Chow Chow Bath 4\5
ಮೂವರು ಹುಡುಗರು, ಮೂವರು ಹುಡುಗಿಯರು, ಮೂರು ಲವ್ ಸ್ಟೋರಿ… ಮೂರೂ ಕತೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಪ್ರ್ಯೇಕವಾಗಿ ಸಾಗುತ್ತಿರುತ್ತದೆ. ಕಟ್ಟಕಡೆಯದಾಗಿ ಈ ಮೂರು ಕತೆಗಳು ಹೇಗೆ ಒಂದು ಕಡೆ ಕೂಡುತ್ತವೆ ಅನ್ನೋದು ಬಹುಮುಖ್ಯ ಅಂಶ. ʻಚೌಚೌ ಬಾತ್ʼ chow chow bath movie review ಹೈಪರ್ ಲಿಂಕ್ ಸಿನಿಮಾ. ಕೆಂಜ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವಿದು. ಪ್ರೇಮಗೀಮ ಜಾನೆದೋ ಮತ್ತು ದೇವರು ಬೇಕಾಗಿದ್ದಾರೆ ಎಂಬೆರಡು ಚಿತ್ರಗಳನ್ನು ನೀಡಿದ್ದ ಚೇತನ್ ಕುಮಾರ್ ಬಲು ಶ್ರದ್ಧೆ ವಹಿಸಿ ರೂಪಿಸಿರುವ ಚಿತ್ರ ಚೌಚೌ ಬಾತ್.
ಮೆಡಿಕಲ್ ಕ್ಯಾಂಪ್ಗೆ ಹೋದವಳ ಮನಸ್ಸನ್ನು ಕದಿಯುವ ಹುಡುಗ. ಅತಿ ಕಡಿಮೆ ಸಮಯದಲ್ಲೇ ಗಾಢವಾಗಿ ಅರಳುವ ಪ್ರೀತಿ. ಹಿಂಬಾಲಿಸಬೇಕಿದ್ದ ಆ ಪ್ರೀತಿ ಇದ್ದಕ್ಕಿದ್ದಂತೇ ಮರೆಯಾಗುತ್ತದೆ. ಅದರ ನೆನಪಲ್ಲೇ ಇದ್ದವಳ ಜೊತೆಯಾಗುವ ಮತ್ತೊಂದು ಜೀವ. ಇವರಿಬ್ಬರೂ ಒಂದಾಗುತ್ತಾರಾ? ಮರೆಯಾಗಿದ್ದ ಪ್ರೀತಿ ಮತ್ತೆ ಬಂದು ಕಣ್ಮುಂದೆ ನಿಲ್ಲುತ್ತಾ? ಇದರ ನಡುವೆ ಅಲ್ಲಿ ಮತ್ತೊಬ್ಬಳು ಹುಡುಗಿ. ನಕ್ಷತ್ರ, ಜಾತಕ ಸರಿ ಇಲ್ಲ ಅಂತಾ ಜಗದ ದೃಷ್ಟಿಯಲ್ಲಿ ಮೂದಲಿಕೆಗೆ ಒಳಗಾದವಳು. ಆಕೆಗೆ ಗಂಡು ಹುಡುಕಲು ನಿಂತ ಹುಡುಗ. ಅವನಿಗಾಗಿ ಕಾದು ಕುಂತವಳೊಬ್ಬಳು… ಹೀಗೆ ಇರುವ ಆರೇಳು ಪಾತ್ರಗಳು. ಮೇಲ್ನೋಟಕ್ಕೆ ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲ ಅನ್ನಿಸಿದರೂ, ಎಲ್ಲವೂ ಅಂತ್ಯಕ್ಕೆ ಸಮಾಗಮಗೊಳ್ಳುತ್ತವೆ.
ಒಂಥರಾ ಮಜವಾದ ಕಥೆ ಹೊಂದಿರುವ, ಅಷ್ಟೇ ಮಜಬೂತಾಗಿ ರೂಪುಗೊಂಡಿರುವ ಚಿತ್ರ ಚೌಚೌ ಬಾತ್. ಅರುಣಾ ಬಾಲರಾಜ್ ಎನ್ನುವ ʻಹಿರಿಯʼ ನಟಿಯನ್ನು ಹೊರತುಪಡಿಸಿ, ಮಿಕ್ಕಂತೆ ಪ್ರಖ್ಯಾತ ನಟರು, ಅದ್ದೂರಿ, ಆಡಂಬರಗಳೇನೂ ಇಲ್ಲಿಲ್ಲ. ಎಲ್ಲವೂ ಸರಳ, ಸುಂದರ ಮತ್ತು ಸಹಜ. ಸುಶ್ಮಿತಾ ಶರ್ಮಾ ಎನ್ನುವ ಅಪ್ಪಟ ಕಲಾವಿದೆ ಚೌಚೌ ಬಾತ್ ಮೂಲಕ ಭಾರತೀಯ ಚಿತ್ರರಂಗಕ್ಕೆ ದಕ್ಕಿದ್ದಾರೆ. ಇನ್ನು ಸಾಗರ್ ಗೌಡ ಸಹಜಾಭಿನಯ ಇಷ್ಟವಾಗುತ್ತದೆ. ಧನುಶ್ ಬೈಕಂಪಾಡಿ ಕೂಡಾ ಅಷ್ಟೇ ಸರಳವಾಗಿ ಅಭಿನಯಿಸಿದ್ದಾರೆ. ಸಂಕಲ್ಪ್ ಶರ್ಮಾ ತುಂಬಾನೇ ಪಳಗಬೇಕು. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ ಕೂಡಾ ಕತೆಗೆ ಪೂರಕವಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಎಂದಿನಂತೆ ಚೆಂದ ಚೆಂದ…
ವಿಪರೀತ ಪಾತ್ರಗಳನ್ನು ಸೃಷ್ಟಿಸಿ, ಗೊಂದಲ ಮೂಡಿಸುವವ ಸಿನಿಮಾಗಳ ನಡುವೆ ಚೌಚೌ ಬಾತ್ ಸಾಕಷ್ಟು ವಿಚಾರಗಳಿಗೆ ಇಷ್ಟವಾಗುತ್ತದೆ. ಮೊನ್ನೆ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲೂ ಚಿತ್ರ ಪ್ರದರ್ಶನಗೊಂಡಿತ್ತು. ನಿರ್ದೇಶಕ ಕೆಂಜ ಚೇತನ್ ಕುಮಾರ್ ಇದೇ ರೀತಿ ಹೊಸ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲಿರಲಿ