Amruthaballi Plant Benefits ಈ ಮೂಲಿಕೆ ಆಯುರ್ವೇದದಲ್ಲಿ ಅತ್ಯಂತ ಮಹತ್ತರವಾದದ್ದು.
ಇದರ ಆಯಸ್ಸು ಬಹಳ ಕಾಲದವರೆಗೂ ಜೀವಂತವಾಗಿರುವಂತದ್ದು, ಇದು ಒಳ್ಳೆಯ ರೂಪದಲ್ಲಿ ಇರುವಂಥದ್ದು. ಈ ಲತೆ ಯಾವ ಮರಕ್ಕೆ ಹಬ್ಬುತ್ತದೆಯೋ ಅದರ ಗುಣ ಧರ್ಮಗಳು ಸಹ ಇದಕ್ಕೆ ಬರುತ್ತದೆ. ಹಾಗಾಗಿ ಮಾವು, ಬೇವು, ಈ ರೀತಿ ಉಪಯುಕ್ತ ಮರಗಳಿಗೆ ಹಬ್ಬಿಸುವುದು ಒಳ್ಳೆಯದು. ಅದರಲ್ಲೂ ಬೇವಿನ ಮರಕ್ಕೆ ಹಬ್ಬಿಸಿದರೆ ಆ ಬಳ್ಳಿಯ ಔಷಧೀಯ ಗುಣಗಳು ಅಧಿಕ. ಈ ಲತೆಯನ್ನು ಹಳ್ಳಿಗರು ಚೆನ್ನಾಗಿ ಗುರುತಿಸುತ್ತಾರೆ.
ಎಲ್ಲಾ ಬೇಲಿಗಳಲ್ಲೂ, ಗುಡ್ಡಗಾಡುಗಳಲ್ಲೂ ಎಲ್ಲಾ ಕಡೆಯೂ ದೊರೆಯುವಂತದ್ದು, ಇದು ಅನೇಕ ರೀತಿಯ ವ್ಯಾಧಿಗಳನ್ನು ಗುಣಪಡಿಸುವಂತಹ ಅದ್ಭುತ ಗುಣವನ್ನು ಹೊಂದಿದೆ. ಹಾಗಾಗಿ ಇದಕ್ಕೆ ‘ಅಮೃತಾ’ ಎನ್ನುವ ಹೆಸರು ಬಂದಿರುವಂತಹದ್ದು, ಅಮೃತ ಬಳ್ಳಿಯ ಜೊತೆ ಅಳಲೆಕಾಯಿ ಹಾಗೂ ನೆಲ್ಲಿಕಾಯಿಗಳ ಸಂಯೋಗದಿಂದ ಸೇವನೆ ಮಾಡಿದರೆ ಕಫ, ಪಿತ್ತ, ವಾತ ಮೂರರ ಸಮತ್ವವನ್ನು ಚೆನ್ನಾಗಿ ಕಾಪಾಡುತ್ತದೆ. ಮೂರರ ಸಂಯೋಜನೆಯು ನಾನಾ ವ್ಯಾಧಿಗಳನ್ನು ಹೊಡೆದೋಡಿಸುವ ಗುಣದಿಂದ ಕೂಡಿದೆ. ಬಲಿತ ಒಂದು ಕಡ್ಡಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಇಟ್ಟರೆ ಅದು ತನ್ನಷ್ಟಕ್ಕೆ ತಾನೇ ಚಿಗುರಿಕೊಳ್ಳುತ್ತದೆ. ಇದು ಬಹಳ ಬೇಗ ಸಾಯುವುದಿಲ್ಲ.
ನೀರು ಹಾಕದಿದ್ದರು ಇದು ತನ್ನಷ್ಟಕ್ಕೆ ತಾನೇ ಚಿಗುರುತ್ತದೆ. ಇದೇ ಕಾರಣಕ್ಕಾಗಿ ಇದನ್ನು ಅಮೃತವಲ್ಲರೀ ಎಂದು ಕರೆಯುವುದುಂಟು. ಮನುಷ್ಯನಿಗೆ ಬರುವ ಮುದಿತನವನ್ನು ತಡೆಯುವಂತಹ ಶಕ್ತಿ ಇರುವಂತದ್ದು, ಮಾನವನ ನಿರ್ಬಲತೆಯನ್ನು ದೂರಮಾಡು ವಂತದ್ದು, ಜೀವನೀಯ ಶಕ್ತಿಯನ್ನು ಒದಗಿಸುವಂತಹದ್ದು. ಹಾಗಾಗಿ ಇದಕ್ಕೆ ‘ರಸಾಯನೀ’, ‘ವಯಸ್ಸಾ’ ಎಂಬ ಹೆಸರುಗಳು ಅನ್ವರ್ಥವಾಗಿದೆ. ತೆಳ್ಳಗಿರುವ ಹೊಸ ಗಿಡಕ್ಕಿಂತ ದಪ್ಪನಾದ ಕಾಂಡವಿರುವ ಲತೆಯಲ್ಲಿ ಔಷಧೀಯ ಗುಣಗಳು ಜಾಸ್ತಿ ಇರುತ್ತದೆ. ಮತ್ತು ಅದರಲ್ಲಿ ಸತ್ವವೂ ಜಾಸ್ತಿ ಇರುತ್ತದೆ.
ಈ ಮೂಲಿಕೆಯು ಸಿಹಿ ಮತ್ತು ಒಗರು ಗುಣಗಳಿಂದ ಕೂಡಿದೆ. ಆದರೆ ಪರಿಪಾಕದ ನಂತರ ಮಧುರತೆಯನ್ನು ಪಡೆದುಕೊಳ್ಳುತ್ತದೆ. ಇದು ತ್ರಿದೋಶಗಳನ್ನು ಶಾಂತಿಗೊಳಿಸು ವಂತಹದು. ಅಗ್ನಿವರ್ಧಕ, ಪಿತ್ತಶಾಮಕ, ಹೃದಯಕ್ಕೆ ಹಿತಕರವಾದದ್ದು. ರಕ್ತಶೋಧಕ, ಕಟ್ಟು ಮೂತ್ರ ನಿವಾರಕ, ರಕ್ತವರ್ಧಕ ಗುಣಗಳಿಂದ ಕೂಡಿದೆ. ಬಾಯಾರಿಕೆ, ದಾಹನಿವಾರಕ, ಕೆಮ್ಮು, ರಕ್ತಹೀನತೆ, ವಾತ ರಕ್ತ, ಚರ್ಮದೋಷ ನಿವಾರಕ, ಮೂಲವ್ಯಾಧಿ, ಯಕೃತ್ತಿನ ವಿಕಾರ, ಸಂಧಿವಾತಕ್ಕೆ ರಾಮಬಾಣ.
ಎಲ್ಲಾ ಬಗೆಯ ಜ್ವರಗಳು, ಮಲೇರಿಯಾ, ಡೆಂಗ್ಯೂ, ಅಜೀರ್ಣ ಜ್ವರ ಎಲ್ಲಕ್ಕೂ ಅಮೃತಕ್ಕೆ ಸಮನಾದ ಅಮೃತಬಳ್ಳಿಯಿಂದ ಉತ್ತಮ ಚಿಕಿತ್ಸೆಯಿದೆ. ಬೇರೆ ಪದ್ಧತಿಯ ಚಿಕಿತ್ಸೆ ಮಾಡಿದಾಗಲೂ, ನಂತರದಲ್ಲಿ ಒಳಗಡೆ ಇನ್ನೂ ಜ್ವರದ ಅಂಶ ಇರುತ್ತದೆ. ಅಂತಹ ಸಂದರ್ಭದಲ್ಲಿ ಅಮೃತಬಳ್ಳಿಯ ಚೂರ್ಣ, ಸತ್ವ ಅಥವಾ ಕಷಾಯದ ಬಳಕೆಯಿಂದ ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ಬೇವಿನ ಮರದ ತೊಗಟೆಯ ಒಳಗಿನ ಭಾಗವನ್ನು ಮಲೇರಿಯಾದಂತಹ ಜ್ವರದಲ್ಲಿ ಇದನ್ನು ಸೇರಿಸಿಕೊಡುವುದರಿಂದ ಶರೀರದಲ್ಲಿ ಸ್ವಲ್ಪವೂ ಜ್ವರದ ಅಂಶ ಉಳಿಯುವುದಿಲ್ಲ. ಜೊತೆಗೆ ಶರೀರ ದುರ್ಬಲವಾಗುವುದನ್ನು ತಪ್ಪಿಸುತ್ತದೆ. ಇದು ಸಂಜೀವಿನಿಯಂತಹ ಮೂಲಿಕೆ. ಅಮೃತಬಳ್ಳಿಯ ಎಲ್ಲಾ ಭಾಗಗಳು ಎಲೆ, ಕಾಂಡ, ಬಳ್ಳಿ ಎಲ್ಲವೂ ಉಪಯೋಗಿಸಲು ಸೂಕ್ತ.
ಭಾಗ ಎರಡರಲ್ಲಿ ಮುಂದುವರಿಯುವುದು…..