ಶಿವರಾಜ್ಕುಮಾರ್ ಅಂದರೆ ಕಮರ್ಷಿಯಲ್ ಅಥವಾ ಮಾಸ್ ಚಿತ್ರಗಳಾಗಿರಬೇಕು ಎಂದು ಅವರ ಅಭಿಮಾನಿಗಳು ಆಸೆಪಡುವುದು ಸಹಜ. ಏಕೆಂದರೆ, ಶಿವರಾಜ್ಕುಮಾರ್ ತಮ್ಮ ಹಲವು ಚಿತ್ರಗಳಲ್ಲಿ ಲಾಂಗ್ ಕೈಯಲ್ಲಿ ಹಿಡಿದು ತೆರೆಯ ಮೇಲೆ ಮಿಂಚಿದ್ದಾರೆ. ಮಾಸ್ ಚಿತ್ರಗಳ ಜೊತೆಗೆ ಫಿಲಾಸಫಿಯತ್ತಲೂ ಶಿವರಾಜ್ಕುಮಾರ್ ಇತ್ತೀಚೆಗೆ ಹೆಚ್ಚುಹೆಚ್ಚು ಆಕರ್ಷಿತರಾಗುತ್ತಿದ್ದಾರಂತೆ. ಹಾಗಂತ ಅವರೇ ಇತ್ತೀಚೆಗೆ ಖುದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜುಲೈ 01ರಂದು ಬಿಡುಗಡೆಯಾಗುತ್ತಿರುವ ‘ಬೈರಾಗಿ’ ಚಿತ್ರದಲ್ಲೂ ಒಂದು ಫಿಲಾಸಫಿ ಇದೆ ಎನ್ನುತ್ತಾರೆ ಅವರು.
’ಬೈರಾಗಿ’ ಕುರಿತು ಮಾತನಾಡುವ ಅವರು, ‘ಇತ್ತೀಚೆಗೆ ಯಾಕೋ ಫಿಲಾಸಪಿ ವಿಷಯ ಬಹಳ ಆಕರ್ಷಿತವಾಗುತ್ತಿದೆ. ಬಹುಶಃ ನನ್ನ ವಯಸ್ಸು ಸಹ ಅದಕ್ಕೆ ಕಾರಣವಿರಬಹುದು. ಇನ್ನೇನು ಇದೇ ಜುಲೈ 12ಕ್ಕೆ 60ಕ್ಕೆ ಕಾಲಿಡುತ್ತಿದ್ದೇನೆ. ನನ್ನ ಕೈಯಲ್ಲಿ ಸದ್ಯ ಎಂಟ್ಹತ್ತು ಸಿನಿಮಾಗಳಿದ್ದು, ಇವುಗಳ ಪೈಕಿ ಕೆಲವು ಫಿಲಾಸಫಿ ಸಿನಿಮಾಗಳು ಸಹ ಇವೆ. ಹಾಗಂತ ನಾನು ಯಾವುದನ್ನೂ ಹುಡುಕಿಕೊಂಡು ಹೋಗುತ್ತಿಲ್ಲ. ನನ್ನಿಂದ ಇಂಥದ್ದೊಂದು ವಿಷಯವನ್ನು ಹೇಳಿಸಿದರೆ ಚೆನ್ನಾಗಿರುತ್ತದೆ ಎಂದು ನಿರ್ದೇಶಕರೇ ನನ್ನಿಂದ ಇಂಥ ಕಥೆಗಳನ್ನು ಹೇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೈರಾಗಿ ಸಹ ಅಂಥದ್ದೇ ಒಂದು ಚಿತ್ರ ಎನ್ನುತ್ತಾರೆ ಶಿವಣ್ಣ. ಈ ಚಿತ್ರ ಯಾವ ವಿಷಯದ ಕುರಿತಾಗಿ ಇರುತ್ತದೆ ಎಂಬ ಪ್ರಶ್ನೆಗೆ ಅವರು ಉತ್ತರಿಸುವುದಿಲ್ಲ. ಚಿತ್ರಮಂದಿರಗಳಲ್ಲೇ ನೇರವಾಗಿ ನೋಡಿ’ ಎಂಬ ಉತ್ತರ ಅವರಿಂದ ಬರುತ್ತದೆ.
‘ಬೈರಾಗಿ’ ಚಿತ್ರದಲ್ಲಿ ಕಥೆಯೇ ಹೀರೋ, ನಾವೆಲ್ಲ ಪಾತ್ರದಾರಿಗಳು ಎನ್ನುವ ಅವರು, ‘’ಟಗರು’ ಚಿತ್ರದ ನಂತರ ನಾನು ಮತ್ತು ಧನಂಜಯ ಮತ್ತೊಮ್ಮೆ ಜೊತೆಯಾಗಿ ನಟಿಸಿದ್ದೇವೆ. ಈ ಚಿತ್ರವು ಟಗರು ಚಿತ್ರಕ್ಕಿಂತಲೂ ವಿಭಿನ್ನವಾಗಿರುವ ಚಿತ್ರ. ಟಗರು ಸಿನಿಮಾದ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಈ ಚಿತ್ರವೇ ಬೇರೆ. ಹಾಗಂತ ಬೈರಾಗಿ ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಇದು ಭಾವನೆಯ ಮೇಲೆ ಸಾಗುವ ಸಿನಿಮಾ. ಪ್ರತಿಯೊಬ್ಬರಿಗೂ ಭಾವನೆಗಳು ಇರುತ್ತವೆ. ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಗೂ ಒಂದು ಕಾರಣ ಇದೆ ಮತ್ತು ಮಹತ್ವ ಸಹ ಇದೆ. ಸಿನಿಮಾ ಮುಂದುವರೆಯುತ್ತಿದ್ದಂತೆಯೇ ಎಲ್ಲ ಪಾತ್ರಗಳೂ ಬಹಳ ಚೆನ್ನಾಗಿ ಕನೆಕ್ಟ್ ಆಗುತ್ತವೆ. ಪ್ರತಿಯೊಬ್ಬರಿಗೂ ಆಸೆ, ಆಕಾಂಕ್ಷೆಗಳು ಇರುತ್ತವೆ. ಆದರೆ, ಅದೆಲ್ಲವನ್ನೂ ಮೀರಿದ್ದು ಮನುಷ್ಯತ್ವ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಸಾರಲಾಗಿದೆ’ ಎನ್ನುತ್ತಾರೆ ಶಿವಣ್ಣ.
ಈ ಚಿತ್ರವು ‘ಟಗರು’ ತರಹ ಇರುತ್ತದೆ ಎಂದು ನೋಡಬೇಡಿ ಎಂದು ಮನವಿ ಮಾಡುವ ಧನಂಜಯ, ‘‘ಬೈರಾಗಿ’ಯು ‘ಟಗರು’ಗಿಂತ ವಿಭಿನ್ನವಾದ ಮತ್ತು ಗಂಭೀರವಾದ ಸಿನಿಮಾ. ಹಾಗಾಗಿ, ‘ಬೈರಾಗಿ’ ಸಿನಿಮಾ ಬೇರೆಯದ್ದೇ ಅನುಭವ ನೀಡಲಿದೆ. ಶಿವಣ್ಣ ಅವರೊಂದಿಗೆ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಮುಂದೊಂದು ದಿನ ಅವರ ಚಿತ್ರವನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಬೇಕು ಎಂಬ ಆಸೆ ಇದೆ ಎನ್ನುವ ಅವರು ಮುಂದೊಂದು ದಿನ ಅಂಥದ್ದೊಂದು ಕಾಲ ಕೂಡಿ ಬರಲಿ’ ಎಂದು ಆಶಯ ವ್ಯಕ್ತಪಡಿಸುತ್ತಾರೆ.
‘ಬೈರಾಗಿ’ ಚಿತ್ರದಲ್ಲಿ ಪೃಥ್ವಿ ಅಂಬರ್, ಅಂಜಲಿ, ಯಶಾ ಶಿವಕುಮಾರ್, ಶಶಿಕುಮಾರ್ ಮುಂತಾದವರು ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಜನಪ್ರಿಯ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರವನ್ನು ಕೃಷ್ಣ ಸಾರ್ಥಕ್ ನಿರ್ಮಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.