ದೆವ್ವಗಳೇ ಕನ್ನಡದಲ್ಲಿ ಸಕ್ಸಸ್ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿಯೇ ಒಂದಷ್ಟು ನವೀನ ಪ್ರಯೋಗಗಳಾಗುತ್ತಿದ್ದಾವಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸದ್ಯ ಕನ್ನಡದಲ್ಲಿ ಈ ವರೆಗೂ ಬಂದ ಎಲ್ಲ ಹಾರರ್ ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ!
ಬ್ರಾಡ್ ವೇ ಪಿಕ್ಚರ್ಸ್ ನಿರ್ಮಾಣದ, ವಾಸು ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ, ರಮ್ಯಾ ಮತ್ತು ಕೃಷ್ಣ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಚಾಲನೆಯಲ್ಲಿದೆ. 2023ಕ್ಕೆ ಈ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ…
ಮೊದಲೆಲ್ಲಾ ಹಾರರ್ ಸಿನಿಮಾ ಅಂದರೆ, ಧೈರ್ಯವಂತರು ನೋಡುತ್ತಾರೆ, ಮೂಢನಂಬಿಕೆಗಳನ್ನು ನಂಬದವರು ಅಲ್ಲಿನ ಭಯದ ದೃಶ್ಯಗಳನ್ನು ಲೇವಡಿ ಮಾಡಲು ನೋಡುತ್ತಾರೆ ಎನ್ನುವಂತಿತ್ತು. ಆದರೆ ಇದು ಕಂಪ್ಯೂಟರ್ ಯುಗ. ದಿನಗಟ್ಟಲೆ ಕಂಪ್ಯೂಟರಿನ ಮುಂದೆ ಕೂತು ಕೆಲಸ ಮಾಡುವ, ಅದರಲ್ಲೂ ಟೆಕ್ಕಿಗಳ ತಲೆ ಗೊಬ್ಬರದ ಗುಂಡಿಯಾಗಿರುತ್ತದೆ. ಈ ಕಾರಣಕ್ಕೇ ವೀಕೆಂಟ್ ಪಾರ್ಟಿ, ವೀಕೆಂಡ್ ಟೂರ್ ಹೆಸರಲ್ಲಿ ಮೈಮರೆಯುತ್ತಿದ್ದರು. ಆದರೆ ಈಗ ತಮ್ಮ ಒತ್ತಡದ ನಿವಾರಣೆಗೆ ಟೆಕ್ಕಿಗಳು ಕಂಡುಕೊAಡಿರುವ ದಾರಿ ಯಾವುದು ಗೊತ್ತಾ?
ಹಾರರ್ ಸಿನಿಮಾಗಳನ್ನು ಯಥೇಚ್ಚವಾಗಿ ನೋಡುವುದು!
ಹೌದು, ಇದು ನಂಬಲೇಬೇಕಾದ ಸತ್ಯ. ಕರ್ನಾಟಕದಲ್ಲೇ ಇತ್ತೀಚೆಗೆ ಮಣಗಟ್ಟಲೆ ಹಾರರ್ ಸಿನಿಮಾಗಳು ರಿಲೀಸಾಗುತ್ತಿವೆ. ಹಾಗೆ ಬಂದ ಸಿನಿಮಾಗಳು ಒಳ್ಳೇ ಕಲೆಕ್ಷನ್ ಕೂಡಾ ಮಾಡುತ್ತಿವೆ. ಅದರಲ್ಲೂ ಶನಿವಾರ ಮತ್ತು ಭಾನುವಾರದ ವೀಕೆಂಡ್‌ಗಳಲ್ಲಿ ಜನ ಬ್ಲಾಕ್ ಟಿಕೇಟು ಪಡೆದು ಸಿನಿಮಾ ನೋಡುತ್ತಿದ್ದಾರೆ. ಹಾಗೆ ಥಿಯೇಟರು ಹೊಕ್ಕುತ್ತಿರುವವರಲ್ಲಿ ಬಹುತೇಕರು ಟೆಕ್ಕಿಗಳೇ ಆಗಿದ್ದಾರೆ. ಸಿನಿಮಾದಲ್ಲಿ ಭೀತಿಗೊಳಿಸುವ ಭಯಂಕರ ದೃಶ್ಯವೊಂದು ಪರದೆ ಮೇಲೆ ತೆರೆದುಕೊಳ್ಳುತ್ತಿದ್ದತೇ ಈ ಪ್ರೇಕ್ಷಕರು ಥಿಯೇಟರಿನ ತಾರಸಿ ಕಿತ್ತುಹೋಗುವ ಹಾಗೆ ವಿಚಿತ್ರವಾಗಿ ಕೂಗಾಡುತ್ತಾರೆ. ಯಾಕೆ ಹೀಗೆ? ಇಷ್ಟೊಂದು ಕೂಗಾಡಿ ಭಯಬೀಳುವ ಸಿನಿಮಾಗೆ ಯಾಕೆ ದುಪ್ಪಟ್ಟು ದುಡ್ಡು ಕೊಟ್ಟು ಬರುತ್ತಾರೆ.
ಹಾರರ್ ಸೀನ್‌ಗಳು ನೋಡುತ್ತಿರುವ ವ್ಯಕ್ತಿಯ ಮಿದುಳು `ಅಡ್ರಿನಲೈನ್’ ಎನ್ನುವ ಹಾರ್ಮೋನ್ ಅನ್ನು ರಿಲೀಸ್ ಮಾಡುತ್ತದೆ. ಇದು ಭಯವನ್ನು, ಉದ್ವೇಗವನ್ನು ಉದ್ದೀಪಿಸುವ ಹಾರ್ಮೋನ್. ಇದು ಥೇಟು ನಶೆಯಂತೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಾರರ್ ಫಿಲ್ಮ್ಗಳನ್ನು ಗಂಡಸರೇ ಹೆಚ್ಚು ಇಷ್ಟ ಪಡೋದು. ೧೫ ರಿಂದ ೪೫ ವಯಸ್ಸಿನವರೆಗಿನ ಗಂಡಸರು ಹೆಚ್ಚಿನ ಸಂಖ್ಯೆಯಲ್ಲಿ ಹಾರರ್ ಫಿಲ್ಮ್ ನೋಡುತ್ತಾರೆ. ಹಾನಿ ಉಂಟುಮಾಡುವAಥ, ಚಾಲೆಂಜ್ ಮಾಡುವಂಥ ಸಂಗತಿಗಳನ್ನೇ ಬಯಸುವವರು ತಮ್ಮ ಆಟಿಟ್ಯೂಡ್‌ಗೆ ಸವಾಲು ಅಂತ ಭಾವಿಸುವವರು ಹಾರರ್ ಕತೆಗಳನ್ನ ಆರಾಧಿಸುತ್ತಾರೆ. ನ್ಯೂಯಾರ್ಕ್ ಯುನಿವರ್ಸಿಟಿಯ ಜೋಸೆಫ್ ಲಿಡಾಕ್ಸ್ ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾನೆ. ನ್ಯೂರಾನ್‌ಗಳು ಭಯವನ್ನು ಹೇಗೆ ಹುಟ್ಟಿಸಿಕೊಳ್ಳುತ್ತವೆ ಮತ್ತು ನಿಯಂತ್ರಿಸುತ್ತವೆ; ಈ ಉದ್ದೀಪನೆ ಮತ್ತು ನಿಯಂತ್ರಣದ ಸಂದರ್ಭದಲ್ಲಿ ಉಂಟಾಗುವ ಭಾವವನ್ನು ಹೇಗೆ ಸುಖಿಸುತ್ತವೆ ಎಂದು ವಿವರಿಸಿದ್ದಾನೆ.
ಈಗ ತಯಾರಾಗುತ್ತಿರುವ ಅಮರಾವತಿ ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸುವಂತಾ ಕಥಾವಸ್ತು ಮತ್ತು ಮೇಕಿಂಗ್ ನಿಂದ ಕೂಡಿದೆಯಂತೆ. ಆದಷ್ಟು ಬೇಗ ಚಿತ್ರ ತೆರೆಗೆ ಬರಲಿ ಅಂತಾ ಹಾರರ್ ಸಿನಿಮಾ ಪ್ರಿಯರು ಬೇಡಿಕೊಳ್ಳಲಿ!