ಅನೀಶ್ ತೇಜೇಶ್ವರ್ ಅಭಿನಯದ ‘ಬೆಂಕಿ’, ಜುಲೈ 15ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಇದು ಅವರ ಅಭಿನಯದ 10ನೇ ಚಿತ್ರವಾದರೆ, ನಿರ್ಮಾಣದ ಮೂರನೆಯ ಚಿತ್ರವಾಗಿದೆ. ಈ ಚಿತ್ರದ ಮೂಲಕ ಅವರು ಹೊಸ ಟ್ರೆಂಡ್ ಸೃಷ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ.
ಹೊಸ ಟ್ರೆಂಡ್ ಎಂದರೆ, ಅದೇನು ಎಂಬ ಪ್ರಶ್ನೆ ಬರುವುದು ಸಹಜ. ಸಾಮಾನ್ಯವಾಗಿ, ಎಲ್ಲ ಚಿತ್ರತಂಡಗಳು ಜನರಿಗೆ ತಮ್ಮ ಚಿತ್ರವನ್ನು ತೋರಿಸುವುದಕ್ಕೆ ಮೊದಲು ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ, ಅನೀಶ್ ಇವೆರಡರ ಜೊತೆಗೆ ತಮ್ಮ ಚಿತ್ರದ ಕೆಲವು ಪ್ರಮುಖ ಇಡೀ ದೃಶ್ಯಗಳನ್ನೇ ಸ್ನೀಕ್ ಪೀಕ್ ಎಂಬ ಹೆಸರಿನಲ್ಲಿ ಸೋಷಿಯಲ್ ಬಿಡುಗಡೆ ಮಾಡಿದ್ದಾರೆ. ಆ ದೃಶ್ಯಗಳಿಗೆ ಚಿತ್ರ ನೋಡುವುದಕ್ಕೆ ಬನ್ನಿ ಎಂದು ಪ್ರೇಕ್ಷಕರಿಗೆ ಆಹ್ವಾನ ಮಾಡುತ್ತಾರೆ.
ಈ ಕುರಿತು ಮಾತನಾಡುವ ಅವರು, ‘ಎಲ್ಲ ಚಿತ್ರತಂಡದವರು ಸಹ ತಮ್ಮ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳುತ್ತಾರೆ. ಎಲ್ಲವನ್ನೂ ಕೇಳಿ ಜನರಿಗೆ ಯಾವುದು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಗೊಂದಲ ಕಾಡುವುದು ಸಹಜ. ಹಾಗಾಗಿ, ನಾನು ಚಿತ್ರದ ಟ್ರೇಲರ್ ತೋರಿಸುವುದರ ಜೊತೆಗೆ, ಕೆಲವು ದೃಶ್ಯಗಳನ್ನು ಸಹ ತೋರಿಸುತ್ತೇನೆ. ಒಂದು ಕಾಮಿಡಿ ದೃಶ್ಯದ ಜೊತೆಗೆ ಹಾರರ್ ಮತ್ತು ಸೆಂಟಿಮೆಂಟ್ ದೃಶ್ಯಗಳನ್ನು ಸಹ ತೋರಿಸುತ್ತೇನೆ. ಅದನ್ನು ನೋಡಿ ಇಷ್ಟವಾದರೆ ಚಿತ್ರಮಂದಿರಕ್ಕೆ ಬನ್ನಿ. ಇಲ್ಲವಾದರೆ ಬೇಡ. ಇಷ್ಟವಾದರೆ, ಸಂತೋಷ. ಇಲ್ಲವಾದರೆ, ಏನೂ ಮಾಡುವುದಕ್ಕೆ ಆಗುವುದಿಲ್ಲ. ಮೊದಲಿಗೆ ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವುದು ಬಹಳ ಕಡಿಮೆಯಾಗುತ್ತಿದೆ. ಕೊನೆಯ ಪಕ್ಷ ಚಿತ್ರದಲ್ಲಿ ಏನಿದೆ ಎಂದು ಗೊತ್ತಾದರಾದರೂ, ಜನ ಚಿತ್ರಮಂದಿರಕ್ಕೆ ಬರಬಹುದು’ ಎಂಬ ನಿರೀಕ್ಷೆಯಲ್ಲಿದ್ದಾರೆ ಅನೀಶ್.
ಇದುವರೆಗೂ ಹೆಚ್ಚಾಗಿ ಆಕ್ಷನ್ ಹೀರೋ ಇಮೇಜ್ನಲ್ಲೇ ಕಾಣಿಸಿಕೊಂಡಿದ್ದ ಅನೀಶ್, ಇದೇ ಮೊದಲ ಬಾರಿಗೆ ಕಾಮಿಡಿ ಮಾಡಿದ್ದಾರಂತೆ. ಈ ಕುರಿತು ಮಾತನಾಡುವ ಅವರು, ‘ನನಗೆ ಕಾಮಿಡಿ ಎಂದರೆ ಬಹಳ ಇಷ್ಟ. ಕಾಮಿಡಿಗಾಗಿಯೇ ಇನ್ನೊಂದು ಟ್ರಾಕ್ ಮಾಡುವುದು ನನಗೆ ಇಷ್ಟವಿಲ್ಲ. ನಾಯಕನ ಜತೆಗೆ ಕಾಮಿಡಿ ಇದ್ದರೆ ಚೆನ್ನ ಎಂಬುದು ನನ್ನ ನಂಬಿಕೆ. ಏಕೆಂದರೆ, ನಿಜಜೀವನದಲ್ಲಿ ಯಾವಾಗಲೋ ಒಮ್ಮೆ ಸಿಟ್ಟು ಬರುತ್ತದೆ. ಅದು ಬಿಟ್ಟು ಯಾವಾಗಲೂ ಸಿಡಿಯುತ್ತಲೇ ಇರುವುದಿಲ್ಲ. ನಾನು ನನ್ನ ಸ್ನೇಹಿತರ ಜತೆಗೆ ಜಾಲಿಯಾಗರುತ್ತೇನೆ. ಅದೇ ತರಹ ಈ ಚಿತ್ರದಲ್ಲೂ ನಾಯಕ ಯಾವಾಗಲೂ ಸಿಟ್ಟಾಗಿರುವುದಿಲ್ಲ. ಅಗತ್ಯ ಬಿದ್ದಾಗ ಮಾತ್ರ ಸಿಟ್ಟಾಗುತ್ತಾನೆ. ಮಿಕ್ಕಂತೆ ನಗುತ್ತಾ, ನಗಿಸುತ್ತಾ ಇರುತ್ತಾನೆ. ಚಿತ್ರದಲ್ಲಿ ಬರೀ ಆಕ್ಷನ್ ಅಥವಾ ಸೆಂಟಿಮೆಂಟ್ ಮಾತ್ರವಲ್ಲ, ಸಾಕಷ್ಟು ಕಾಮಿಡಿ ಸಹ ಇದೆ’ ಎನ್ನುತ್ತಾರೆ ಅನೀಶ್.
ಶಾನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಬೆಂಕಿ’ ಚಿತ್ರದಲ್ಲಿ ಈ ಚಿತ್ರದಲ್ಲಿ ಅನೀಶ್ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸಿದ್ದು, ಮಿಕ್ಕಂತೆ ಶ್ರುತಿ ಪಾಟೀಲ್, ಅಚ್ಯುತ್ ಕುಮಾರ್, ಹರಿಣಿ, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ.