ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕೋವಿಡ್ಗೂ ಮುನ್ನವೇ ಚೇಸ್ ಎಂಬ ಥ್ರಿಲ್ಲರ್ ಚಿತ್ರ ಬಿಡುಗಡೆ ಆಗಬೇಕಿತ್ತು. ಇನ್ನೇನು ಚಿತ್ರತಂಡದವರು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡರು ಎನ್ನುವಷ್ಟರಲ್ಲಿ ಕೋವಿಡ್ನಿಂದ ಎಲ್ಲವೂ ಮುಂದಕ್ಕೆ ಹೋಯಿತು. ಆಗ ಮುಂದಕ್ಕೆ ಹೋದ ಚೇಸ್, ಈ ಶುಕ್ರವಾರ (ಜುಲೈ 15) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡಗುಡೆ ಆಗಿದೆ. ಸುದೀಪ್ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿ ಕಳುಹಿಸಿದ್ದಾರೆ. ಇನ್ನು, ಪ್ರೇಕ್ಷಕರು ಸಹ ಶುಭ ಹಾರೈಸಿದರೆ, ಗೆಲುವು ನಿಶ್ಚಿತ ಎಂಬ ನಂಬಿಕೆಯಲ್ಲಿ ಚಿತ್ರತಂಡ ಇದೆ.
ಚೇಸ್ಗೆ ಕಥೆ ಬರೆದು, ನಿರ್ದೇಶಿಸಿರುವುದು ವಿಲೋಕ್ ಶೆಟ್ಟಿ. ಈ ಚಿತ್ರದ ಕುರಿತು ಮಾತನಾಡುವ ಅವರು, ಇದು ಹಲವು ಥ್ರಿಲ್ಲರ್ಗಳ ಸಂಗಮ ಎನ್ನುತ್ತಾರೆ. ಥ್ರಿಲ್ಲರ್ ಚಿತ್ರಗಳಲ್ಲಿ ಬೇರೆಬೇರೆ ವಿಧದ ಥ್ರಿಲ್ಲರ್ಗಳಿವೆ. ಕ್ರೈಮ್, ಸಸ್ಪೆನ್ಸ್, ಮೆಡಿಕಲ್, ಸೈಕಲಾಜಿಕಲ್ … ಇವೆಲ್ಲವೂ ಈ ಚಿತ್ರದಲ್ಲಿದೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಬಹಳ ಸಮಯ ತೆಗೆದುಕೊಂಡು ಈ ಚಿತ್ರ ಮಾಡಿದ್ದೇವೆ. ಒಂದೊಳ್ಳೆಯ ತಂಡ ಇಲ್ಲದಿದ್ದರೆ, ಈ ತರಹದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಚಿತ್ರವನ್ನು ಯುಎಫ್ಓ-ಕ್ಯೂಬ್ ಬಿಡುಗಡೆ ಮಾಡುತ್ತಿದೆ. ಇದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರವನ್ನು ಈ ಸಂಸ್ಥೆಯು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈಗ ಕನ್ನಡ ಚಿತ್ರವೊಂದನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ ಎನ್ನುತ್ತಾರೆ.
ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇಷ್ಟು ದಿನಗಳ ಕೆರಿಯರ್ನಲ್ಲಿ ಮಾಡದಂತಹ ಒಂದು ಪಾತ್ರವನ್ನು ಅವರು ಮಾಡಿದ್ದಾರಂತೆ. ಆ ಬಗ್ಗೆ ಹೇಳಿದರೆ, ಕುತೂಹಲ ಹೊರಟುಹೋಗುತ್ತದೆ ಎಂಬುದು ಅಭಿಪ್ರಾಯ. ವಿಲೋಕ್ ಏನೇ ಕಷ್ಟ ಬಂದರೂ ಚಿತ್ರವನ್ನು ದಡ ಮುಟ್ಟಿಸಿದ್ದಾರೆ. ಒಂದು ಅವಕಾಶ ಹೋದರೆ, ಇನ್ನೊಂದು ಸಿಗುವುದಿಲ್ಲ ಎನ್ನುವ ತರಹ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಯಾವುದೇ ರಾಜಿ ಮಾಡಿಕೊಳ್ಳದೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖಂಡಿತಾ ಇದೊಂದು ಬೇರೆಯದೇ ಲೆವೆಲ್ನ ಚಿತ್ರವಾಗುತ್ತದೆ ಎಂದು ವಿಶ್ವಾಸದಿಂದ ನುಡಿಯುತ್ತಾರೆ ರಾಧಿಕಾ ನಾರಾಯಣ್.
ರಾಧಿಕಾ ಅಲ್ಲದೆ ರಾಜೇಶ್ ನಟರಂಗ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗೇಶ್, ಶ್ವೇತಾ, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಸುಧಾ ಬೆಳವಾಡಿ ಸೇರಿದಂತೆ ಹಲವು ಪ್ರತಿಭಾವಂತರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಸಂಸ್ಥೆಯಡಿ ಈ ಚಿತ್ರವನ್ನು ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಜೊತೆಯಾಗಿ ನಿರ್ಮಿಸಿದ್ದಾರೆ.