ಮನೋಜವಂ ಆತ್ರೇಯ ಹಾಡಿನ ಮೋಡಿಗೆ ಮನಸೋತ ಸಭಿಕರು.
ಕಳೆದ 24 ರಂದು ಡಾ||ರಾಜ್ ಜನ್ಮದಿನ. ಇದರ ಸವಿನೆನಪಿಗಾಗಿ “ಸರಿಗಮಪ” ಖ್ಯಾತಿಯ ಮರಿ ಅಣ್ಣವ್ರು ಅಂತಲೇ ಕರೆಸಿಕೊಳ್ಳುವ ಮನೋಜವಂ ಆತ್ರೇಯ, ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ “ಮೈ ನೇಮ್ ಇಸ್ ರಾಜ್” ಎಂಬ ಹೆಸರಿನ ಸಂಗೀತ ಸಂಜೆ ಏರ್ಪಡಿಸಿದರು.
ಮರಳೇಮಠದ ಶ್ರೀಗಳು ಸೇರಿದಂತೆ ಅನೇಕ ಸ್ವಾಮಿಗಳು, ರಾಜಕುಮಾರ್ ಅವರ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿ, ಅವರ ಒಡನಾಡಿಯಾಗಿದ್ದ ಹಿರಿಯ ನಿರ್ದೇಶಕ ಭಗವಾನ್, ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ, ಸಂಗೀತ ನಿರ್ದೇಶಕ ಸಾಧುಕೋಕಿಲ, ನಟರಾದ ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತ ಸೇರಿದಂತೆ ಸಾಕಷ್ಟು ಜನ ಗಣ್ಯರು ಹಾಗೂ ಅಪಾರ ಸಂಖ್ಯೆಯ ಸಭಿಕರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ಮೇಘನಾ ಹಾಗೂ ಅನುರಾಧ ಭಟ್ ಅವರ ಗಾಯನದಲ್ಲಿ ತೆರೆದಿದೆ ಮನೆ ಓ ಬಾ ಅತಿಥಿ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ ಅವರು ಹಾಡಿರುವ ಮಾಣಿಕ್ಯವೀಣಾ, ನಾ ನಿನ್ನ ಆಸೆ ಕಂಡು,ನಿನ್ನ ಕಂಗಳ ಬಿಸಿಯ ಹನಿಗಳು, ನಾದಮಯ, ಹೃದಯ ಸಮುದ್ರ ಕಲುಕಿ ಸೇರಿದಂತೆ ಜನಪ್ರಿಯ ಹಾಡುಗಳನ್ನು ಮನೋಜವಂ ಆತ್ರೇಯ ಆಯಾ ಹಾಡಿನ ವೇಷಭೂಷಣ ಧರಿಸಿ ಹೇಳುತ್ತಿದ್ದಾಗ ಅಲ್ಲಿದವರ ಆನಂದಕ್ಕೆ ಪಾರವೇ ಇರಲಿಲ್ಲ.
ಮನೋಜವಂ ಅಣ್ಣವ್ರ ಅದ್ಭುತ ಹಾಡುಗಳನ್ನು ಹಾಡುವುದರ ಮೂಲಕ ಎಲ್ಲರನ್ನೂ ಬೇರೊಂದು ಲೋಕಕ್ಕೆ ಕರೆದೊಯ್ದರು.
ಈ ಕಾರ್ಯಕ್ರಮದಿಂದ ಬಂದ ಹಣವನ್ನು ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿರುವ “ನವಚೇತನ” ಸಂಸ್ಥೆಗೆ ನೀಡುತ್ತಿರುವುದಾಗಿ ಮನೋಜವಂ ಹೇಳಿದರು. ಅಲ್ಲಿನ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನೆರೆದಿದ್ದ ಅತಿಥಿಗಳು ಡಾ||ರಾಜ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು, ಮನೋಜವಂ ಆತ್ರೇಯ ಅವರ ಗಾಯನ ಹಾಗೂ ಆಯೋಜಿಸಿರುವ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.