ಅರಿಶಿನ ಶುಭಕಾರ್ಯಗಳ ಮಂಗಳ ದ್ರವ್ಯ. ಇದನ್ನು ಪೂಜಾಕಾರ್ಯಗಳಲ್ಲಿ ಹಾಗೂ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಸೌಭಾಗ್ಯದ ಸಂಕೇತವೆಂದು ಹೇಳುತ್ತಾರೆ. “ಸ್ತ್ರೀಣಾಂ ಭೂಷಣಾಂ ಮತ” ಎಂಬ ನುಡಿಯುಂಟು, ಅಂದರೆ ಅರಿಶಿನವು ಸ್ತ್ರೀಯರಿಗೆ ಭೂಷಣವಾಗಿದೆ.
ಈ ಅರಿಶಿನವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕ್ರಿಮಿನಾಶಕ, ಜೀರ್ಣಕಾರಕ, ರಕ್ತಶೋಧಕ ಹಾಗೂ ಕಫ ನಿವಾರಕ ಗುಣಗಳಿರುವು ದರಿಂದ, ಮೊದಲಿನಿಂದಲೂ, ಇದನ್ನು ಆಹಾರದಲ್ಲಿ ಬಳಸುವ ಪದ್ಧತಿಯನ್ನು ಮಾಡಿದ್ದಾರೆ. ಇದರಿಂದ ಆಹಾರದ ಮಾಧುರ್ಯತೆ(ರುಚಿ) ಹೆಚ್ಚಾಗಿರುತ್ತದೆ. ಸುಗಂಧಕರ ಹಾಗೂ ಹಿತಕರ ಬಣ್ಣವನ್ನು ಕೊಡುತ್ತದೆ.
ಉತ್ತಮವಾದ ಆರೋಗ್ಯವನ್ನು ಪಡೆಯಲು ಅರಿಶಿನವನ್ನು ಉಪಯೋಗಿಸಿದರೆ, ಇದು ವಾತಹರವಾಗಿ ಹಾಗು ವಿಷಹರವಾಗಿ ಕೆಲಸ ಮಾಡುತ್ತದೆ.
ಅರಿಶಿನದ ಉಪಯೋಗಗಳು
ಅಡಿಗೆಗಿಂತ ಹೆಚ್ಚಾಗಿ ಔಷಧವಾಗಿ ಹಾಗೂ ಸೌಂದರ್ಯವರ್ಧಕವಾಗಿ ಉಪಯೋಗಿಸಲಾಗುತ್ತದೆ. ಅದರ ಉಪಯೋಗದ ವಿವರಗಳು ಯಾವುದೆಂದರೆ:
1. ಚರ್ಮರೋಗ: ಅರಿಶಿನದ ಪುಡಿಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಅಂಗಾಂಗಗಳಿಗೆ ಲೇಪಿಸಿ ಸ್ನಾನ ಮಾಡುವುದರಿಂದ, ಚರ್ಮರೋಗಗಳು ಬರುವುದಿಲ್ಲ.
2. ತುರಿಕೆ: ಅರಿಶಿನದ ಪುಡಿ ಹಾಗೂ ಕರಿಮೆಣಸಿನ ಪುಡಿಯನ್ನು ಸಮಭಾಗವಾಗಿ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಕಲೆಸಿ ಹಚ್ಚಿದರೆ ತುರಿಕೆ ವಾಸಿಯಾಗುತ್ತದೆ.
3. ಇಸುಬು (Dry Eczema): ಅರಿಶಿನದ ಕೊಂಬು ಹಾಗೂ ಅಳಲೆಕಾಯಿಯನ್ನು ಮಜ್ಜಿಗೆಯಲ್ಲಿ ತೇಯ್ದು ಹಚ್ಚಿದರೆ ಇಸುಬು ವಾಸಿಯಾಗುತ್ತದೆ.
4. ಕಜ್ಜಿ ಹುಳಕಡ್ಡಿಗೆ: ಅರಿಶಿನದ ಕೊಂಬನ್ನು ಗೋಮೂತ್ರದಲ್ಲಿ ತೇಯ್ದು ಕಜ್ಜಿ, ಹುಳಕಡ್ಡಿ ಇರುವ ಸ್ಥಳದಲ್ಲಿ ಲೇಪಿಸಿದರೆ ರೋಗವು ನಿರ್ಮೂಲವಾಗುತ್ತದೆ.