ಕೆಲವೊಮ್ಮೆ ನಮ್ಮ ಸುತ್ತಲಿನ ವಿದ್ಯಮಾನಗಳು ನಮ್ಮ ಬಯಕೆ, ಗ್ರಹಿಕೆ, ಗುರಿಗಳ ವಿರುದ್ಧವಾಗೇ ಜರುಗುತ್ತಿರುತ್ತವೆ. ನಮ್ಮದಲ್ಲದ ಜೀವನದಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ. ಏನೇನೋ ಆಗಲು ಬಯಸಿದವರ ಬದುಕು ಯಾವುದೋ ತಿರುವು ತೆಗೆದುಕೊಂಡು ಇನ್ನೆಲ್ಲಿಗೋ ಬಂದು ನಿಂತುಬಿಡುತ್ತದೆ. ಇದಕ್ಕೆ ಜನ ಇಟ್ಟಿರುವ ಹೆಸರು ʻಹಣೇಬರಹʼ!
ತನ್ನದೇ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು, ಹಣ ಗಳಿಸಬೇಕು. ಆ ಮೂಲಕ ಅನಾರೋಗ್ಯದಿಂದ ವ್ಹೀಲ್ ಚೇರ್ ಗೆ ಒರಗಿದ ಅಮ್ಮನ ದೇಖರೇಕಿ ನೋಡಿಕೊಳ್ಳಬೇಕು. ಸ್ವಂತ ಮನೆ ಖರೀದಿಸಬೇಕು, ಮದುವೆಯಾಗಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಬೇಕು – ಹೀಗೆ ಅನೇಕ ʻಬೇಕುʼಗಳ ಉದ್ದೇಶಕ್ಕಾಗಿ ಶ್ರಮಿಸುವ ಹೀರೋ. ಒಳ್ಳೆ ಸಂಪಾದನೆ, ತನಗೊಪ್ಪುವ ಹುಡುಗಿಯ ಜೊತೆಗೆ ಎಲ್ಲವೂ ಕೈಗೂಡಿತು ಅಂದುಕೊಳ್ಳುವಷ್ಟಲ್ಲಿ ನಡೆಯಬಾರದ ಘಟನೆಯೊಂದು ನಡೆದಿರುತ್ತದೆ. ಸಾಫ್ಟ್ ವೇರ್ ಹುಡುಗ ಹಾರ್ಡ್ ಕೋರ್ ಆಗಿ ಮಾರ್ಪಟ್ಟಿರುತ್ತಾನೆ. ಏನದು ಘಟನೆ? ಯಾರಿಂದ ಆಗಿದ್ದು? ಅಂತೆಲ್ಲಾ ವಿವರವಾಗಿ ಹೇಳಿರುವ ಚಿತ್ರ ಧೀರನ್!
ಐದು ದಿನ ಕೆಲಸ ಮಾಡಿ ಎರಡು ದಿನ ಪಾರ್ಟಿ, ಮೋಜು ಮಸ್ತಿ ಅಂತಾ ಕಳೆದುಹೋಗುವ ಟೆಕ್ಕಿಗಳ ನಡುವೆ ಚೆಂದದ ಬದುಕು ಕಟ್ಟಿಕೊಳ್ಳಬೇಕು ಅಂತಾ ಹವಣಿಸುವ ಹುಡುಗನ ಬದುಕಲ್ಲಿ ನಡೆಯುವ ಘೋರ ಘಟನೆಗಳು, ಸಂಬಂಧಿಕರ ದುರ್ಬುದ್ದಿ, ನೀಚ ಪೊಲೀಸರ ಒಳಮರ್ಮ, ಪ್ರಾಮಾಣಿಕ ಪೊಲೀಸನ ತಾಳ್ಮೆ, ಡ್ರಗ್ ಮಾಫಿಯಾ… ಹೀಗೆ ಸಾಷಕ್ಟು ವಿಚಾರಗಳನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹದವಾಗಿ ಕಟ್ಟಿರುವ ಚಿತ್ರ ಧೀರನ್. ಚಿತ್ರದ ನಿರೂಪಣೆಗೆ ಇನ್ನೊಂದಿಷ್ಟು ವೇಗ ಬೇಕಿತ್ತು. ರಚನೆ, ನಿರ್ದೇಶನದ ಜೊತೆಗೆ ನಾಯಕನಾಗಿಯೂ ಕಾಣಿಸಿರುವ ಸ್ವಾಮಿ ನಾಲ್ಕು ಚಿತ್ರಗಳ ಅನುಭವಿಯಂತೆ ಪಾತ್ರ ಪೋಷಣೆ ಮಾಡಿದ್ದಾರೆ. ನಿರ್ದೇಶನದಲ್ಲಿ ಇನ್ನೊಂದಿಷ್ಟು ಪಳಗಬೇಕಷ್ಟೆ. ಸಂಕಲನ, ಸಂಗೀತಗಳೆಲ್ಲಾ ಹೇಳಿಕೊಳ್ಳುವ ಮಟ್ಟಿಗಿಲ್ಲ. ಆರಂಭದಲ್ಲಿ ಬರುವ ಐಟಂ ಸಾಂಗಿನ ಅಗತ್ಯವೂ ಇರಲಿಲ್ಲ. ದುಷ್ಟ ಪೊಲೀಸನಾಗಿ ಭಾಸ್ಕರ್ ಅಬ್ಬರಿಸಿದ್ದಾರೆ. ಇವರು ಸ್ಮಾರ್ಟ್ ವಿಲನ್ ಆಗಿ ಧಾರಾಳವಾಗಿ ಇಲ್ಲಿ ಎದ್ದು ನಿಲ್ಲಬಹುದು. ಪ್ರಮೋದ್ ಶೆಟ್ಟರು ಎಂದಿನಂತೆ ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸಿದ್ದಾರೆ! ಬಹುತೇಕ ಹೊಸಬರೇ ಇದ್ದರೂ, ನೋಡಿಸಿಕೊಳ್ಳುವ ಗುಣ ಇರುವ ʻಧೀರನ್ʼನನ್ನು ಜನ ಧಾರಾಳವಾಳಿ ಸ್ವೀಕರಿಸಬಹುದು. ಓಟಿಟಿ, ಟೀವಿಗಳಿಗೂ ಈ ಚಿತ್ರ ಒಳ್ಳೆ ಕಂಟೆಂಟ್ ಆಗಲಿದೆ…