ಯಾರನ್ನೂ ಹೊರಗಿನಿಂದ ನೀನು ಅಳೆಯಲಾರೇ.. ಯಾರ ಒಳಗೂ ನೀ ಇಳಿದು ನೋಡಲಾರೆ,, ನಿನಗೆ ದಕ್ಕಿದ್ದು ಅಷ್ಟೇ, ಅದು ಪೂರ್ಣವಲ್ಲ ಈ ಸಾಲುಗಳಿಗೆ ಈ ಸಂದರ್ಭ ಸೂಕ್ತವಾಗಿದೆ.
ರಾಯನ್ ಸರ್ಕಲ್ಲಿನಲ್ಲಿ ಇದ್ದ ಆಸ್ಪತ್ರೆಯೊಂದರಲ್ಲಿ ಚಿತ್ರೀಕರಣದ ನಿಮಿತ್ತ ಸೇರಿದ್ದೆವು. ಮಟ ಮಟ ಮಧ್ಯಾಹ್ನದ ಉರಿ ಬಿಸಿಲು ಹೊರಗೆ ಇತ್ತೇನೋ ನನಗೆ ಗೊತ್ತಿಲ್ಲ, ನಾನು ತಂಪಾಗಿ ವಾರ್ಡ ಒಂದರಲ್ಲಿ ಇದ್ದೆ.
ಅದೇ ಬಿಸಿಲಿನಲ್ಲಿ ಬಂದಿರಬೇಕು, ಬಿರುಸಾಗಿ ಬಂದವರೇ ಹಾಯ್ ಎನ್ನುತ್ತ ಒಳಗೆ ಬಂದದ್ದು ಮಮತಾ ರಾಹುತ್. ಅದು ನಮ್ಮಿಬ್ಬರ ಮೊದಲ ಭೇಟಿ, ಮುಖಾ ಮುಖಿಯಾಗಿ. ಆದರೆ ಜಂಗಮ ವಾಣಿಯಲ್ಲಿ ಈ ಮೊದಲೇ ಪರಿಚಿತರು, ಆದರೂ ನನ್ನ ಬಗ್ಗೆ ಅವರಿಗಾಗಲಿ, ಅವರ ಬಗ್ಗೆ ನನಗಾಗಲಿ ಹೆಚ್ಚು ಗೊತ್ತಿರಲಿಲ್ಲ.
ಒಂದಷ್ಟು ಕೆಲಸ ಆಗಲೇ ಮುಗಿದಿತ್ತು. ಅಂದಿನ ದಿನದ ಚಿತ್ರೀಕರಣದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಲು ಇವರು ರೆಡಿಯಾಗಿ ಬಂದರು. ಅಲ್ಲೊಂದು ಸಣ್ಣ ಪರಿವರ್ತನೆಯ ಬಗ್ಗೆ ನಾನು ಅವರಿಗೆ ಸೂಕ್ಷ್ಮ ವಾಗಿಯೇ ಹೇಳಿದೆ. ಅದು ಅವರಿಗೆ ಇರಿಸು ಮುರುಸೂ ಆಗಿತೇನೊ, ಶಿವು ನಿಮಗೆ ಹೇಗೆ ಬೇಕು ಹೇಳಿ ನಿಮಗೆ ಬೇಕಾದ ವೇರೈಟಿಯಲ್ಲಿ ಕೊಡುತ್ತೇನೆ ಎಂದರು.
ನಾನು ನಿರ್ದೇಶಕನಾದಾರು ಅಂದು DOP ಕುರ್ಚಿಯಲ್ಲಿ ಕುಳಿತಿದ್ದೆ, ಅದಕ್ಕೆ ಕಾರಣ ನಾನು ಆ ಸಿನಿಮಾದಲ್ಲಿ ವಹಿಸಿದ್ದ ಸ್ಥಾನ ಅದೇ ಆಗಿತ್ತು. ಆದ ಕಾರಣ ನಾನು ಕುಳಿತಿದ್ದ ಕುರ್ಚಿಯನ್ನು ಸರಿ ಪಡಿಸಿಕೊಂಡು ಕುಳಿತೆ. ಆ ದಿನದ ಕೆಲಸ ಬೆಳಗ್ಗೆ ನಾಲ್ಕು ಗಂಟೆಯ ವರೆಗೂ ಮುಂದುವರೆಯಿತು, ಅಂದು ಅವರ ಅಭಿನಯ ನೋಡಿದೆನಾದರು, ಪರಸ್ಪರ ಮಾತನಾಡಲು ಯಾರಿಗೂ ಸಮಯವಿರಲಿಲ್ಲ.
ಆ ನಂತರ ಮತ್ತೊಂದು ದಿನ ಚರ್ಚ್ ಒಂದರಲ್ಲಿ ಚಿತ್ರೀಕರಣ ನಡೆದಿತ್ತು, ಅಲ್ಲಿಗೆ ಮತ್ತೊಬ್ಬರು ಹಿರಿಯ ಕಾಲಾವಿದರು ಬಂದಿದ್ದರು. ಅವರ ಬಗ್ಗೆ ಮುಂದೆ ಹೇಳುತ್ತೇನೆ. ಆ ದಿವಸ ಹೆಚ್ಚಿನ ಕೆಲಸ ಇರದ ಕಾರಣ ಮಂದಗತಿಯಲ್ಲಿ ಕೆಲಸ ನಡೆದಿತ್ತು. ಕುಳಿತು ಹಾಗೇ ಮಾತಾಡುವಾಗ ಪರಸ್ಪರ ಪರಿಚಯಕ್ಕೆ ಇಳಿದೆವು. ಊರು ಕೇರಿ ಈ ಹಿಂದೆ ನಡೆದ ಸಿನಿಮಾಗಳ ಬಗ್ಗೆ, ಮಾತ ಮುಂದುವರೆದವು.
ನಾನು ಮೊದಲಿಗೆ ಅಂದುಕೊಂಡದ್ದು ಆಕಿ ಹೊಸಬರು ಇರಬೇಕು ಎಂದು. ಆದರೆ ಅವರು ಬಾಲ ನಟಿಯಾಗಿ ಗಾಂಧಿನಗರವನ್ನು ನೋಡ ಬಂದವರು ಎಂಬುದು ಆಗಷ್ಟೇ ತಿಳಿಯಿತು. ಹತ್ತಾರು ವರ್ಷಗಳ ಸಿನಿಮಾ ಜರ್ನಿ ಮುಗಿಸಿದ್ದ ಅನುಭವ ಹೇಳಿದರು. ಅದರಲ್ಲಿ ನನಗೊಂದು ವಿಶೇಷತೆ ಅನಿಸಿತು.
PRO ನಾಗೇ0ದ್ರ ಅವರ ಪರಿಚಯ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ, ಅವರು ಇಂಡಸ್ಟ್ರಿಯ ಹಳೇ ತಲೆ. ಅಳಬರಿಂದ ಹೊಸಬರ ವರೆಗೂ ಎಲ್ಲರ ಸಂಪರ್ಕಕ್ಕೆ ಸಿಕ್ಕುವಂತಹ ವ್ಯಕ್ತಿ . ಅವರು ಮಮತಾ ಅವರಿಗೆ ಒಂದು ಸಿನಿಮಾ ಪತ್ರಿಕಾ ಕೂಟದಲ್ಲಿ ಸಿಕ್ಕಾಗ ಒಂದು ಮಾತು ಅಂದರಂತೆ, ಮಮತಾ.. ನಾನು ಎಲ್ಲಾ ಕಲಾವಿದರ ಬಾಯಿಯಲ್ಲಿಯೂ ಈ ಪದ ಸಹಜವಾಗಿ ಕೇಳುತ್ತೇನೆ, ವಿಭಿನ್ನ, ಡಿಫರೆಂಟ್ ಎಂದು ಆದರೆ ಯಾವ ನಾಯಕಿಯರಲ್ಲಿಯೂ ಹಾಗೆ ವಿಶೇಷ ಅಂತ ನನಗೇನೂ ಅನಿಸುತ್ತಿಲ್ಲ, ಎಲ್ಲರೂ ಅದೇ ಗ್ಲಾಮರ್ , ಅದೇ ಬಬ್ಲಿ ಅನ್ನೋ ಹಾಗೆ. ಆ ಪದ ಕೇಳಿ ಕೇಳಿ ಸಾಕಾಗಿದೆ ಅಂದರಂತೆ, ಆ ಮಾತು ಇವರಲ್ಲಿ ಪರಿಣಾಮವಾಗಿ ಹೊಸದೊಂದು ಬದಲಾವಣೆಗೆ ಮುಂದಾದರಂತೆ.
ಅವರು ಗಾಂಧಿನಗರದಲ್ಲಿ ವಿಭಿನ್ನ ಅನ್ನೋ ಹೆಸರಿನಲ್ಲೇ ಗುರುತಿಸಿಕೊಳ್ಳುವ ಉದ್ದೇಶದಿಂದ ” ದೇಹ ದಂಡನೆಗೆ ಮುಂದಾಗಿ ಸಿಕ್ಸ್ ಪ್ಯಾಕ್ ಮಾಡುವ ಮೂಲಕ ಹ್ಯಾಕ್ಷನ್ ನಟಿ ಆಗುವ ಉದ್ದೇಶವಾಗಿದೆ, ಅಂದುಕೊಂಡ ಸಿಕ್ಸ್ ಪ್ಯಾಕ್ ಕೂಡ ಮಾಡಿ ತಮ್ಮನ್ನು ತಮಗೆ ಬೇಕಾದ ಹಾಗೆ ರೂಪಿಸಿ ಕೊಂಡರಂತೆ. ಬಹುಷ್ಹ ಈ ದೇಹ ದಂಡನೆಯ ವಿಷಯವಾಗಿ ಅಂದುಕೊಂಡ ಹಾಗೆ ತಮ್ಮನ್ನು ರೂಪಿಸಿಕೊಳ್ಳಲು ಎಲ್ಲರಿಂದಲೂ ಸಾದ್ಯವಿಲ್ಲ, ಅದರಲ್ಲೂ ಹೆಣ್ಣು ಮಕ್ಕಳಿಗೆ ಅದು ವಿಪರೀತ ಕಷ್ಟ.
ಆದರೆ ಮಮತಾ ಅವರು ಆ ವಿಷಯವಾಗಿ ಸಾಧಕರೆ ಹೌದು. ಆದರೆ ಅವರ ಆ ಪರಿಶ್ರಮಕ್ಕೆ ಸರಿಯಾದ ಸಿನಿಮಾ ಸಿಗಲಿಲ್ಲ ಎನ್ನುವ ಬೇಸರ ಅವರದು. ಅದು ಯಾರೇ ಆದರೂ ಸಹಜವೇ ಅಲ್ವಾ. ಅವರು ಮಾಡದ ಪಾತ್ರಗಳೇ ಇಲ್ಲ. ಕಾಮಿಡಿ ಟ್ರಾಜಿಡಿ, ಎಲ್ಲವೂ ಆಗಿದೆ.
ಸಣ್ಣ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು ಮಮತಾ ರಾಹುತ್. ಆದರೆ ಅವರಿಗೆ ಇನ್ನೂ ಅವರ ಪ್ರತಿಭೆಗೆ ತಕ್ಕ ಪಾತ್ರ ಸಿಕ್ಕಿಲ್ಲವೆಂಬ ಬೇಸರ ಅವರದು. ಅದಕ್ಕೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಅವರದೇ ಪ್ರೊಡಕ್ಷನ್ ಹೌಸ್ ನಲ್ಲಿ ಅಂತಹ ಸಿನಿಮಾ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆ.
ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಎನ್ನುವ ಹಾಗೆ ಯಾರಲ್ಲಿ ಯಾವ ರೀತಿಯ ಪ್ರತಿಭೆ ಇದೆಯೋ ಎನ್ನುವುದು ಅದಕ್ಕೆ ಪೂರಕವಾದ ಅವಕಾಶ ಸಿಕ್ಕಾಗ ಮಾತ್ರವೇ ಅದು ಜಗತ್ತಿನ ಕಣ್ಣಿಗೆ ಬೀಳುತ್ತದೆ. ಅಲ್ಲಿಯವರೆಗೂ ಪಯಣ ಮುಂದುವರೆಯಲೇ ಬೇಕು.
ಅಂತೂ ಬ್ರಹ್ಮಕಮಲ ಚಿತ್ರ ತಂಡಕ್ಕೆ ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಅವರ ಕಲ್ಪನೆಯ ಪಾತ್ರಕ್ಕೆ ಜೊತೆಯಾದರು ಮಮತಾ ರಾಹುತ್ ಅವರ ಕನಸಿನ ಸಿನಿಮಾ ಆದಷ್ಟು ಬೇಗ ಕೈಗೊಳ್ಳಲಿ ಎಂದು ಬಯಸುತ್ತೇನೆ.
-ಲೋಕೇಂದ್ರ ಸೂರ್ಯ.