಿ ಆಡುವ ಬಾಯಿಗೆ ಬೀಗ ಜಡಿಯುವ ತಂತ್ರವನ್ನು ನಿರ್ದೇಶಕ ವಿಜಯ ಪ್ರಸಾದ್ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಇಲ್ಲೂ ಅದನ್ನೇ ಮುಂದುವರೆಸಿದ್ದಾರೆ.
ನೀನಾಸಂ ಸತೀಶ್ ಸಹಜ ನಟ. ಜನ ಇವರನ್ನು ಸಾಮಾನ್ಯ ಜನರ ಪ್ರತಿನಿಧಿ ಎನ್ನುವಂತೆ ಸ್ವೀಕರಿಸಿದ್ದಾರೆ. ಇಲ್ಲಿನ ಪಾತ್ರ ಕೂಡಾ ಅದಕ್ಕೆ ಪೂರಕವಾಗೇ ಇದೆ. ಬೊಂಬೆಗಳ ಲವ್ ಅರುಣ್ ಮತ್ತು ನಾಗಭೂಷಣ್ ಕೂಡಾ ಅಷ್ಟೇ ಲೀಲಾಜಾಲವಾಗಿ ಸಿಕ್ಕ ಪಾತ್ರಗಳನ್ನು ಬಡಿದು ಬಾಯಿಗೆ ಹಾಕಿಕೊಂಡಿದ್ದಾರೆ. ಅದ್ಭುತವಾಗಿ ನಟಿಸಿರುವ ಹರಿಪ್ರಿಯಾ ಕಡೆಯಲ್ಲಿ ಮೈಚಳಿ ಬಿಟ್ಟು ಮಲಗಿದರೆ, ಕಾರುಣ್ಯಾ ರಾಮ್ ಬಾಯಿ ಚಳಿ ಬಿಟ್ಟು ಮಾತಾಡಿದ್ದಾರೆ.
ಪಡ್ಡೆಗಳ ಪಾಲಿಗೆ ಪೆಟ್ರೋಮ್ಯಾಕ್ಸ್ ಸುತ್ತಿಟ್ಟ ಪ್ರೆಸೆಂಟೇಶನ್ ಕವರ್ ಥರಾ ಕಲರ್ ಫುಲ್ಲು. ಬಿಚ್ಚಿ ನೋಡುವ ತವಕ ಇರುವವರೆಲ್ಲಾ ನುಗ್ಗಿ ನೋಡಬಹುದು!