Gaalipata - 2 4/5
ಮುಂಗಾರು ಮಳೆ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ಶಖೆ ಆರಂಭಿಸಿದವರು ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್. ಆ ನಂತರ ಗಾಳಿಪಟ ಮತ್ತು ಮುಗುಳುನಗೆಯಲ್ಲಿ ಒಂದಾಗಿದ್ದ ಈ ಕಾಂಬಿನೇಷನ್ನಿನ ನಾಲ್ಕನೇ ಸಿನಿಮಾ ಗಾಳಿಪಟ-೨. ಈ ಯಶಸ್ವೀ ಜೋಡಿಯ ಗಾಳಿಪಟ-೨ ಯಾವ ಎತ್ತರಕ್ಕೆ ಹಾರಬಹುದು? ಎಷ್ಟರ ಮಟ್ಟಿಗೆ ರಂಜಿಸಬಲ್ಲದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೀಗ ಉತ್ತರವೂ ಸಿಕ್ಕಿದೆ…..
ಊರು ಬಿಟ್ಟು ಜಗತ್ತಿನ ಮೂಲೆಮೂಲೆಯಲ್ಲಿ ದಿಕ್ಕಾಪಾಲಾದ ಮೂವರು ಸ್ನೇಹಿತರು. ಒಂದು ಸೇರುತ್ತಾರೆ. ಅದು ತಮ್ಮ ಪ್ರೀತಿಯ ಕನ್ನಡ ಮೇಷ್ಟ್ರಿಗೆ ಅದೇನೋ ಹುಚ್ಚು ಹಿಡಿದಿದೆ. ಅವರನ್ನು ಕರೆದುಕೊಂಡು ಹೋಗಿ ಕೆಟ್ಟಿರುವ ಅವರ ತಲೆಯನ್ನು ಸರಿ ಮಾಡಿಸಬೇಕು ಅನ್ನೋದು ಮೂಲ ಉದ್ದೇಶ. ಅದರ ಜೊತೆಗೇ ಕತೆ ಫ್ಲಾಶ್ ಬ್ಯಾಕಿನ ಕಡೆಗೆ ಹೊರಳಿಕೊಳ್ಳುತ್ತೆ…
ಕಾಲೇಜು ಹುಡುಗರ ಚೇಷ್ಟೆ, ಕುಚೇಷ್ಟೆಗಳು, ಮಾಡಿಕೊಂಡ ಯಡವಟ್ಟು, ಎಕ್ಸಾಮು, ಲವ್ವು, ಪರೀಕ್ಷೆಯ ಲಫಡಾ, ಡಿಬಾರು, ಮಾನ, ಅವಮಾನಗಳ ಸುತ್ತ ಗಾಳಿಪಟ ಗಿರಕಿ ಹೊಡೆಯುತ್ತದೆ. ಮೊದಲ ಭಾಗ ನೋಡಿ ಪಟಕ್ಕಿಂತಾ ಬಾಲಂಗೋಚಿಯೇ ಉದ್ದ ಇದೆಯಲ್ಲಾ? ಇದರ ಸೂತ್ರ ಎಲ್ಲಿದೆ ಅಂತೆಲ್ಲಾ ಅನ್ನಿಸುವುದು ಸಹಜ. ಆದರೆ ದ್ವಿತೀಯಾರ್ಧ ತೆರೆದುಕೊಳ್ಳುತ್ತಿದ್ದಂತೇ…. ಸೂತ್ರದ ಸಿಕ್ಕು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ. ಆರಂಭದಲ್ಲಾದ ಗೊಂದಲ, ಹುಟ್ಟಿಕೊಂಡ ಪ್ರಶ್ನೆಗಳಿಗೆಲ್ಲಾ ಇಲ್ಲಿ ಸ್ಪಷ್ಟ ಉತ್ತರ ಸಿಗುತ್ತಾ ಹೋಗುತ್ತದೆ…
ತೀರಾ ಗಂಭೀರವಾದ ವಿಚವಾರವೊಂದನ್ನು ಉಡಾಫೆ ಶೈಲಿಯಲ್ಲಿ ಹೇಳುವುದು ಯೋಗರಾಜ್ ಭಟ್ ಎನ್ನುವ ಟಿಪಿಕಲ್ ಟ್ಯಾಲೆಂಟಿಗೆ ಮಾತ್ರ ಸಿದ್ದಿಸಿರುವ ಕಲೆ. ಇತರೆ ಹೀರೋಗಳೊಂದಿಗೆ ಸಿನಿಮಾ ಮಾಡಿದಾಗ ಭಟ್ಟರು ಈ ಸಿನಿಮಾದಲ್ಲಿ ಕಳೆದುಹೋಗುವ ಮಗುವಿನಂತೆಯೇ ಕೈತಪ್ಪಿಬಿಟ್ಟಿರುತ್ತಾರೆ. ಆದರೆ, ಗಣೇಶ್, ದಿಗಂತ್, ಪವನ್ ಜೊತೆ ಸೇರಿದಾಗ ಮಾತ್ರ ಮತ್ತೆ ಹಿಡಿತಕ್ಕೆ ಸಿಗುತ್ತಾರೆ. ಇಲ್ಲಿ ಆಗಿರುವುದೂ ಅದೇ, ತಮ್ಮದೇ ಕೆಲವೊಂದು ಕೃತಿಗಳಲ್ಲಿ ಮಾಡಿದ ಯಾವ ತಪ್ಪನ್ನೂ ಭಟ್ಟರು ಇಲ್ಲಿ ಮಾಡಿಲ್ಲ. ಯುವ ಪೀಳಿಗೆಯ ನಾಡಿ ಮಿಡಿತ ಅರಿತು ಸಿನಿಮಾ ಕಟ್ಟುವ ಭಟ್ರು ಅದರ ಜೊತೆಗೇ ಹಿರಿ ಜೀವಗಳ ಸಂಕಟಗಳನ್ನೂ ಸೆರೆ ಹಿಡಿಯುತ್ತಾರೆ.
ಯಾರಿಗೂ ಕೇಡು ಬಯಸದ ಹುಡುಗ, ಎಲ್ಲರನ್ನೂ ಒಂದುಮಾಡಲು ಬಯಸುವವನು ಯಾಕೆ ಎಲ್ಲರಿಂದಲೂ ಮೂದಲಿಕೆ, ದೂಷಣೆಗೆ ಒಳಗಾಗುತ್ತಾನೆ? ಕಳೆದುಕೊಂಡವರನ್ನು ಹುಡುಕುವರು ಎಷ್ಟರ ಮಟ್ಟಿಗೆ ತಮ್ಮವರನ್ನು, ತಮ್ಮತನವನ್ನು ದಕ್ಕಿಸಿಕೊಳ್ಳುತ್ತಾರೆ ಅನ್ನೋದು ಚಿತ್ರದ ಅಂತಿಮ ಗುಟ್ಟು.
ಗಣೇಶ್ ಪರಿಪೂರ್ಣವಾಗಿ ಮನಸ್ಸು ಕೊಟ್ಟು ಅಭಿನಯಿಸಿದ್ದಾರೆ. ಸಿಕ್ಕಾಪಟ್ಟೆ ಮಾತಾಡದೆಯೂ ಮನಸ್ಸಿಗೆ ಹತ್ತಿರವಾಗುತ್ತಾರೆ. ದಿಗಂತ್ ಮತ್ತು ಪವ್ ಕೂಡಾ ಅದಕ್ಕೆ ಸಾಥ್ ನೀಡಿದ್ದಾರೆ. ಮೂವರು ನಾಯಕಿರಯ ನಡುವೆ ಅತಿಥಿ ಪಾತ್ರದಲ್ಲಿ ಬಂದು ಹೋಗುವ ನಿಶ್ವಿಕಾ ಹೆಚ್ಚು ಇಷ್ಟವಾಗುತ್ತಾರೆ.
ಇನ್ನುಳಿದಂತೆ ಅರ್ಜುನ್ ಜನ್ಯ ಸಂಗೀತದಲ್ಲಿ ಬಂದಿರುವ ಮೆಲೋಡಿ ಹಾಡುಗಳು ಮತ್ತು ದೇವ್ಲೇ ದೇವ್ಲೇ ಹೆಚ್ಚು ಇಷ್ಟವಾಗುತ್ತವೆ. ಸಂತೋಷ್ ರೈ ಪತಾಜೆ ಕ್ಯಾಮೆರಾ ಕೆಲಸ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಮಳೆ, ಹಸಿರು, ಹಿಮ, ಮುದ್ದಾದ ಮೂರು ಜೋಡಿಗಳನ್ನೂ ಕೊಟ್ಟರೆ ಪರದೆಯನ್ನು ಎಷ್ಟೆಲ್ಲಾ ಚೆಂದ ಮಾಡಬಹುದೋ ಅಷ್ಟು ಸುಂದರಗೊಳಿಸಿದ್ದಾರೆ. ಮಗನನ್ನು ಕಳೆದುಕೊಂಡ ಸತತ 25 ವರ್ಷ ನರಳುವ ಮೇಷ್ಟ್ರ ಪಾತ್ರದಲ್ಲಿ ಅನಂತ್ ನಾಗ್ ಅಭಿನಯ ಅದ್ಭುತ. ರಂಗಾಯಣ ರಘು ಕೂಡಾ ಆಪ್ತವಾಗಿ ನಟಿಸಿದ್ದಾರೆ. ಒಟ್ಟಾರೆ ಪ್ರತಿಯೊಬ್ಬರೂ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಗಾಳಿಪಟ-೨…..