Jordan 3.5/5
ಮನೆಯಲ್ಲಿ ಕಡುಬಡತನ, ಅಪ್ಪನಿಗೆ ಮೈತುಂಬ ಸಾಲ, ಅಮ್ಮನಿಗೆ ಮೈಮೇಲೆ ಚಿನ್ನದೊಡವೆ ಹಾಕಿಕೊಳ್ಳುವ ಕನವರಿಕೆ. ಚೂಟಿ ಹುಡುಗನಿಗೆ ಓದಬೇಕೆನ್ನುವ ತುಡಿತದ ಜೊತೆಗೆ ಹಣ ಸಂಪಾದಿಸಿ ಮನೆ ಕಷ್ಟವನ್ನು ನೀಗಿಸುವ ಜವಾಬ್ದಾರಿ.
ಸ್ಲಂಗಳಲ್ಲಿ ವಾಸಿಸುವ ಮಕ್ಕಳ ಸಂಕಟ, ಸವಾಲುಗಳನ್ನೇ ಕಥೆಯ ರೂಪದಲ್ಲಿ ಪೋಣಿಸಿ ತೆರೆಮೇಲೆ ಕಟ್ಟಿಕೊಟ್ಟಿರುವ ಚಿತ್ರ ಜೋರ್ಡನ್. ದೀಪದ ಗೆಳಗೆ ಕತ್ತು ಅನ್ನುವಂತೆ ಊರಿಗೇ ಉಪದೇಶ ನೀಡುವ ತಂದೆ ತನ್ನದೇ ಮನೆಗೆ ಬೆಳಕಾಗಲು ಸಾಧ್ಯವಾಗದೆ ಕೈ ಚೆಲ್ಲಿರುತ್ತಾನೆ. ಇಸ್ತ್ರಿ ಮಾಡಿ ಸಂಪಾದಿಸುವ ಹಣದಲ್ಲಿ ಸುಕ್ಕುಗಟ್ಟಿದ ತನ್ನ ಬದುಕನ್ನು ಸರಿ ಮಾಡಿಕೊಳ್ಳದೇ ಹೆಣಗಾಡುತ್ತಿರುತ್ತಾನೆ. ಇಂಥ ವ್ಯಕ್ತಿ ತನ್ನ ಮಗನ ಬುದ್ದಿವಂತಿಕೆ ಮತ್ತು ಒಳ್ಳೇತನಗಳಿಂದ ಹೇಗೆ ತಲೆಯೆತ್ತಿ ನಿಲ್ಲುತ್ತಾನೆ ಅನ್ನೋದು ʻಜೋರ್ಡನ್ʼ ಚಿತ್ರದ ಹಂದರ.
ಬಾಲನಟ ಮಹೇಂದ್ರನ ಸುತ್ತ ನಡೆಯುವ ಘಟನಾವಳಿಗಳೇ ಚಿತ್ರದ ಜೀವಾಳ. ಹುಡುಗನ ಚುರುಕುತನದಂತೆಯೇ ಚಿತ್ರದ ನಿರೂಪಣೆಯೂ ಚುರುಕಾಗಿದ್ದಿದ್ದರೆ ಇನ್ನೂ ಚೆಂದ ಇರುತ್ತಿತ್ತು.
ಕಾರ್ ಡ್ರೈವರ್, ಎನ್ ಜಿ ಓ ಕಾರ್ಯಕರ್ತನ ಪಾತ್ರಗಳ ಜೊತೆಗೆ ಕಿಚ್ಚ ಸುದೀಪ ಪಾತ್ರಗಳೂ ಚಿತ್ರಕ್ಕೆ ಪೂರಕವಾಗಿವೆ. ಸುದೀಪ್ ಚಿತ್ರದಲ್ಲಿ ಅಭಿನಯಿಸದೇ ಇದ್ದರೂ ಅವರ ಛಾಯೆ ಸಿನಿಮಾಗೆ ತಿರುವು ನೀಡುತ್ತದೆ. ಎನ್ ಜಿ ಓ ಮುಖ್ಯಸ್ಥೆಯಾಗಿ ಬರುವ ಗೌರಿ ಲಂಕೇಶ್ ಅಚ್ಛರಿ ಮೂಡಿಸುತ್ತಾರೆ. ಸರಿ ಸುಮಾರು ಆರೇಳು ವರ್ಷಗಳ ಹಿಂದೆ ಚಿತ್ರಿತವಾಗಿರುವ ಈ ಚಿತ್ರದಲ್ಲಿ ಗೌರಿ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇಲ್ಲವಾಗಿ ಆರು ವರ್ಷಗಳ ನಂತರ ಸಿನಿಮಾವೊಂದರ ಮೂಲಕ ಅವರು ಮತ್ತೆ ಜೀವಂವಾಗಿ ಎದ್ದುಬಂದಿದ್ದಾರೆ.
ಪ್ರಾಮಾಣಿಕತೆಗೇ ಹೆಸರಾದ ತಂದೆ ಯಾರೋ ಬಿಟ್ಟುಹೋದ ಬಟ್ಟೆಗಳನ್ನು ಮಗನ ಕೈಲಿ ಮಾರಿಸುವಂತಾ ವಿಚಾರ ಆ ಪಾತ್ರದ ಆಶಯವನ್ನು ನುಂಗಿಕೊಂಡಿತಾ ಅನ್ನಿಸುತ್ತದೆ. ಕೆಲವೊಂದು ಕಡೆ ಇಂಥಾ ಲಾಜಿಕ್ ಗಳು ಮಿಸ್ ಆದರೂ ʻಜೋರ್ಡನ್ʼ ಎಲ್ಲಿಯೂ ಬೋರು ಹೊಡೆಸದಂದೆ ನೋಡಿಸಿಕೊಳ್ಳಲು ಕಾರಣ ಮಹೇಂದ್ರ, ಸಂಪತ್ ಮೈತ್ರೇಯ ಮತ್ತು ಸಿತಾರಾ ಈ ಮೂವರ ಸಹಜ ಅಭಿನಯ.
ಯಾವುದೇ ರೋಚಕತೆ ಇಲ್ಲದ, ನಮ್ಮ ನಡುವಿನ ಸಹಜ ವಿಚಾರಗಳೇ ಇಲ್ಲಿ ಸರಕಾಗಿರುವುದರಿಂದ ʻಜೋರ್ಡನ್ʼ ಎಲ್ಲೂ ಕೃತಕ ಎನ್ನಿಸುವುದಿಲ್ಲ. ಬದುಕಿನ ಕಷ್ಟಗಳೇ ಗೊತ್ತಿಲ್ಲದೆ ಬೆಳೆಯುವ ಮಕ್ಕಳಿಗೆ ಒಮ್ಮೆ ಈ ಚಿತ್ರವನ್ನು ತೋರಿಸಿದರೆ, ಸಮಾಜದ ನಿಜ ಸ್ಥಿತಿಗಳು ಅವರಿಗೆ ತಿಳಿಸಿದಂತಾಗುತ್ತದೆ. ಜೊತೆಗೆ ದೊಡ್ಡವರೂ ಒಮ್ಮೆ ನೋಡಿದರೆ ತಮ್ಮ ಮಕ್ಕಳನ್ನು ಹೇಗೆ ಪೊರೆಯಬೇಕೆನ್ನುವುದರ ಅರಿವಾಗುತ್ತದೆ.