ಪ್ರಥಮ್ ಪಾಲಿಗೆ ʻಇರು. ಇಲ್ಲಾಂದ್ರೆ ಎದ್ನಡಿʼ ಎನ್ನುವಂತಾ ಪರಿಸ್ಥಿತಿ ಎದುರಾಗಿದೆ. ನಟ ಭಯಂಕರ ಎನ್ನುವ ಸಿನಿಮಾ ರೂಪಿಸಿ, ತೆರೆಗೆ ತರೋತನಕ ಪ್ರಥಮ್ ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ಸಿನಿಮಾ ಆರಂಭಿಸಿದ ಹೊತ್ತಿಗೇ ಕೋವಿಡ್ಡು ಕೋವಿಯಲ್ಲಿ ತಿವಿದಿತ್ತು. ನಂತರ ಚಿತ್ರವನ್ನು ಕಂಪ್ಲೀಟ್ ಮಾಡಲು ಹರಸಾಹಸ ಪಟ್ಟರು. ಎಲ್ಲೆಲ್ಲಿಂದಲೋ ದುಡ್ಡು ಹೊಂಚಿ ತಂದು ಸಿನಿಮಾ ಮುಗಿಸಿದರು.
ಬಿಗ್ ಬಾಸು ಸೇರಿದಂತೆ ಇತ್ಯಾದಿ ಶೋಗಳಲ್ಲಿ ಪ್ರಥಮನನ್ನು ನೋಡಿದ ಜನ ಭಾವಿಸಿರೋದಕ್ಕೂ ಇವರ ಒರಿಜಿನಲ್ ವ್ಯಕ್ತಿತ್ವಕ್ಕೂ ತುಂಬಾನೇ ಡಿಫರೆನ್ಸ್ ಇದೆ. ಕ್ಯಾಮೆರಾ ನೋಡಿದೇಟಿಗೆ ಬಡಬಡ ಮಾತಾಡುವ ಪ್ರಥಮ್ ವಾಸ್ತವವಾಗಿ ಗಂಭೀರವಾಗಿ ಚಿಂತಿಸುವ, ದೂರಾಲೋಚನೆಯ ಮನುಷ್ಯ. ಮೇಲ್ನೋಟಕ್ಕೆ ಗಮನಿಸಿದವರು ʻಪೆಕರ, ಬಕರಾʼ ಅಂತೆಲ್ಲಾ ಲೇವಡಿ ಮಾಡುವುದಿದೆ. ಆದರೆ, ಯಾವ ಕಾರಣಕ್ಕೂ ಪ್ರಥಮ್ ಹಾಗಲ್ಲ. ವಿಪರೀತ ಜ್ಞಾಪಕ ಶಕ್ತಿಯಿರುವ ವ್ಯಕ್ತಿ. ಕಳೆದ ಜನ್ಮದಲ್ಲಿ ಯಾರಾದರೂ ಆಡಿದ ಮಾತನ್ನು ಈ ಜನ್ಮದಲ್ಲೂ ನೆನಪಿಟ್ಟುಕೊಳ್ಳುವ ಜಾಣ. ʻನಾನು ಹೀಗಿದ್ದರೇನೆ ಜನ ಇಷ್ಟಪಡೋದು.ʼ ಎನ್ನುವ ತಪ್ಪು ಕಲ್ಪನೆ ಅಥವಾ ಮಾರ್ಕೆಟಿಂಗ್ ಸ್ಟಾಟರ್ಜಿಯಿಂದಲೋ ಪ್ರಥಮ್ ಲೋಕದ ಕಣ್ಣಿಗೆ ಬೇರೆಯದ್ದೇ ಬಗೆಯಲ್ಲಿ ಅನಾವರಣಗೊಳ್ಳುತ್ತಿದ್ದಾರೆ.
ಮೊದಲೆಲ್ಲಾ ಪ್ರಚಾರವೊಂದರಿಂದಲೇ ಎಲ್ಲವನ್ನೂ ಸಾಧಿಸಬಲ್ಲೆ ಎನ್ನುವ ರೀತಿ ವರ್ತಿಸುತ್ತಿದ್ದ ಈ ನಟ ಭಯಂಕರ ಕ್ರಮೇಣ ಸಾಕಷ್ಟು ಬದಲಾಗಿದ್ದಾರೆ. ಇವತ್ತಿಗೂ ಪ್ರಥಮ್ ಸಿನಿಮಾ ಮಾಡುವುದಾದರೆ ದುಡ್ಡು ಹಾಕೋರು ಸಾಕಷ್ಟು ಜನ ಇದ್ದಾರೆ. ಆದರೆ ಈ ಸಲ ನೀಲೇಶ್ ಮತ್ತು ವಿಜಯೇಂದ್ರ ಒಡೆಯರ್ ಜೊತೆ ಸೇರಿ ಸಿನಿಮಾ ಆರಂಭಿಸಿದರು. ನಟ ಭಯಂಕರ ಅಂದುಕೊಂಡಿದ್ದಕ್ಕಿಂತಾ ಹೆಚ್ಚು ದುಡ್ಡು ತಿಂದುಬಿಟ್ಟ. ಗ್ರಾಫಿಕ್ಸ್ ಕೆಲಸಕ್ಕೇ ಸಿಕ್ಕಾಪಟ್ಟೆ ಖರ್ಚಾಯ್ತು. ಸಿನಿಮಾವೊಂದಕ್ಕೆ ಪ್ರಥಮ್ ಪಡುತ್ತಿರುವ ಪಾಡು ಕಂಡು ಧ್ರುವಾ ಸರ್ಜಾ ಸಹಾಯ ಹಸ್ತ ಚಾಚಿದರು. ತಮ್ಮ ಕೈಯಿಂದ ಇಪ್ಪತ್ತು ಲಕ್ಷ ರುಪಾಯಿ ಕೊಟ್ಟು ಸಿನಿಮಾದ ಪಬ್ಲಿಸಿಟಿ ಇತ್ಯಾದಿಗಳನ್ನು ಧೃವ ನೆರವೇರಿಸಿದ್ದಾರೆ.ಸ್ವತಃ ಧೃವಾ ಬಂದು ಬೆನ್ನಿಗೆ ನಿಂತಿದ್ದಾರೆ ಅಂದರೆ, ನಟ ಭಯಂಕರ ಸಿನಿಮಾ ಒಂದು ಮಟ್ಟಕ್ಕೆ ಗುಣಮಟ್ಟ ಹೊಂದಿರುತ್ತದೆ ಅಂತಾ ತಾನೆ ಅರ್ಥ. ಎಲ್ಲದರ ಜೊತೆಗೆ ಸದ್ಯ ಪ್ರಥಮನ ನಟ ಭಯಂಕರನಿಗೆ ಯಾವ ಪ್ರತಿಸ್ಪರ್ಧಿಯೂ ಇಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ಡಿನ ಸಿನಿಮಾಗಳು ಎರಡು ವಾರಕ್ಕೆ ಮುನ್ನವೇ ಬಂದು ಹೋಗಿವೆ. ದರ್ಶನ್ ಅವರ ಕ್ರಾಂತಿ ಕೂಡಾ ಕಳೆದವಾರವೇ ಪ್ರದರ್ಶನ ಕಂಡಿದೆ. ಹೀಗಿರುವಾಗ ಈ ವಾರ ಯಾವ ದೊಡ್ಡ ಎದುರಾಳಿ ಸಿನಿಮಾಗಳೂ ನಟ ಭಯಂಕರನ ಜೊತೆಗೆ ಬರುತ್ತಿಲ್ಲ. ಸದ್ಯ ಜನ ನಾನಾ ರೀತಿಯ ಸಿನಿಮಾಗಳನ್ನು ನೋಡಿ ಸುಸ್ತಾಗಿದ್ದಾರೆ. ಈಗ ಮಾನಸಿಕ ನೆಮ್ಮದಿಗಾಗಿ ಅಪ್ಪಟ ಮನರಂಜನೆಯ ಸಿನಿಮಾವೊಂದರ ಅಗತ್ಯವಿದೆ. ಕಾಮಿಡಿ ಮತ್ತು ಹಾರರ್ ಹಂದರವನ್ನು ಒಂದೇ ಗುಕ್ಕಿಗೆ ಹಿಡಿದಿಟ್ಟಿದ್ದಾರೆ. ರಿಲೀಸಾಗಿರುವ ಟ್ರೇಲರ್, ಸದ್ಯದ ಪ್ರಚಾರದ ಭರಾಟೆ ನೋಡಿದರೆ ಈ ನಟ ಭಯಂಕರವಾಗಿ ಸೌಂಡು ಮಾಡುವ ಲಕ್ಷಣಗಳು ಕಾಣುತ್ತಿವೆ….!