Koutilya 3/5
ಅರ್ಜುನ್ ರಮೇಶ್ ಮತ್ತು ಪ್ರಿಯಾಂಕ ಚಿಂಚೋಳಿ ಕಿರುತೆರೆಯ ಜನಪ್ರಿಯ ಜೋಡಿ. ಇದೇ ಜೋಡಿ ಈಗ ಹಿರಿತೆರೆ ಪ್ರವೇಶಿಸಿದೆ. ಈಗ ಇವರು ನಟಿಸಿರುವ ಕೌಟಿಲ್ಯ ಚಿತ್ರ ತೆರೆಗೆ ಬಂದಿದೆ. ಬಿ.ಎ. ವಿಜೇಂದ್ರ ಮತ್ತು ಸುರೇಖ ಕೆ.ಎಸ್. ನಿರ್ಮಾಣದ ಈ ಚಿತ್ರವನ್ನು ಪ್ರಭಾಕರ್ ಶೇರ್ ಖಾನೆ ನಿರ್ದೇಶಿಸಿದ್ದಾರೆ.
ಕೌಟಿಲ್ಯ ಕಥಾ ವಸ್ತು ಬ್ಲಾಕ್ ಮನಿ, ಮಾದಕವಸ್ತುಗಳ ಸುತ್ತ ಹೆಣೆದಿರುವ ಕತೆ. ಅನಾಮತ್ತಾಗಿ ದುಡ್ಡು ಮಾಡಿಕೊಂಡಿರುವ ರಾಜಕಾರಣಿಗಳು, ವ್ಯಾಪಾರಿಗಳ ಹಣವನ್ನು ಒಬ್ಬ ವ್ಯಕ್ತಿ ಹೇಗೆ ಲಪಟಾಯಿಸುತ್ತಾನೆ ಎನ್ನುವ ಪ್ರಮುಖ ಎಳೆಯ ಸುತ್ತ ಬೇರೆ ಒಂದಿಷ್ಟು ವಿಚಾರಗಳನ್ನು ಸೇರಿಸಿ ಕೌಟಿಲ್ಯ ಚಿತ್ರವನ್ನು ರೂಪಿಸಿದ್ದಾರೆ. ಕೌಟಿಲ್ಯ ಚಿತ್ರವನ್ನು ಒಂದೇ ಏಟಿಗೆ ಚನ್ನಾಗಿದೆ ಅಥವಾ ಚನ್ನಾಗಿಲ್ಲ ಅಂತಾ ಹೇಳಲಿಕ್ಕಗುವುದಿಲ್ಲ. ಆದರೆ ನೇರವಾಗಿ ಹೇಳಬಹುದಾಗಿದ್ದ, ಒಂದೊಳ್ಳೆ ಕಥಾವಸ್ತುವನ್ನು ಗೊಂದಲದ ಜೊತೆಗೆ ನಿರೂಪಿಸಿದ್ದಾರೆ. ಬಹುಶಃ ನಿರ್ದೇಶಕ ಶೇರ್ ಖಾನೆ ಅವರ ಅತಿಯಾದ ಕಾನ್ಫಿಡೆನ್ಸ್, ನಾನೇನು ಸೃಷ್ಟಿಸಿದರೂ ಜನ ನೋಡುತ್ತಾರೆ ಎನ್ನುವ ನಂಬಿಕೆಯಿAದ ಕೌಟಿಲ್ಯನನ್ನು ಕಟ್ಟಿನಿಲ್ಲಿಸಿದ್ದಾರೆ.
ಚೆಂದದ ಕಥಾವಸ್ತುವಾಗಬಲ್ಲ, ಸಿನಿಮಾವೊಂದನ್ನು ನಿರೂಪಣೆಯಿಂದಲೇ ವಿಕಾರಗೊಳಿಸಿದ ಕೀರ್ತಿ ಪ್ರಭಾಕರ್ ಅವರಿಗೆ ಸಲ್ಲುತ್ತದೆ. ನಿಜಕ್ಕೂ ಅಭಿನಂದಿಸಬೇಕಿರುವುದು ನಿರ್ದೇಶಕರ ಕಲಾಕೃತಿಯನ್ನು ನಂಬಿ ಹಣ ಹೂಡಿಕೆ ಮಾಡಿದ ನಿರ್ಮಾಪಕರನ್ನು.
ಇನ್ನು ಅರ್ಜುನ್ ರಮೇಶ್ ನಟನೆ, ದನಿ ಎಲ್ಲವೂ ಪಾತ್ರಕ್ಕೆ ಪೂರಕವಾಗಿದೆ. ಅನಗತ್ಯ ಅರಚಾಟ ಇಲ್ಲದಿದ್ದರೆ ಕೌಟಿಲ್ಯ ಮತ್ತೊಂದು ಲೆವೆಲ್ಲಿಗೆ ನಿಲ್ಲುತ್ತಿತ್ತು. ನೀನಾಸಂ ಅಶ್ವಥ್ ಮತ್ತು ಪ್ರಿಯಾಂಕ ಚಿಂಚೋಳಿ ಕೂಡಾ ಚೆಂದನೆಯ ಅಭಿನಯ ನೀಡಿದ್ದಾರೆ. ಇವೆಲ್ಲದರ ಜೊತೆಗೆ ಕಾಮಿಡಿ ನಟರ ದಂಡೇ ಈ ಚಿತ್ರದಲ್ಲಿದ್ದು, ಎಲ್ಲರೂ ಒಂದು ಮಟ್ಟಕ್ಕೆ ನಗಿಸುವಲ್ಲಿ ಗೆದ್ದಿದ್ದಾರೆ! ಒಟ್ಟಾರೆಯಾಗಿ ಒಂದು ಸಲ ನೋಡಬಹುದಾದ ಸಿನಿಮಾ ಕೌಟಿಲ್ಯ…