ಇತ್ತೀಚೆಗೆ ಸುಮಾರಷ್ಟು ಸಿನಿಮಾಗಳು ಬರುತ್ತಿವೆ; ಹೋಗುತ್ತಿವೆ. ಗೆಲುವು ಮಾತ್ರ ಎಲ್ಲರ ಕೈಗೆಟುಕುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಥೇಟರಿಗೆ ಎಳೆದುತರಲು ಸಿನಿಮಾ ತಂಡಗಳು ಹರಸಾಹಸ ಮಾಡುತ್ತಿವೆ. ಇದರ ನಡುವೆ, ಯಾವುದೇ ಪಬ್ಲಿಸಿಟಿ ಗಿಮಿಕ್ ಇಲ್ಲದೆ, ಅಬ್ಬರದ ಪ್ರಚಾರ ಮಾಡಿ, ಪ್ರೇಕ್ಷಕರನ್ನು ದಿಕ್ಕು ತಪ್ಪಿಸದೆ, ನೋಡಿದವರ ಮನಸ್ಸಿಗೆ ಹತ್ತಿರವಾಗಿ, ಗೆದ್ದ ಸಿನಿಮಾ ʻಕೌಸಲ್ಯಾ ಸುಪ್ರಜಾ ರಾಮʼ. ಜೈಲರ್ ಸಿನಿಮಾ ಅಡ್ಡ ಬರದಿದ್ದರೆ ಈ ಹೊತ್ತಿಗೇ ಇನ್ನೂ ಬೇರೆಯದ್ದೇ ಲೆವೆಲ್ಲಿಗೆ ತಲುಪಬೇಕಿದ್ದ ಚಿತ್ರವಿದು. ʻಕೌಸಲ್ಯಾ ಸುಪ್ರಜಾ ರಾಮʼ ನೋಡಿದ ಪ್ರತಿಯೊಬ್ಬರಿಗೂ ಖುಷಿ ಕೊಟ್ಟಿದೆ. ನಿರ್ದೇಶಕ ಶಶಾಂಕ್ ಅವರ ಪಾಲಿಗಂತೂ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾ ನಂತರ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿರುವ ಚಿತ್ರ ʻಕೌಸಲ್ಯಾʼ. ಕಂಟೆಂಟ್ ವಿಚಾರದಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿ ಸಿನಿಮಾ ರೂಪಿಸುವುದು ಶಶಾಂಕ್ ಅವರ ಶೈಲಿ. ಅದರಲ್ಲೂ ಈ ಸಲ ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ʻಕೌಸಲ್ಯಾ ಸುಪ್ರಜಾʼ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಈಗ ಅದು ಶಶಾಂಕ್ ಅವರ ಕೈ ಹಿಡಿದಿದೆ. ಈ ಚಿತ್ರದ ಬಗ್ಗೆ ಬರೀ ಕರ್ನಾಟಕ ಮಾತ್ರವಲ್ಲೆ, ಇತರೆ ಭಾಷೆಗಳಲ್ಲೂ ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿವೆ. ಸದ್ಯಕ್ಕೆ ತಮಿಳಿನ ಶಿವಕಾರ್ತಿಕೇಯನ್ ʻಕೌಸಲ್ಯಾ ಸುಪ್ರಜಾ ರಾಮʼ ಚಿತ್ರದ ರಿಮೇಕ್ ಹಕ್ಕು ಕೇಳಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಎಲ್ಲವೂ ಅಂದುಕೊಂಡಂತೇ ಆದರೆ, ʻಕೌಸಲ್ಯಾʼ ತಮಿಳಿಗೆ ಹೋಗೋದು ಖಚಿತ. ಅಲ್ಲಿಂದ ಇತರೆ ಭಾಷೆಗಳಿಗೂ ಕಾಲಿಡಬಹುದು. ಎಲ್ಲರೂ ಡಬ್ಬಿಂಗ್ ಬಾಲ ಹಿಡಿದು ʻಪ್ಯಾನ್ ಇಂಡಿಯಾʼ ಗುಂಗಿನಲ್ಲಿರುವಾಗ, ʻಕೆ.ಎಸ್.ಆರ್ʼ ಥರದ ಕಂಟೆಂಟು ಪರಭಾಷೆಯಲ್ಲಿ ರಿಮೇಕ್ ಆಗಲಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ!
ಕನ್ನಡದ ಮಟ್ಟಿಗೆ ʻಕೆ.ಎಸ್.ಆರ್ʼ ಹಲವು ಬಗೆಯ ಅಚ್ಚರಿಗಳನ್ನು ಹೊತ್ತು ತಂದ ಸಿನಿಮಾ. ಈ ಸಿನಿಮಾಗೆ ಜನ ಇನ್ನೂ ದೊಡ್ಡ ಮಟ್ಟದ ಬೆಂಬಲ ನೀಡಬೇಕಿತ್ತು ಅಂತಾ ಅಂದುಕೊಳ್ಳೋ ಹೊತ್ತಿಗೆ. ಶಿವಕಾರ್ತಿಕೇಯನ್ ಥರದ ಜನಪ್ರಿಯ ನಟ ʻಕೌಸಲ್ಯಾʼ ಮೇಲೆ ಕಣ್ಣಿಟ್ಟಿರೋದು ಎಲ್ಲರೂ ಸಂತೋಷ ಪಡಬೇಕಾದ ವಿಚಾರ!