ಸ್ಟಾರ್ ನಟರ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುವ ಸಂಪ್ರದಾಯ ಕಡಿಮೆಯೇ. ಕಳೆದ ವರ್ಷ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರವು ಅಮೇಜಾನ್ ಪ್ರೈಮ್ನಲ್ಲಿ ನೇರವಾಗಿ ಬಿಡುಗಡೆಯಾಗಿತ್ತು. ಈಗ ಎರಡನೆಯ ಚಿತ್ರವಾಗಿ ಸತೀಶ್ ನೀನಾಸಂ ಅಭಿನಯದ ಡಿಯರ್ ವಿಕ್ರಮ್ ವೂಟ್ ಸೆಲೆಕ್ಟ್ನಲ್ಲಿ ನೇರವಾಗಿ ಜೂನ್ 30ಕ್ಕೆ ಬಿಡುಗಡೆಯಾಗಲಿದೆ.ಡಿಯರ್ ವಿಕ್ರಮ್ ಲಾಕ್ಡೌನ್ಗೂ ಮುಂಚೆಯೇ ಪ್ರಾರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗಿ ಇದೀಗ ಬಿಡುಗಡೆಯಾಗುತ್ತಿದೆ. ಚಿತ್ರ ತಡವಾಗಿದ್ದಕ್ಕೆ ಕಾರಣ ವಿವರಿಸುವ ಸತೀಶ್, ಚಿತ್ರದಲ್ಲಿ ನನಗೆ ಎರಡು ಗೆಟಪ್ಗಳಿವೆ. ಹಲವು ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಿದ್ದು ಸವಾಲಾಗಿತ್ತು. ಚಿತ್ರದಲ್ಲಿ ಕಾಡು ಮತ್ತು ಮಳೆ ಪ್ರಧಾನ ಪಾತ್ರ ವಹಿಸುತ್ತದೆ. ಮೊದಲು ಮಳೆ, ಆ ನಂತರ ಇನ್ನಷ್ಟು ಸಮಯ ಕಾದು ಬೇಸಿಗೆಯಲ್ಲಿ ಚಿತ್ರೀಕರಣ ಮಾಡಿದೆವು. ಇನ್ನು, ನಮ್ಮ ಚಿತ್ರದಲ್ಲಿ ನಟಿಸಿದ ಅಚ್ಯುತ್ ಕುಮಾರ್, ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ ಎಲ್ಲರೂ ಬ್ಯುಸಿ ಕಲಾವಿದರೇ. ಅವರೆಲ್ಲರ ಡೇಟ್ಗಳನ್ನು ಹೊಂದಿಸಿ ಚಿತ್ರೀಕರಣ ಮಾಡುವುದು ಸುಲಭವಾಗಿರಲಿಲ್ಲ. ಅಷ್ಟರಲ್ಲಿ ಎರಡು ವರ್ಷ ಆಗಿತ್ತು. ಆ ನಂತರ ಲಾಕ್ಡೌನ್ನಿಂದ ಎರಡು ವರ್ಷ ನಿಧಾನವಾಯಿತು ಎನ್ನುತ್ತಾರೆ ಸತೀಶ್.ಈ ಚಿತ್ರವು ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ ಎನ್ನುತ್ತಾರೆ ಸತೀಶ್. ಡಿಯರ್ ವಿಕ್ರಮ್ ಮೂಲಕ ನಾವು ಸಮಾಜದ ತಪ್ಪುಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮನರಂಜನೆಯ ಚಿತ್ರಗಳನ್ನು ಮಾಡುವುದು ಸುಲಭ. ಆದರೆ, ಈ ತರಹದ ಪ್ರಯತ್ನಗಳು ಕಷ್ಟ. ಟ್ರೇಲರ್ ನೋಡಿದವರು, ಈ ಚಿತ್ರವನ್ನು ಒಂದು ವರ್ಗಕ್ಕೆ ಸೇರಿಸಬಹುದು. ಆದರೆ, ಇಲ್ಲಿ ಎಡ ಅಥವಾ ಬಲ ಎನ್ನುವುದಿಲ್ಲ. ಇದೊಂದು ಪ್ರೇಮ ಕಥೆ. ಇಲ್ಲಿ ಪ್ರೀತಿಯ ಜೊತೆಗೆ ರಾಜಕೀಯ, ಆಕ್ಷನ್ ಎಲ್ಲವೂ ಇದೆ. ಇಂಥದ್ದೊಂದು ಚಿತ್ರ ನೋಡಿ, ಕಲರ್ಸ್ ಮತ್ತು ವೂಟ್ನವರು ಹಕ್ಕು ಪಡೆಯಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ, ಒಂದೊಳ್ಳೆಯ ಮೊತ್ತಕ್ಕೆ ಚಿತ್ರದ ಹಕ್ಕುಗಳು ಮಾರಾಟವಾಗಿವೆ ಮತ್ತು ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನುತ್ತಾರೆ ಸತೀಶ್.ಈ ಚಿತ್ರದ ಕಥೆ ಕೇಳಿದಾಗ ಅದೆಷ್ಟು ಖುಷಿ ಇತ್ತೋ, ಈಗಲೂ ಅದೇ ಖುಷಿ ಮತ್ತು ಉತ್ಸಾಹ ಇದೆ ಎನ್ನುತ್ತಾರೆ ಶ್ರದ್ಧಾ ಶ್ರೀನಾಥ್. ಸತೀಶ್ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿದೆ. ನನಗೂ ಈ ಚಿತ್ರದಲ್ಲೊಂದು ಒಳ್ಳಯ ಪಾತ್ರ ಸಿಕ್ಕಿದೆ ಎನ್ನುತ್ತಾರೆ.
ಡಿಯರ್ ವಿಕ್ರಮ್ ಚಿತ್ರವನ್ನು ನಂದೀಶ್ ನಿರ್ದೇಶಿಸಿದ್ದಾರೆ. ಕಥೆ-ಚಿತ್ರಕಥೆ ಸಹ ಅವರದ್ದೇ.