Nano Narayanappa 3/5
ಅದು ವೃದ್ಧ ಜೋಡಿ. ಮಕ್ಕಳಿಲ್ಲ ಅನ್ನೋದು ಆಕೆಯ ಕೊರಗು. ಆದರೆ ಹೆಂಡತಿಯನ್ನು ಮಗುವಿನಂತೆ ಪೊರೆಯುವ ಗುಣ ಗಂಡನದ್ದು. ಹೆಂಡತಿ ಆರೋಗ್ಯ ಸರಿ ಹೋಗುತ್ತಿದ್ದಂತೇ ತನ್ನ ನ್ಯಾನೋ ಕಾರಿನಲ್ಲಿ ತಿರುಗಾಡಿಸಬೇಕು ಅನ್ನೋದು ನಾರಾಯಣಪ್ಪನ ಬಯಕೆ. ತೀವ್ರ ಅನಾರೋಗ್ಯಕ್ಕೀಡಾದ ನಿಂಗಮ್ಮನಿಗೆ ಆಪರೇಷನ್ ಮಾಡಲೇಬೇಕು ಅನ್ನೋದು ವೈದ್ಯರ ಸಲಹೆ. ಆ ಶಸ್ತ್ರ ಚಿಕಿತ್ಸೆಗೆ ಬೇಕಾದ ಮೊತ್ತ ಬರೋಬ್ಬರಿ ೨೦ ಲಕ್ಷ ರುಪಾಯಿಗಳು.
ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಮುದುಕನಿಗೆ ಇದ್ದಕ್ಕಿಂದ್ದಂತೆ ಇಪ್ಪತ್ತು ಲಕ್ಷ ರುಪಾಯಿಗಳನ್ನು ಯಾರು ತಾನೆ ಕೊಟ್ಟಾರು? ಆದರೂ ಮುದುಕ ಧೈರ್ಯಗೆಡುವುದಿಲ್ಲ. ಇಷ್ಟು ಹಣವನ್ನು ಹೊಂಚಲು ಸಾಧ್ಯವಿಲ್ಲ ಅಂತಾ ಕೈ ಚೆಲ್ಲಿ ಕೂರುವುದಿಲ್ಲ. ಅವನ ಮುಂದಿರುವ ಗುರಿ ಒಂದೇ. ಹಣ ಹೊಂದಿಸಬೇಕು; ತನ್ನ ಪತ್ನಿಯನ್ನು ಬದುಕಿಸಿಕೊಳ್ಳಬೇಕು…
ಇದಕ್ಕಾಗಿ ನ್ಯಾನೋ ನಾರಾಯಣಪ್ಪ ಏನೇನು ಮಾಡುತ್ತಾನೆ ಅನ್ನೋದು ಚಿತ್ರದಲ್ಲಿ ತೆರೆದುಕೊಳ್ಳುವ ಕುತೂಹಲಕಾರಿ ಘಟ್ಟ. ಈ ಸಿನಿಮಾದಲ್ಲಿ ನಾರಾಯಣಪ್ಪ, ಪತ್ನಿ ಮೇಲೆ ಅವನಿಟ್ಟ ಪ್ರೀತಿ ಇವಿಷ್ಟೇ ಇಲ್ಲ. ಪ್ರೀತಿಸಿ ಮದುವೆಯಾಗಿ ಪರಸ್ಪರ ಬಡಿದಾಡಿಕೊಳ್ಳುವ ಯುವ ಜೋಡಿ, ಹೇಗಾದರೂ ಮಾಡಿ ಹಣ ಸಂಪಾದಿಸಬೇಕು ಅಂತಾ ನಿಂತವರು. ಡಬ್ಲಿಂಗ್, ರೈಸ್ ಪುಲ್ಲಿಂಗ್, ಡಬಲ್ ಇಂಜಿನ್, ನಕ್ಷತ್ರ ಆಮೆ ಮುಂತಾದ ಮೂಢ ನಂಬಿಕೆ ಮುಂತಾದ ದಂಧೆಯನ್ನೂ ತೆರೆದಿಟ್ಟಿದ್ದಾರೆ. ಅಡ್ಡಕಸುಬಿನಲ್ಲಿ ಅನಾಮತ್ತಾಗಿ ದುಡ್ಡು ಮಾಡಿದವನ ದುರಾಸೆ, ವಾಂಛೆ, ಅವನನ್ನು ಬಳಸಿಕೊಂಡು ಡೀಲು ಕುದುರಿಸುವ ಮಾಂತ್ರಿಕ ಜ್ಯೋತಿಷಿ, ಅವನ ನೆಟ್ ವರ್ಕಲ್ಲೊಬ್ಬ ಆಟೋ ಡ್ರೈವರ್, ಜೂನಿಯರ್ ಆರ್ಟಿಸ್ಟ್… ಹೀಗೆ ನಾಲ್ಕಾರು ಪಾತ್ರಗಳಿಗೆ ಒಂದಕ್ಕೊಂದು ಲಿಂಕ್ ಮಾಡಿ ತುಂಬಾ ಒಪ್ಪವಾದ ಅಷ್ಟೇ ಸರಳವಾಗಿ ಅರ್ಥವಾಗಬಲ್ಲ ಸಿನಿಮಾ ಕೊಟ್ಟಿದ್ದಾರೆ ನಿರ್ದೇಶಕ ಕುಮಾರ್. ಈ ಹಿಂದೆ ಕೆಮಿಸ್ಟ್ರ್ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಮುಂತಾದ ಚಿತ್ರಗಳನ್ನು ನೀಡಿರುವ ಡೈರೆಕ್ಟರ್ ಕುಮಾರ್ ಎಲ್. ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಬದುಕನ್ನೇ ಕುಮಾರ್ ತಮ್ಮ ಚಿತ್ರಗಳ ಕಥಾವಸ್ತುವಾಗಿಸುತ್ತಾರೆ. ಮೇಕಿಂಗ್, ಅದ್ಧೂರಿತನಗಳಿಗಿಂತಾ ಕಂಟೆಂಟ್ ಮುಖ್ಯ ಅನ್ನೋದನ್ನು ಪದೇ ಪದೇ ಸಾಬೀತು ಮಾಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನ್ಯಾನೋ ನಾರಾಯಣಪ್ಪ ಕೂಡಾ ನೋಡುಗರಿಗೆ ಆಪ್ತವೆನಿಸುವ ಕಥಾವಸ್ತುವನ್ನು ಹೊಂದಿದೆ. ನ್ಯಾನೋ ನಾರಾಯಣಪ್ಪ ರಂಜಿಸುವುದರೊಂದಿಗೆ ಕಾಡುವ ವಿಚಾರಗಳನ್ನು ಒಳಗೊಂಡಿದೆ.
ದೊಡ್ಡ ಸಿನಿಮಾಗಳಲ್ಲಿ ಸಣ್ಣ ಪುಟ್ಟ ರೋಲುಗಳಲ್ಲಿ ಕಾಣಿಸಿಕೊಳ್ಳುವ ನಟರಿಗೆ ಇಲ್ಲಿ ಪ್ರಧಾನ ಪಾತ್ರಗಳನ್ನು ನೀಡಲಾಗಿದೆ. ಕೆ.ಜಿ.ಎಫ್ ಚಿತ್ರದ ಮೂಲಕ ಫೇಮಸ್ ಆದ ತಾತನನ್ನು ಅದೇ ಪಾತ್ರದ ಮೂಲಕ ಪರಿಚಯಿಸಿ, ಅವನ ನಿಜ ಬದುಕಿನಂತೆ ಚಿತ್ರ ರೂಪುಗೊಂಡಿದೆ. ಕಿಂಗ್ ಮೋಹನ್ ಮತ್ತು ಶೈಲೇಶ್ ಅವರಿಗೆ ಗುರುತಿಸಿಕೊಳ್ಳುವ ಪಾತ್ರ ಇದರಲ್ಲಿ ಸಿಕ್ಕಿದೆ. ಇಬ್ಬರೂ ಅಷ್ಟೇ ಚೆಂದಗೆ ನಟಿಸಿದ್ದಾರೆ ಕೂಡಾ. ಪುಟ್ಟ ಆಕಾರದ ಅನಂತಪದ್ಮನಾಭ ಅಪಾರವಾಗಿ ಸ್ಕೋರ್ ಮಾಡಿಕೊಂಡಿದ್ದಾರೆ. ಇನ್ನು ಕಾಕ್ರೋಚ್ ಸುಧಿ, ಡುಮ್ಮ ಗಿರಿ, ಅನಿಲ್ ಯಾದವ್ ಮೊದಲಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕುಮಾರ್ ಸಿನಿಮಾಗಳ ನಿಲಯದ ಕಲಾವಿದೆಯಂತಿರುವ ಅಪೂರ್ವ ಅಲ್ಲಲ್ಲಿ ಬಂದು ಪಾತ್ರಗಳಿಗೆ ಕೊಂಡಿಯಂತೆ ಕೆಲಸ ಮಾಡುತ್ತಾರೆ. ಒಟ್ಟಾರೆಯಾಗಿ ನ್ಯಾನೋ ನಾಯಾಯಣಪ್ಪ ಚಿತ್ರವನ್ನು ಯಾವ ಮುಜುಗರವೂ ಇಲ್ಲದೆ ಒಮ್ಮೆ ಕೂತು ನೋಡಬಹುದು….