ಕರಾವಳಿಯಲ್ಲಿ ಸಿನಿಮಾಗಳು ಸದ್ದು ಮಾಡೋದು ಕಡಿಮೆ; ಆದರೆ, ಸಿನಿಮಾದಲ್ಲಿ ‘ಕರಾವಳಿಗರ ಸದ್ದು’ ದೊಡ್ಡ ಮಟ್ಟಕ್ಕಿದೆ.! ಇದೇ ಹಾದಿಯಲ್ಲಿ ನಡೆದು-ದುಡಿದು ಸದ್ದು ಮಾಡಿ ಗೆದ್ದು ಬಂದವರಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಪ್ರಮುಖರು. ಗಡಿಯಾಚೆಗೂ ಖ್ಯಾತಿ ವಿಸ್ತರಿಸಿ ಬಾಲಿವುಡ್ಡಿನವರೆಗೂ ದಾಂಗುಡಿ ಇಟ್ಟು, ಸದ್ದಿನ ಸಂಗೀತ ಕೊಟ್ಟು ಸೈ ಎನಿಸಿಕೊಂಡಿರೋ ಬಸ್ರೂರು, ಸದಾ ಪ್ರಯೋಗಶೀಲ ವ್ಯೆಕ್ತಿ. ಅದೇ ತೆರನಲ್ಲಿ ಸದ್ಯ “ಕಡಲ್” ಎಂಬ ಚಿತ್ರವನ್ನ ಸದ್ದಿಲ್ಲದೇ ಮುಗಿಸಿ ತೆರೆಯತ್ತ ತರುತ್ತಿದ್ದಾರೆ. ಈ ಚಿತ್ರದ “ಟ್ರೈಲರ್” ಬಿಡುಗಡೆ ಕಂಡು ಸಖತ್ ಸದ್ದು ಮಾಡುತ್ತಿದೆ. ಎನ್ ಎಸ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ತಾರಾಗಣದಲ್ಲಿ ಸೌರಭ್ ಭಂಡಾರಿ, ಸೂಚನ್ ಶೆಟ್ಟಿ, ಚಿರಶ್ರೀ ಅಂಚನ್, ಭಾಸ್ಕರ್ ಬಸ್ರೂರು, ವಿಜಯ್ ಬಸ್ರೂರು, ಪ್ರಭಾಕರ ಕುಂದರ್, ಸುಜಾತ ಆಂದ್ರಾದೆ ಸೇರಿದಂತೆ ಹಿರಿ-ಕಿರಿಯ ಸಮಾಗಮವಿದ್ದಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಈ ಚಿತ್ರದಲ್ಲಿ ಕರಾವಳಿಯ ದೃಶ್ಯ ವೈಭವವನ್ನ ಕಣ್ಣಿಗೆ ಹಬ್ಬದಂತೆ ಕಟ್ಟಿಕೊಟ್ಟಂತೆ ಕಾಣುತ್ತಿದ್ದು, ಪಕ್ಕಾ ದೇಸೀ ಶೈಲಿಯ ಹೊಸ ನಿರೂಪಣೆಯೊಂದಿಗೆ ಹೊಸ ಭರವಸೆಯ ಹೊಸ ಮುಖಗಳು ವಿಜೃಂಭಿಸಿವೆ.
ಜೊತೆ-ಜೊತೆಗೆ ರವಿ ಬಸ್ರೂರು ಹಿನ್ನೆಲೆ ಸಂಗೀತದೊಂದಿಗೆ, ಸಚಿನ್ ಬಸ್ರೂರು ಕ್ಯಾಮೆರಾ ಕುಸುರಿಯಲ್ಲಿ ‘ಕಡಲ ವೈಭವ’ ಕಾಣಲು ಆಕರ್ಷಿಸುತ್ತಿದೆ. ಹಾಗೆಯೆ, ಚಿತ್ರದ ಟೀಸರ್, ಟ್ರೈಲರ್ ತುಣುಕುಗಳನ್ನು ನೋಡುವಾಗ ಇದೊಂದು, ಕಡಲ ಆರ್ತನಾದದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಹೇಳುವ ಸಿನಿಮಾ ಅನಿಸಿದರೂ, ಇಲ್ಲೊಂದು ಬಗೆಯ ಮಧುರ ಪ್ರೇಮಕಥೆಯ ಜೊತೆ ದ್ವೇಷದ ಹೂರಣವೂ ಚಿತ್ರದಲ್ಲಿದ್ದಂತೆ ಕಾಣುತ್ತಿದ್ದು, ಚಿತ್ರದ ಮೇಲೊಂದು ನಿರೀಕ್ಷೆ ಇಡುವಂತಾಗಿದೆ. ಅದೇನೇ ಇರಲಿ, ಗರಗರ ಮಂಡಲ,ಕಟಕ, ಬಿಲಿಂಡರ್, ಗಿರ್ಮಿಟ್ ಸಿನಿಮಾಗಳು ಸೇರಿದಂತೆ ಪ್ರತಿ ಬಾರಿಯೂ ಒಂದಿಲ್ಲ ಒಂದು ಬಗೆಯಲ್ಲಿ ವಿಶೇಷ ಹೊತ್ತು ತಂದು, ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುವ ರವಿ ಬಸ್ರೂರು ಮತ್ತವರ ತಂಡದ “ಕಡಲ್” ಕೂಡ ಒಂದು ಪ್ರಯೋಗವೆ ಆಗಿದೆ.
ಇಲ್ಲಿ ಖಾಸಗಿ ಪ್ರದರ್ಶನದ ಮೂಲಕ ಸಮಾನ ಮನಸ್ಕರ ನೆರಳು ನೆಚ್ಚಿಕೊಂಡು ಚಿತ್ರ ತೆರೆಗೆ ತರಲಾಗುತ್ತಿದೆ. ಇದೇ ಮೇ ಹತ್ತಂಬತ್ತರ ಶುಕ್ರವಾರ ಕೋಟೇಶ್ವರದ ‘ಭಾರತ್ ಸಿನಿಮಾ’ಸ್ ‘ ನಲ್ಲಿ ಚಿತ್ರ ಪ್ರದರ್ಶನ ಕಾಣಲು ಅಣಿಯಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಯತ್ತ ಬರುತ್ತಿರುವ ‘ಕಡಲ್’ ಚಿತರರಸಿಕರ ಮನಗೆದ್ದು, ಬಸ್ರೂರ್ ತಂಡದ ಕೈಹಿಡಿಯಲಿದೆಯಾ? ಕಾದು ನೋಡೋಣ.