ಶಶಿಕುಮಾರ್ ಅವರ ಮಗ ಅಕ್ಷಿತ್ ಅಭಿನಯದ ಮೊದಲ ಚಿತ್ರ ‘ಸೀತಾಯಣ’ ಕಳೆದ ತಿಂಗಳಷ್ಟೇ ಬಿಡುಗಡೆಯಾಯಿತು. ಈ ಅವರ ಇನ್ನೊಂದು ಚಿತ್ರ ಈ ತಿಂಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಓ ಮೈ ಲವ್’. ಲೆಕ್ಕದ ಪ್ರಕಾರ, ಇದು ಅಕ್ಷಿತ್ ಅಭಿನಯದ ಎರಡನೇ ಚಿತ್ರವಾದರೂ, ಇದೇ ತಮ್ಮ ಮೊದಲ ಚಿತ್ರ ಎಂದು ಹೇಳಿಕೊಳ್ಳುತ್ತಾರೆ ಅಕ್ಷಿತ್.
ಅದಕ್ಕೆ ಕಾರಣವೂ ಇದೆ. ‘ಸೀತಾಯಣ’ ತೆಲುಗಿನಲ್ಲಿ ತಯಾರಾಗಿ ಕನ್ನಡಕ್ಕೆ ಡಬ್ ಆಗಿತ್ತು. ಆದರೆ, ಓ ಮೈ ಲವ್ ನೇರವಾಗಿ ಕನ್ನಡದಲ್ಲೇ ತಯಾರಾಗಿರುವ ಚಿತ್ರ. ಹಾಗಾಗಿ, ಇದೇ ತಮ್ಮ ಮೊದಲ ಚಿತ್ರ ಎಂದು ಹೇಳಿಕೊಳ್ಳುತ್ತಾರೆ ಅಕ್ಷಿತ್.
ವೈಯಕ್ತಿಕವಾಗಿ ತನಗೆ ಇಷ್ಟವಾದ ಸಿನಿಮಾ ಇದು ಎಂದು ‘ಓ ಮೈ ಲವ್’ ಬಗ್ಗೆ ಹೇಳಿಕೊಳ್ಳುತ್ತಾರೆ ಅಕ್ಷಿತ್. ‘ಎಲ್ಲೇ ಹೋದರೂ ಜನರು ಸೇರುತ್ತಿದ್ದರು. ಶಶಿಕುಮಾರ್ ಮಗನೆಂದು ಗುರುತು ಹಿಡಿಯುತ್ತಿದ್ದರು. ಒಟ್ಟಿನಲ್ಲಿ ಓ ಮೈ ಲವ್ ನನಗೆ ಒಳ್ಳೆಯ ವೇದಿಕೆಯಾಗಿದೆ. ಈ ಚಿತ್ರದಲ್ಲಿ ಎಸ್.ನಾರಾಯಣ್ ಸರ್ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತುಕೊಂಡೆ’ ಎನ್ನುತ್ತಾರೆ ಅಕ್ಷಿತ್.
ಎಸ್. ನಾರಾಯಣ್ ಇತ್ತೀಚಿನ ದಿನಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವಾರ ಬಿಡುಗಡೆಯಾದ ‘ಶುಗರ್ಲೆಸ್’, ಅದಕ್ಕೂ ಮುನ್ನ ಬಿಡುಗಡೆಯಾದ ‘ಓಲ್ಡ್ ಮಾಂಕ್’ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಓ ಮೈ ಲವ್’ ಚಿತ್ರದಲ್ಲೂ ಅವರು ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಅವರು, ‘ನನ್ನ ಪಾತ್ರದಲ್ಲಿ ಗಂಭೀರತೆ ಇದೆ. ಶಶಿಕುಮಾರ್ ಮಗನೆಂದು ಅಹಂ ತೋರಿಸದೆ ಅಕ್ಷಿತ್ ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ಹೋದರೆ, ಮುಂದೆ ಉತ್ತಮ ಕಲಾವಿದ ಆಗಬಹುದು. ಏನು ಗೊತ್ತಿಲ್ಲದೆ ಇರೋರು ಚೆನ್ನಾಗಿ ಬೆಳೆಯುತ್ತಾರೆ. ಎಲ್ಲಾ ಗೊತ್ತಿದೆ ಎನ್ನುವವರು ಒಂದು ಹೆಜ್ಜೆನೂ ಮುಂದಕ್ಕೆ ಹೋಗಲಿಕ್ಕೆ ಸಾಧ್ಯವಿಲ್ಲ. ಮಕ್ಕಳು ದಾರಿ ತಪ್ಪದೆ ಇರಲಿ ಎಂದು ಹೇಳುವ ಸಿನಿಮಾ ಇದಾಗಿದೆ’ ಎಂದು ನಾರಾಯಣ್ ಖುಷಿಯಿಂದ ಹೇಳಿಕೊಂಡರು.
ನಿರ್ಮಾಪಕ ರಾಮಾಂಜನಿಗೆ ಚಿಕ್ಕಂದಿನಿಂದಲೂ ನಿರ್ಮಾಣ ಮಾಡುವ ಆಸೆ ಇತ್ತು. ಅದು ಈಗ ಈಡೇರಿದೆಯಂತೆ. ‘ಎಲ್ಲಾ ವ್ಯವಹಾರಗಳಲ್ಲೂ ಸಕ್ಸಸ್ ಕಂಡಿದ್ದೇನೆ. ಕೊನೆಯದಾಗಿ ಸಿನಿಮಾರಂಗಕ್ಕೆ ಬಂದಿದ್ದೇನೆ. ಅಕ್ಷಿತ್‌ಗೆ ಅಪ್ಪನಂತೆ ಹೆಸರು ಬರುತ್ತದೆ’ ಎಂದು ಭವಿಷ್ಯ ನುಡಿಯುತ್ತಾರೆ ಜಿ. ರಾಮಾಂಜನಿ. ಈ ಚಿತ್ರವನ್ನು ನಿರ್ಮಿಸುವುದಷ್ಟೇ ಅಲ್ಲ, ಕಥೆ ಸಹ ಅವರದ್ದೇ.
ಸ್ಮೈಲ್ ಶ್ರೀನು ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಓ ಮೈ ಲವ್’ ಚಿತ್ರದಲ್ಲಿ ಅಕ್ಷಿತ್ಗೆ ನಾಯಕಿಯಾಗಿ ಕೀರ್ತಿ ಕಲ್ಕೆರೆ ನಟಿಸಿದ್ದು, ಮಿಕ್ಕಂತೆ ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ದೇವ್ ಗಿಲ್ ಮುಂತಾದವರು ನಟಿಸಿದ್ದಾರೆ. ಚರಣ್ ಅರ್ಜುನ್ ಸಂಗೀತ ಇರುವ ಈ ಚಿತ್ರ ಜುಲೂ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.