80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸುಪ್ರೀಮ್ ಹೀರೋ ಎಂದೇ ಹೆಸರೇ ಮಾಡಿದ್ದ ಶಶಿಕುಮಾರ್ ಅವರ ಮಗ ಅಕ್ಷಿತ್ ಶಶಿಕುಮಾರ್ ಅಭಿನಯದ ‘ಓ ಮೈ ಲವ್’ ಚಿತ್ರವು ಜುಲೈ 15ರಂದು ರಾಜ್ಯಾದ್ಯಂತ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಅಕ್ಷಿತ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚಿತ್ರ ದೊಡ್ಡ ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆ ಶಶಿಕುಮಾರ್ ತಮ್ಮ ಮಗನಿಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದರಂತೆ. ಚಿತ್ರರಂಗದಲ್ಲಿ ಹೇಗಿರಬೇಕು, ಏನು ಮಾಡಬಾರದು ಎಂಬ ಪಾಠವನ್ನು ಹೇಳಿಕೊಟ್ಟಿದ್ದರಂತೆ. ಅದನ್ನು ಪಾಲಿಸದಿದ್ದರೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ದರಂತೆ. ಇಷ್ಟಕ್ಕೂ ಶಶಿಕುಮಾರ್, ಅಕ್ಷಿತ್ಗೆ ಹೇಳಿಕೊಟ್ಟ ಪಾಠವೇನು? ಇದನ್ನು ಅಕ್ಷಿತ್ ಮಾತುಗಳಲ್ಲೇ ಕೇಳಬೇಕು.
‘ನಮ್ಮ ಚಿತ್ರದಲ್ಲಿ ಎಸ್. ನಾರಾಯಣ್ ಅವರಂಥ ಹಿರಿಯ ನಟರು ನಟಿಸಿದ್ದಾರೆ. ಅವರನ್ನು ನಾನು ತೆರೆಯ ಮೇಲೆ ನೋಡಿದ್ದೆ. ಅವರ ಜತೆಗೆ ಕೆಲಸ ಮಾಡಬೇಕು ಎಂದಾಗ ಕಾಲು ನಡಗುತ್ತಿತ್ತು. ಅವರಿಗೆ ನಮಸ್ಕರಿಸುವುದಕ್ಕೆ ಹೋದಾಗ, ಎಡವಿ ಬಿದ್ದೆ. ಯಾಕೋ ಮಗನೆ, ‘ನನ್ನನ್ನು ನೋಡಿ ಅಷ್ಟು ಭಯವಾಗುತ್ತಿದೆಯಾ?’ ಎಂದು ಕೇಳಿದರು ಅವರು. ಅವರು ಅಷ್ಟು ಜೋವಿಯಲ್ ಅಂತ ಗೊತ್ತಿರಲಿಲ್ಲ. ಎಸ್. ನಾರಾಯಣ್ರಂತಹ ಹಿರಿಯ ನಟರು ನಟನೆ ಮಾಡುವಾಗ ಕ್ಯಾರಾವಾನ್ನಲ್ಲಿ ಕೂತಿದ್ದು ಗೊತ್ತಾದರೆ ಬಂದು ಚಪ್ಪಲಿಯಲ್ಲಿ ಹೊಡೆಯುತ್ತೀನಿ ಎಂದು ನಮ್ಮ ತಂದೆ ಹೇಳಿದ್ದರು. ಹಾಗಾಗಿ, ಅವರು ನಟನೆ ಮಾಡುವಾಗ ಮಾನಿಟರ್ ಮುಂದೆ ಕೂತಿರುತ್ತಿದ್ದೆ. ಅವರು ನಟ, ನಿರ್ದೇಶಕ. ಬಹಳ ಸೀನಿಯರ್. ಅವರಿಂದ ಕಲಿಯುವುದು ಬಹಳ ಇದೆ’ ಎನ್ನುತ್ತಾರೆ ಅಕ್ಷಿತ್.
ಇನ್ನು, ಈ ಕುರಿತು ಮಾತನಾಡುವ ಶಶಿಕುಮಾರ್, ‘ನಾನು ಕಳೆದ ವರ್ಷ ಈ ಚಿತ್ರದ ಮುಹೂರ್ತಕ್ಕೆ ಹೋಗಿದ್ದು ಬಿಟ್ಟರೆ, ಒಂದೇ ಒಂದು ದಿನ ಶೂಟಿಂಗ್ಗೆ ಹೋಗಿರಲಿಲ್ಲ. ಒಂದೇ ಒಂದು ಶಾಟ್ ಸಹ ನಾನು ನೋಡಿಲ್ಲ. ತುಂಬಾ ಕರೆಯುತ್ತಿದ್ದರು. ನಾನು ಹೋಗಲಿಲ್ಲ. ಆದರೆ, ಮಗನಿಗೆ ಒಂದಿಷ್ಟು ವಿಷಯಗಳನ್ನು ಹೇಳಿದ್ದೆ. ಪ್ರಮುಖವಾಗಿ, ನಿರ್ದೇಶಕರ ಮಾತು ಕೇಳು. ಹಿರಿಯರನ್ನು ಅಬ್ಸರ್ವ್ ಮಾಡು. ಶಾಟ್ ಮುಗಿಸಿ ಸುಮ್ಮನೆ ಕೂರುವುದಲ್ಲ. ಅವರೇನು ಮಾಡುತ್ತಾರೆ ಎಂಬುದನ್ನು ನೋಡುತ್ತಿರು. ಅವರನ್ನು ನೋಡಿ ಕಲಿತುಕೋ ಎಂದು ಹೇಳಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಶಶಿಕುಮಾರ್.
ಅದಕ್ಕೆ ಕಾರಣವನ್ನೂ ಅವರೇ ನೀಡುತ್ತಾರೆ. ‘ಕಲಿಕೆ ಎನ್ನುವುದು ಯಾವತ್ತೂ ಮುಗಿಯುವುದಿಲ್ಲ. ಸಾಯುವವರೆಗೂ ನಾವು ಕಲಿಯುತ್ತಲೇ ಇರಬೇಕು. ಅದು ಸಾಗರದಂತೆ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳ ಮೇಲಾಯಿತು. ಇನ್ನೂ ಕಲಿಯುವುದು ತುಂಬಾ ಇದೆ. ಏಳು-ಬೀಳು ಇದ್ದೇ ಇರುತ್ತದೆ. ನನಗೆ ಕೊಟ್ಟ ಸಹಕಾರ-ಪ್ರೋತ್ಸಾಹಗಳನ್ನು ನನ್ನ ಮಗನಿಗೂ ಕೊಡಿ’ ಎನ್ನುತ್ತಾರೆ ಶಶಿಕುಮಾರ್.
‘ಓ ಮೈ ಲವ್’ ಚಿತ್ರವನ್ನು ಜಿಸಿಬಿ ಕ್ರಿಯೇಷನ್ಸ್ನಡಿ ರಾಮಾಂಜನಿ ಎನ್ನುವವರು ಕಥೆ ಬರೆದು ನಿರ್ಮಿಸಿದ್ದಾರೆ. ಸ್ಮೈಲ್ ಶ್ರೀನು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಕ್ಷಿತ್, ಕೀರ್ತಿ, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮುಂತಾದವರು ನಟಿಸಿದ್ದಾರೆ.