ಡಾಲಿ ಧನಂಜಯ ಭೂಗತ ಲೋಕದ ದೊರೆ ಎಂ.ಪಿ.ಜಯರಾಜ್ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಹೆಡ್ ಬುಷ್.
ಒಂದು ಕಾಲದಲ್ಲಿ ಇಡೀ ಭೂಗತ ಲೋಕವನ್ನು ಆಳಿದ ದೊರೆಗಳ ಕಥೆ ಇದಾಗಿದ್ದು, ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ ರಚಿಸಿರುವ ಈ ಚಿತ್ರಕ್ಕೆ ಶೂನ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಚಿತ್ರದ ಪ್ರಚಾರ ಕಾರ್ಯ ಕಳೆದ ತಿಂಗಳಿನಿಂದ ಭರ್ಜರಿಯಾಗಿ ನಡೆದಿದ್ದು, ಬರುವ ಶುಕ್ರವಾರ ಅಕ್ಟೋಬರ್ 21 ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಇದರ ಅಂಗವಾಗಿ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಬೆಣ್ಣೆದೋಸೆ ನಗರಿ ಎಂದೇ ಹೆಸರಾದ ಮದ್ಯ ಕರ್ನಾಟಕದ ದಾವಣಗೆರೆ ಮಹಾನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಸಾಮಾನ್ಯವಾಗಿ ಬೆಂಗಳೂರು ಮಹಾನಗರದಲ್ಲೇ ಆಯೋಜನೆಗೊಳ್ಳುತ್ತಿದ್ದ ಇಂಥಹ ಪ್ರಿರಿಲೀಸ್ ಕಾರ್ಯಕ್ರಮ, ಬೆಂಗಳೂರಿನ ಹೊರಗಡೆ ನಡೆದದ್ದು ವಿಶೇಷ. ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸಾಗರದ ನಡುವೆ ನಡೆದ “ಹೆಡ್ ಬುಷ್” ಚಿತ್ರದ ವರ್ಣರಂಜಿತ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಮಳೆಯ ನಡುವೆಯೂ ಚಂದನವನದ ತಾರೆಗಳನ್ನು ದಾವಣಗೆರೆ ಜನತೆ ಕಣ್ತುಂಬಿಕೊಂಡರು.
ಮೋಹಕತಾರೆ ರಮ್ಯ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
ಅಪ್ಪು ಸ್ಮರಣೆಯಲ್ಲೇ ಶುರುವಾದ ಸಮಾರಂಭದಲ್ಲಿ ಬೆಡಗಿ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ, ಕಾರ್ತೀಕ್ ಗೌಡ, ಯೋಗಿ ಜಿ.ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ನಟಿ ರಮ್ಯ ಮಾತನಾಡುತ್ತಾ, ಈ ತಂಡದ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ಆದರೆ ಧನಂಜಯ್ ಅವರ ಸ್ನೇಹಕ್ಕಾಗಿ ತಾನಿಲ್ಲಿ ಬಂದಿರುವುದಾಗಿಯೂ, ದಾವಣಗೆರೆ ಬೆಣ್ಣೆದೋಸೆ ನನಗೆ ತುಂಬಾ ಇಷ್ಟ ಎಂದೂ ಹೇಳಿದರು. ನಂತರ ಚಿತ್ರದ ಹಾಡೊಂದಕ್ಕೆ ಲಾಂಗ್ ಹಿಡಿದುಕೊಂಡೇ ಬಂದ ನಾಯಕ ಧನಂಜಯ ಮಾತನಾಡಿ, ನಾನು ನನ್ನ ಪ್ರತಿ ಚಿತ್ರದಲ್ಲೂ ಸಹ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೆ ಬಂದಿದ್ದೇನೆ.
ಹಿಂದಿನ ಬಡವ ರಾಸ್ಕಲ್ ಚಿತ್ರದಲ್ಲಿ ಶಂಕರ್ ಗುರು ಅವರಿಗೆ ಅವಕಾಶ ಕೊಟ್ಟಹಾಗೆ ಈ ಚಿತ್ರದಲ್ಲೂ ಸಹ ಶೂನ್ಯ ಅವರಿಗೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದೇನೆ. ಅಲ್ಲದೆ ನನ್ನ ಮುಂದಿನ ಚಿತ್ರ ಟಗರು ಪಲ್ಯಾ ಚಿತ್ರದಲ್ಲೂ ಸಹ ಮತ್ತೊಬ್ಬ ಯುವಪ್ರತಿಭೆಗೆ ನಿರ್ದೇಶನದ ಅವಕಾಶ ನೀಡಿದ್ದೇನೆ. ಹೆಡ್ ಬುಷ್ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ದಾವಣಗೆರೆ ಜನತೆ ಕನ್ನಡ ಚಿತ್ರಗಳನ್ನು ಯಾವಾಗಲೂ ಪೋಷಿಸುತ್ತಲೇ ಬಂದಿದ್ದಾರೆ.
ಅದಕ್ಕಾಗಿಯೇ ನಾವೆಲ್ಲ ನಿಮ್ಮ ಮನೆ ಬಾಗಿಲಿಗೇ ಬಂದಿದ್ದೇವೆ. ದಯವಿಟ್ಟು ನಮ್ಮ ಸಿನಿಮಾವನ್ನು ನೋಡಿ ಹರಸಿ ಎಂದು ದಾವಣಗೆರೆ ಮಹಾಜನತೆಯಲ್ಲಿ ಮನವಿ ಮಾಡಿಕೊಂಡರು. ನಾಯಕಿ ಪಾಯಲ್ ರಜಪೂತ್ ಮಾತನಾಡಿ ಕನ್ನಡ ನೆಲ ಇಲ್ಲಿನ ಸಂಸ್ಕ್ರತಿ ನನಗಿಷ್ಟ. ಈ ಸಿನಿಮಾ ನನಗೆ ತುಂಬಾನೇ ಪ್ರಮುಖ. ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ ಎಂದರು. ಸುಮಾರು ೪ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ನೃತ್ಯಗಾಯನ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳು ನಡೆದವು.