ಶಿವರಾಜಕುಮಾರ್ ಚಿತ್ರಗಳ ಮಧ್ಯೆ ಇಷ್ಟೊಂದು ಗ್ಯಾಪ್ ಆಗಿದ್ದೇ ಇಲ್ಲ. ಸಾಮಾನ್ಯವಾಗಿ ನಾಲ್ಕೈದು ತಿಂಗಳುಗಳ ಅಂತರದಲ್ಲಿ ಅವರ ಅಭಿನಯದ ಒಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಆದರೆ, ‘ಭಜರಂಗಿ 2’ ನಂತರ ಭರ್ಜರಿ ಎಂಟು ತಿಂಗಳುಗಳ ನಂತರ ‘ಬೈರಾಗಿ’ ಇದೇ ಜುಲೈ 01ರಂದು ಬಿಡುಗಡೆಯಾಗುತ್ತಿದೆ. ಮೊದಲು ಶಿವಣ್ಣ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಮಾಡಬೇಕು ಎಂಬುದು ಚಿತ್ರತಂಡದ ಆಸೆಯಾಗಿತ್ತಂತೆ. ಆದರೆ, ಪುನೀತ್ ನಿಧನದ ಕಾರಣ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದರಿಂದ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.ಈ ಚಿತ್ರದ ಬಗ್ಗೆ ಶಿವಣ್ಣ ಸಖತ್ ಎಕ್ಸೈಟ್ ಆಗಿದ್ದಾರೆ. ಕಾರಣ ಹಲವಿದೆ. ಪ್ರಮುಖವಾಗಿ, ಟಗರು ನಂತರ ಅವರು ಧನಂಜಯ್ ಜೊತೆಗೆ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರಿಗೆ ಹುಲಿವೇಷವಿದೆ. ಒಂದು ಹಾಡಿಗೆ ಶರಣ್ ಧ್ವನಿಯಾಗಿದ್ದಾರೆ. ಒಂದು ಹಾಡನ್ನು ಒಂದೇ ಟೇಕ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಹಲವು ವಿಶೇಷತೆಗಳಿಂದ ಕೂಡಿರುವ ಈ ಚಿತ್ರವು ಒಂದು ಬೇರೆ ಪ್ರಯತ್ನ ಎಂಬ ನಂಬಿಕೆ ಅವರದು.
‘ಬೈರಾಗಿ’ ಬಗ್ಗೆ ಮಾತನಾಡುವ ಶಿವಣ್ಣ, ‘ನಾನು ಇದುವರೆಗೂ ಹುಲಿ ವೇಷ ತೊಟ್ಟಿರಲಿಲ್ಲ. ಹುಲಿ ವೇಷ ಚಿತ್ರದ ಒಂದು ಭಾಗವೇ ಹೊರತು, ಅದೇ ಸಂಪೂರ್ಣ ಚಿತ್ರವಲ್ಲ. ಈ ಚಿತ್ರದಲ್ಲಿ ನನಗೆ ಮೂರು ಶೇಡ್ಗಳಿವೆ. ಏನೇ ಬದಲಾದರೂ ವ್ಯಕ್ತಿತ್ವ ಬದಲಾಗುವುದಿಲ್ಲ. ಮನುಷ್ಯನ ಆಸೆಗಳು, ವರ್ತನೆ ಬದಲಾಗುವುದಿಲ್ಲ ಎಂದು ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಇಷ್ಟಪಟ್ಟ ವ್ಯಕ್ತಿ ಬದಲಾದರೆ ಬಹಳ ನೋವಾಗುತ್ತದೆ. ಆ ಸಂದರ್ಭದಲ್ಲಿ ಏನು ಮಾಡಬೇಕು, ಆ ವ್ಯಕ್ತಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾ? ಅಥವಾ ತಿರುಗಿ ಬೀಳಬೇಕಾ? ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು’ ಎನ್ನುತ್ತಾರೆ ಶಿವರಾಜಕುಮಾರ್.ಚಿತ್ರಕ್ಕೆ ಮೊದಲು ‘ಶಿವಪ್ಪ’ ಎಂಬ ಹೆಸರನ್ನು ಇಡಲಾಗಿತ್ತು. ಆದರ, ಅದಕ್ಕಿಂತ ಪವರ್ಫುಲ್ ಆದ ಏನಾದರೂ ಶೀರ್ಷಿಕೆ ಸಿಗಬಹುದಾಗ ಎಂದು ಯೋಚಿಸುತ್ತಿದ್ದಾಗ, ನಿರ್ದೇಶಕ ಗುರುಪ್ರಸಾದ್ ಇಂಥದ್ದೊಂದು ಶೀರ್ಷಿಕೆ ಇಟ್ಟರೆ ಹೇಗೆ ಎಂದು ಸಲಹೆ ಕೊಟ್ಟಿದ್ದಾರೆ. ಅದು ಎಲ್ಲರಿಗೂ ಇಷ್ಟವಾಗಿದೆ. ಆದರೆ, ಈ ಶೀರ್ಷಿಕೆ ರಾಕ್ಲೈನ್ ವೆಂಕಟೇಶ್ ಅವರ ಬಳಿ ಇತ್ತಂತೆ. ಅದನ್ನು ಅವರಿಂದ ಪಡೆದು ಚಿತ್ರಕ್ಕೆ ಅಂತಿಮವಾಗಿ ‘ಬೈರಾಗಿ’ ಎಂದು ಇಡಲಾಗಿದೆ. ಚಿತ್ರಕ್ಕೆ ಈ ಶೀರ್ಷಿಕೆ ಹೇಳಿ ಮಾಡಿಸಿದಂತಿದೆ ಎಂಬ ಅಭಿಪ್ರಾಯ ಚಿತ್ರತಂಡದ್ದು.‘ಬೈರಾಗಿ’, ತಮಿಳಿನ ‘ಕಡುಗು’ ಚಿತ್ರದ ರೀಮೇಕ್ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಜತೆಗೆ ಪೃಥ್ವಿ ಅಂಬರ್, ಅಂಜಲಿ, ಯಶಾ ಶಿವಕುಮಾರ್, ಶಶಿಕುಮಾರ್ ಮುಂತಾದವರು ನಟಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣ ಸಾರ್ಥಕ್ ಈ ಚಿತ್ರದ ನಿರ್ಮಾಪಕರು.