ನೈಜ ಘಟನೆ ಆಧರಿಸಿ ಸಿನಿಮಾ ಮಾಡೋದು ಅಂದರೆ ಸುಲಭದ ಮಾತಲ್ಲ. ಒಂದು ಸಲ ರಿಯಲ್ ಇನ್ಸಿಡೆಂಟ್ ಬೇಸ್ ಅಂದ ತಕ್ಷಣ ಅನೇಕ ರೀತಿಯ ಸವಾಲುಗಳು ಎದುರಾಗುತ್ತವೆ. ಮೂಲ ಘಟನೆಯನ್ನು ಸ್ವಲ್ಪ ತಿರುಚಿದರೂ ಅಪಾರ ಎದುರಾಗುವ ಸಂದರ್ಭವಿರುತ್ತದೆ. ಆದರೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾವೊಂದು ತೆರೆಗೆ ಬರಲು ಅಣಿಯಾಗಿದೆ. ಅದು ದ್ವಿಪಾತ್ರ!
ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಕಥಾಹಂದರ ಹೆಣೆದಿರುವ ನಿರ್ದೇಶಕ ಶ್ರೀವತ್ಸ ಆರ್. ಅವರು ದ್ವಿಪಾತ್ರ ಎಂಬ ಚಿತ್ರದ ಮೂಲಕ ಅದನ್ನು ತೆರೆಗೆ ತರುತ್ತಿದ್ದಾರೆ. ಈ ಚಿತ್ರದ. ಟ್ರೈಲರ್ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು. ಈ ಚಿತ್ರದಲ್ಲಿ ಹಿರಿಯನಟ ಅವಿನಾಶ್, ಚಂದೂಗೌಡ, ನೀನಾಸಂ ಅಶ್ವಥ್, ಮಾಳವಿಕ ಅವಿನಾಶ್, ಸತ್ಯ, ಸ್ನೇಹ ಹೆಗಡೆ, ಪಾಯಲ್ ಚಂಗಪ್ಪ, ಬಿಗ್ಬಾಸ್ ರಘುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶ್ರೀವತ್ಸ ನಾನೊಬ್ಬ ಚಾಟರ್ಡ್ ಅಕೌಂಟೆಂಟ್ ಆದರೂ ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ೨೦೧೬ರಲ್ಲಿ ಕೇರಳದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು, ಡಬಲ್ ಡಿಎನ್ಎ ಮನುಷ್ಯನಿಗಿದ್ದರೆ ಏನಾಗುತ್ತೆ, ಆತನೊಬ್ಬ ಸೈಕೋಕಿಲ್ಲರ್ ಆದರೆ ಹೇಗಿರುತ್ತೆ ಎಂದು ಚಿತ್ರದಲ್ಲಿ ತೋರಿಸಿದ್ದೇನೆ, ಚಿತ್ರದಲ್ಲಿ ೪ ಪ್ರಮುಖ ಪಾತ್ರಗಳಿದ್ದು, ಡಿಫರೆಂಟ್ ಜಾನರ್ ಕಥೆಯನ್ನು ಜನರ ಮುಂದಿಡಬೇಕೆಂದು ಈ ಸಿನಿಮಾ ಮಾಡಿದ್ದೇವೆ, ನಮ್ಮ ಚಿತ್ರಕ್ಕೆ ಬಿಜಿಎಂ ದೊಡ್ಡ ಶಕ್ತಿ. ಚಿತ್ರಕಥೆ ತುಂಬಾ ಫಾಸ್ಟಾಗಿದ್ದು, ಕ್ಷಣ ಮಿಸ್ ಆದರೂ ಲಿಂಕ್ ತಪ್ಪಿಹೋಗುತ್ತದೆ ಎಂದು ಹೇಳಿದರು, ನಂತರ ನಾಯಕ ಚಂದೂಗೌಡ ಮಾತನಾಡಿ ಒಬ್ಬ ಸೀರಿಯಲ್ ಕಿಲ್ಲರ್ ಹೆಣ್ಣುಮಕ್ಕಳನ್ನು ಕೊಲೆ ಮಾಡ್ತಿದ್ದ, ಆತ ಏಕೆ, ಹೇಗೆ ಕೊಲೆಗಾರನಾದ ಎಂಬ ಕಾರಣವನ್ನು ಕಂಡುಹಿಡಿಯುವ ಡಿಸಿಪಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಂತರ ಮಾತನಾಡಿದ ರಘುಗೌಡ, ಶ್ರೀವತ್ಸ ಅವರು ಈ ಕಥೆ ಹೇಳಿದಾಗ ತುಂಬಾ ಕುತೂಹಲ ಮೂಡಿತು, ತನ್ನ ಮೋಜು ಮಸ್ತಿಗೆ ಸಿಸಿ ಟಿವಿ ಹ್ಯಾಕ್ ಮಾಡುವುದು ಮಾಡ್ತಿರ್ತಾನೆ. ಕಾಮಿಡಿ ಪಾತ್ರವಾದರೂ ಕಥೆಯ ಜೊತೆಗೇ ಸಾಗುತ್ತದೆ ಎಂದು ಹೇಳಿದರು. ಚಿತ್ರದ ನಾಯಕಿ ಪಾಯಲ್ ಚಂಗಪ್ಪ ಮಾತನಾಡಿ ಈವರೆಗೆ ಹೆಚ್ಚಾಗಿ ಕಾಮಿಡಿ ಪಾತ್ರಗಳನ್ನೇ ಮಾಡಿದ್ದೆ.
ಇದರಲ್ಲಿ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರೆ, ಮತ್ತೊಬ್ಬ ನಟಿ ಸ್ನೇಹ ಹೆಗಡೆ ಮಾತನಾಡಿ ಚಂದೂಗೌಡ ಅವರ ಪತ್ನಿ ಮೀನಾಜೋಸೆಫ್ ಎಂಬ ಗರ್ಭಿಣಿ ಮಹಿಳೆಯ ಪಾತ್ರವನ್ನು ಮಾಡಿದ್ದೇನೆ ಎಂದರು. ಪ್ರಮುಖ ಪಾತ್ರಧಾರಿ ವಿಕ್ಕಿ ಕೋಲಾರ ಮಾತನಾಡುತ್ತ, ನನ್ನದು ನೆಗೆಟಿವ್ ಶೇಡ್ ಇರುವ ಸೈಕೋಥರದ ಪಾತ್ರ ಎಂದು ಹೇಳಿದರು, ಸಂಗೀತ ನಿರ್ದೇಶಕ ಮಹರಾಜ್ ಮಾತನಾಡುತ್ತ ಎರಡು ಹಾಡುಗಳಿದ್ದು, ಲೈವ್ ಇನ್ಸ್ಟ್ರುಮೆಂಟ್ ಉಪಯೋಗಿಸಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಸತ್ಯಾಶ್ರಯ ಮಾತನಾಡಿ, ಈ ಚಿತ್ರವನ್ನು ಕೋವಿಡ್ ಟೈಮ್ನಲ್ಲೇ ಶುರು ಮಾಡಿದೆವು. ನಂತರ ಮಧುಸೂದನ್ ನಮ್ಮ ಜೊತೆಯಾದರು. ನಿರ್ದೇಶಕ ಶ್ರೀವತ್ಸ ಅವರ ತಾಯಿ ಜಯಶ್ರೀ ಅವರೂ ಸಹ ಕೈಜೋಡಿಸಿದರು. ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ ಎಂದರು. ಛಾಯಾಗ್ರಾಹಕ ಅಮರ್ಗೌಡ ಮಾತನಾಡಿದರು. ಪ್ರಶಾಂತ್ ಸಿದ್ದಿ, ಸುಚೇಂದ್ರಪ್ರಸಾದ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.