‘ಬಿಗ್ ಬಾಸ್ ಓಟಿಟಿ ಕನ್ನಡ – ಸೀಸನ್ 1’ ನಾಳೆ (ಆಗಸ್ಟ್ 06) ಪ್ರಾರಂಭವಾಗಲಿದೆ. ಈ ಕಾಯರ್ಕ್ರಮಕ್ಕೆ ಈಗಾಗಲೇ ತಯಾರಿ ಜೋರಾಗಿ ನಡೆದಿದ್ದು, ಈಗಾಗಲೇ ಸ್ಪರ್ಧಿಗಳು ಗಂಟುಮೂಟೆ ಕಟ್ಟಿ, ಮನೆಯೊಳಗೆ ಹೋಗುವುದಕ್ಕೆ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಿಗ್ಗೆ ಇನ್ನೋವೇಟೀವ್ ಫಿಲಂಸಿಟಿಯಲ್ಲಿ ನಡೆಯಲಿರುವ ಆರಂಭಿಕ ಕಾರ್ಯಕ್ರಮದಲ್ಲಿ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಮನೆಗೆ ಬರ ಮಾಡಿಕೊಳ್ಳಲಿದ್ದಾರೆ. ಅವರನ್ನೆಲ್ಲ ಮನೆಗೆ ಬಿಟ್ಟು, ಮುಂದಿನ ವಾರಾಂತ್ಯ ಎಂದಿನಂತೆ ಬಂದು ಅವರ ಕಷ್ಟ-ಸುಖಗಳನ್ನು ವಿಚಾರಿಸಲಿದ್ದಾರೆ.
ಈ ರೀತಿ ಕಳೆದ ಒಂಬತ್ತು ವರ್ಷಗಳಿಂದ ನಡೆಯುತ್ತಲೇ ಇದೆ. ಈಗಾಗಲೇ ಅವರು ಎಂಟು ‘ಬಿಗ್ ಬಾಸ್’ ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಓಟಿಟಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಬಗ್ಗೆ ಮಾತನಾಡುವ ಸುದೀಪ್, ‘’ಬಿಗ್ ಬಾಸ್’ ಕಾರ್ಯಕ್ರಮ ವೂಟ್ನಲ್ಲಿ ಬರಲಿ, ಟಿವಿಯಲ್ಲಿ ಬರಲಿ ಅದರಿಂದ ನನಗೇನೂ ವ್ಯತ್ಯಾಸವಿಲ್ಲ. ಅದರಿಂದ ನನಗೆ ಏನೂ ಅನಿಸುವುದಿಲ್ಲ. ನನ್ನ ಕೆಲಸ ವೇದಿಕೆ ಮೇಲೆ ನಿಂತು ಕಾರ್ಯಕ್ರಮ ನಡೆಸಿಕೊಡುವುದು. ಆ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ ಎನ್ನುತ್ತಾರೆ.
ಈ ಹಿಂದಿನ ಸೀಸನ್ಗಳಲ್ಲಿಕೆಲವೊಮ್ಮೆ ಸಮಸ್ಯೆಗಳಾದರೂ ತಮ್ಮಿಂದ ಬಿಗ್ ಬಾಸ್ಗೆ ಯಾವುದೇ ಸಮಸ್ಯೆ ಆಗಿಲ್ಲವಂತೆ. ಈ ಕುರಿತು ಮಾತನಾಡಿರುವ ಅವರು, ‘ನನಗೆ ಜ್ವರ ಇರಲಿ, ಏನೇ ಸಮಸ್ಯೆ ಇರಲಿ, ‘ಬಿಗ್ ಬಾಸ್’ ಶೋಗೆ ಸಮಸ್ಯೆ ಮಾಡಿಲ್ಲ. ಒಮ್ಮೆ ಹೇರ್ಲೈನ್ ಫ್ರಾಕ್ಚರ್ ಆಗಿತ್ತು. ಆಗಲೂ ಬ್ಯಾಂಡೇಜ್ ಮೇಲೆ ಶೂ ಹಾಕಿಕೊಂಡು ಶೋ ನಡೆಸಿಕೊಟ್ಟಿದ್ದೆ. ಒಮ್ಮೆ ಬೆನ್ನಿನ ಸಮಸ್ಯೆಯಾಗಿ ಕೋಟ್ ಒಳಗೆ ಐಸ್ಬ್ಯಾಗ್ ಇಟ್ಟುಕೊಂಡು ನಡೆಸಿಕೊಟ್ಟಿದ್ದೆ. ಆದರೆ, ಕಳೆದ ಸೀಸನ್ ಸಮಯದಲ್ಲಿ ಮಾತ್ರ ಕರೊನಾದಿಂದಾಗಿ ಭಾಗವಹಿಸುವುದಕ್ಕೆ ಸಾಧ್ಯವಾಗಲಿಲ್ಲ ಎನ್ನುತ್ತಾರೆ ಸುದೀಪ್.
ಇನ್ನು, ಅವರು ಈ ಕಾರ್ಯಕ್ರಮದ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತಾರಂತೆ. ‘ಮಳೆ ನೀರಲ್ಲಿ ನೆನೆಯುವ ಸೀನ್ ಇದ್ದರೆ ಬಿಸಿನೀರಲ್ಲಿ ಶೂಟ್ ಮಾಡೋಕೆ ಸಾಧ್ಯವಾ ಅಂತ ಚಿತ್ರತಂಡವನ್ನು ಕೇಳಿದ್ದೇನೆ. ಹೊರದೇಶಗಳಲ್ಲಿ ಚಿತ್ರೀಕರಣ ಮಾಡುವಾಗ ಸರಿಯಾದ ಸಮಯಕ್ಕೆ “ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಬರಬೇಕು ಅಂತ ಎರಡು, ಮೂರು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದೂ ಇದೆ. ಒಂದು ವಾರದ ಎಲ್ಲ ಎಪಿಸೋಡ್ಗಳನ್ನು ನೋಡಿಯೇ ನಾನು ಕಾರ್ಯಕ್ರಮ ನಡೆಸಿಕೊಡುತ್ತೇನೆ. ನಾನು ಹಣಕ್ಕಾಗಿ ಅಥವಾ ಯಾರದೋ ಒತ್ತಡಕ್ಕೆ ಮಣಿದು ಏನನ್ನೂ ಮಾಡುವುದಿಲ್ಲ. ‘ಬಿಗ್ ಬಾಸ್’ ಮೇಲಿನ ಪ್ರೀತಿ ಇರುವುದರಿಂದಲೇ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ ಎನ್ನುತ್ತಾರೆ.
ಬೇರೆ ಭಾಷೆಗಳಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಹಲವರು ನಡೆಸಿಕೊಟ್ಟ ಉದಾಹರಣೆಗಳಿವೆ. ಆದರೆ, ಕನ್ನಡದಲ್ಲಿ ಮಾತ್ರ ಸುದೀಪ್ ಒಬ್ಬರೇ ಎಲ್ಲ ಸೀಸನ್ಗಳನ್ನು ನಡೆಸಿಕೊಟ್ಟಿರುವುದು ವಿಶೇಷ.