ಇದು ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ!
ತೀರಾ ಹೊಸದೆನ್ನುವ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು, ಅದರ ಸುತ್ತ ಸಾಕಷ್ಟು ಅಧ್ಯಯನವನ್ನೂ ನಡೆಸಿ, ಅದನ್ನೆಲ್ಲಾ ಕತೆಯೊಳಗೆ ಸೇರಿಸಿ ಸಿನಿಮಾ ರೂಪಿಸುವುದು ಕಷ್ಟದ ಕೆಲಸ. ಅದನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರ ʻಡಿ.ಆರ್. 56ʼ. ಕಳೆದ ವಾರ ತೆರೆಗೆ ಬಂದ ʻಡಿ.ಆರ್. 56ʼ. ಎಲ್ಲರ ಮೆಚ್ಚುಗೆ ಗಳಿಸಿದೆ. ಮಾಧ್ಯಮಗಳಿಂದ ಅತ್ಯುತ್ತಮ ವಿಮರ್ಶೆ ಸಿಕ್ಕಿದೆ. ಈ ಗೆಲುವನ್ನು ಹಂಚಿಕೊಳ್ಳಲು ʻಡಿ.ಆರ್. 56ʼ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ʻʻಮೈಸೂರು ರಂಗಭೂಮಿಯಲ್ಲಿ ನನ್ನ ಸ್ನೇಹಿತರೊಬ್ಬರಿದ್ದರು. ಅವರು ಗಾರೆ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ನಾಟಕ ಕಲಿಯಲು ಬರುತ್ತಿದ್ದರು. ಅದೊಂದು ದಿನ ನಾವು ಡ್ರಾಮಾ ಪ್ರಾಕ್ಟೀಸ್ ಮಾಡಬೇಕಾದರೆ ಅವರಿಗೆ ವಿಪರೀತ ಜ್ವರ ಬಂತು. ಯಾಕೆ ಅಂತಾ ವಿಚಾರಿಸಿದಾಗ, ಒಂದು ದಿನದ ಮುಂಚೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಂದು ಟ್ಯಾಬ್ಲೆಟ್ ನುಂಗಿಸಿ, ಎರಡು ಗಂಟೆಯ ನಂತರ ಅವರ ರಕ್ತದ ಮಾದರಿ ತೆಗೆದುಕೊಂಡು ಕಳಿಸಿದ್ದರು. ನಂತರ ಅವರಿಗೆ ಸಮಸ್ಯೆ ಶುರುವಾಯಿತು’’ ಈ ವಿಚಾರ ನನ್ನ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಯಾವಾಗ ನಾವೊಂದು ಸಿನಿಮಾ ಮಾಡಬೇಕು ಅಂತಾ ತೀರ್ಮಾನಿಸಿದೆವೋ? ಆಗ ಈದೇ ವಿಚಾರವಾಗಿ ಒಂದೂವರೆ ವರ್ಷ ರಿಸರ್ಚ್ ಮಾಡಿದೆವು. ಸಾಕಷ್ಟು ಕಂಟೆಂಟ್ ಸಿಕ್ಕಿತು. ಆ ನೈಜ ಘಟನೆಗಳನ್ನು ಆಧರಿಸಿ ರೂಪಿಸಿದ ಚಿತ್ರ ʻಡಿ.ಆರ್. 56ʼ. ನೋಡಿದವರೆಲ್ಲಾ ನಮ್ಮ ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ಆದರೆ ಮಳೆ ನಮಗೆ ಅಡ್ಡಿ ಮಾಡಿದೆʼʼ ಎಂದು ಚಿತ್ರಕ್ಕೆ ಕತೆ ಬರೆಯುವುದರ ಜೊತೆಗೆ ನಾಯಕನಟನಾಗಿಯೂ ಕಾಣಿಸಿಕೊಂಡಿರುವ ಪ್ರವೀಣ್ ರೆಡ್ಡಿ (ಪಿ.ಆರ್) ಹೇಳಿಕೊಂಡರು.
ʻʻಇದು ಮಲ್ಟಿಪ್ಲೆಕ್ಸ್ ಆಡಿಯೆನ್ಸ್ಗೆ ಮಾತ್ರ ತಲುಪುವ ಚಿತ್ರ ಅಂತಾ ನಾವು ಆರಂಭದಲ್ಲಿ ಭಾವಿಸಿದ್ದೆವು. ಆದರೆ ನಮ್ಮ ಅನಿಸಿಕೆ ಸುಳ್ಳಾಯ್ತು. ನಾವು ಐದು ಸಿಂಗಲ್ ಸ್ಕ್ರೀನ್ ಗಳಲ್ಲಿ ಮಾತ್ರ ಚಿತ್ರ ಬಿಡುಗಡೆ ಮಾಡಬೇಕು ಅಂತಾ ಅಂದುಕೊಂಡಿದ್ವಿ. ಟ್ರೇಲರ್ ಸದ್ದು ಮಾಡಿದ ನಂತರ ಸ್ವತಃ ಚಿತ್ರಮಂದಿರದ ಮಾಲೀಕರು ನಮಗೆ ಸಿನಿಮಾ ಕೊಡಿ ಅಂತಾ ಕೇಳಲು ಶುರು ಮಾಡಿದರು. ಕಡೆಗೆ ಅರವತ್ತು ಸಿಂಗಲ್ ಸ್ಕ್ರೀನ್ಗಳಲ್ಲಿ ಮತ್ತು ನಲವತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ʻಡಿ.ಆರ್. 56ʼ. ಚಿತ್ರ ತೆರೆಕಾಣುವಂತಾಯಿತು. ಮಳೆಯಿಂದ ಹೆಚ್ಚು ಜನ ಬರಲು ಸಾಧ್ಯವಾಗುತ್ತಿಲ್ಲ. ಯಾವ ಸಿನಿಮಾಗೂ ಜನ ಥೇಟರಿಗೆ ಬರುತ್ತಿಲ್ಲ. ಇದರ ನಡುವೆಯೂ ಎರಡನೇ ವಾರ ನಮ್ಮ ಚಿತ್ರಕ್ಕೆ ಥೇಟರ್ ಗಳು ಹೆಚ್ಚಾಗಿವೆ.ʼʼ ಎಂದು ಚಿತ್ರವನ್ನು ವಿತರಿಸಿರುವ ವೆಂಕಟ್ ಗೌಡ ಹೇಳಿದರು.
ಚಿತ್ರದ ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್ ಮಾತಾಡಿ, ʻʻಡಿ.ಆರ್. 56ʼ ಬಿಡುಗಡೆಯ ನಂತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಿಲೀಸಾಗುವ ಮುಂಚೆ ನಮ್ಮ ಚಿತ್ರದ ಹಿಂದಿ, ತಮಿಳು, ತೆಲುಗು ರೈಟ್ಸ್ ಮಾರಾಟವಾಗಿದೆ. ಅದೂ ಹೊಸಬರ ಸಿನಿಮಾ ತೊಂಭತ್ತು ಲಕ್ಷದಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು ನಿಜಕ್ಕೂ ದಾಖಲೆ. ಇನ್ನೂ ಟಿವಿ ಮತ್ತು ಓಟಿಟಿ ಮಾರಾಟವಾಗಬೇಕಿದೆ. ಇದೆಲ್ಲ ಆಗಿ ಇನ್ನೆರಡು ವಾರ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನವಾದರೆ ಹಾಕಿದ ಬಂಡವಾಳದ ಮೇಲೆ ಲಾಭ ನೋಡುವಂತಾಗುತ್ತದೆʼʼ ಎಂದರು.
ʻಡಿ.ಆರ್. 56ʼ ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ. ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ಶೂಟ್ ಮಾಡಿ ಮಿಕ್ಕ ಭಾಷೆಗಳಿಗೆ ಡಬ್ ಮಾಡುತ್ತಾರೆ. ನಾವು ಪ್ರತ್ಯೇಕವಾಗಿ ಎಲ್ಲ ಭಾಷೆಗಳಲ್ಲೂ ಚಿತ್ರೀಕರಿಸಿದ್ದೇವೆ. ಹೀಗಾಗಿ ಇದು ಡಬ್ಬಿಂಗ್ ಸಿನಿಮಾ ಅಲ್ಲ, ಒರಿಜಿನಲ್ ಪ್ಯಾನ್ ಇಂಡಿಯಾ ಚಿತ್ರ ಎಂದು ನಟ ಯತಿರಾಜ್ ಅಭಿಪ್ರಾಯ ಪಟ್ಟರು. ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ಎಲ್ಲ ವಿಮರ್ಶಕರ ಮೆಚ್ಚುಗೆ ಗಳಿಸಿ, ಸಿನಿಮಾದ ಗೆಲುವಿಗೆ ಕಾರಣರಾಗಿರುವ ರಾಕೇಶ್ ಸಿ ತಿಲಕ್ ಕೂಡಾ ತಮ್ಮ ಖುಷಿ ಹಂಚಿಕೊಂಡರು.
ಚಿತ್ರದಲ್ಲಿ ಸಿಬಿಐ ಅಧಿಕಾರಿಣಿಯಾಗಿರುವ ಪ್ರಿಯಾಮಣಿ ಮನಾಲಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುರಿಂದ ನೇರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಪ್ರತೀ ದಿನ ಚಿತ್ರದ ಕುರಿತಾಗಿ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸ್ವತಃ ವಿಡಿಯೋಗಳನ್ನು ಮಾಡಿ ಕಳಿಸುತ್ತಿದ್ದಾರೆ ಎಂದು ಹೇಳಿದ ನಿರ್ದೇಶಕ ರಾಜೇಶ್ ಆನಂದಲೀಲಾ ತಮ್ಮ ಮೊದಲ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.