ಕನ್ನಡ ಚಿತ್ರರಂಗಕ್ಕೆ ಸುಧಾರಾಣಿ ಎಂಟ್ರಿ ಕೊಟ್ಟು 36 ವರ್ಷಗಳಾಗಿವೆ. ಆನಂದ್ನಿಂದ ಇಲ್ಲಿಯವರೆಗೂ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ತುರ್ತು ನಿರ್ಗಮನ ಚಿತ್ರದಲ್ಲಿ ಮಾಡಿದಂತಹ ಪಾತ್ರವನ್ನು ಅವರು ತಮ್ಮ ಜೀವನದಲ್ಲೇ ಯಾವತ್ತೂ ಮಾಡಿರಲಿಲ್ಲವಂತೆ.
ಹಾಗಂತ ಕಳೆದ ವರ್ಷವೇ ಹೇಳಿಕೊಂಡಿದ್ದರು ಸುಧಾರಾಣಿ. ಚಿತ್ರವೊಂದರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ, ತುರ್ತು ನಿರ್ಗಮನ ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿದ್ದರು. ಆ ಚಿತ್ರದ ಬಿಡುಗಡೆಗೆ ಕಾದಿರುವುದಾಗಿ ಹೇಳಿದ್ದರು. ಆದರೆ, ಕೋವಿಡ್ನಿಂದ ಚಿತ್ರ ತಡವಾಗಿ ಅವರು ಇನ್ನೂ ಒಂದು ವರ್ಷ ಹೆಚ್ಚು ಕಾಯುವಂತಾಯಿತು. ಈಗ ಚಿತ್ರ ಬಿಡುಗಡೆಗೆ ಇನ್ನೆರಡೇ ದಿನಗಳಿರುವಾಗ, ಅವರು ಇನ್ನಷ್ಟು ಎಕ್ಸೈಟ್ ಆಗಿದ್ದಾರೆ. ಪ್ರೇಕ್ಷಕರು ತಮ್ಮ ಪಾತ್ರದ ಬಗ್ಗೆ ಏನು ಹೇಳುತ್ತಾರೋ ಎಂದು ಕಾಯುತ್ತಿದ್ದಾರೆ.ಇಷ್ಟಕ್ಕೂ ತುರ್ತು ನಿರ್ಗಮನ ಚಿತ್ರದಲ್ಲಿ ಸುಧಾರಾಣಿ ಅವರ ಪಾತ್ರವೇನು? ಮೇಲ್ನೋಟಕ್ಕೆ ಅವರದ್ದು ನರ್ಸ್ ಪಾತ್ರ. ಆದರೆ, ಅಷ್ಟಕ್ಕೇ ಸೀಮಿತವಲ್ಲ. ಅಲ್ಲೊಂದು ಟ್ವಿಸ್ಟ್ ಇದೆ. ಆ ಟ್ವಿಸ್ಟ್ ಏನು ಎಂಬುದನ್ನು ಸುಧಾರಾಣಿ ಬಿಟ್ಟುಕೊಡುವುದಿಲ್ಲ. ನೇರವಾಗಿ ಚಿತ್ರಮಂದಿರಗಳಲ್ಲೇ ನೋಡಿ ಎಂದು ಹೇಳುತ್ತಾರೆ.
ನನ್ನ ಪಾತ್ರ ನೋಡಿ ಪ್ರೇಕ್ಷಕರು ಸರ್ಪ್ರೈಸ್ ಆಗುವುದು ಹೌದು. ಇದುವರೆಗೂ ಕನ್ನಡದಲ್ಲಿ ಯಾವೊಂದು ಚಿತ್ರದಲ್ಲೂ ಇರದಂಥ ಒಂದು ವಿಚಿತ್ರ ಮತ್ತು ವಿಶೇಷವಾದ ಕಥೆ ತುರ್ತು ನಿರ್ಗಮನ ಚಿತ್ರದಲ್ಲಿದೆ. ನಿರ್ದೇಶಕ ಹೇಮಂತ್ ರಾವ್ ಅವರು ಕಥೆ ಹೇಳಿದಾಗ, ನನಗೆ ನಿಜವಾಗಲೂ ಆಶ್ಚರ್ಯವಾಯಿತು. ಒಂದು ಕಥೆಯನ್ನು ಮತ್ತು ವಿಷಯವನ್ನು ಹೀಗೂ ಹೇಳಬಹುದಾ ಎಂದು ಆಶ್ಚರ್ಯವಾಯಿತು. ಹೇಮಂತ್ ಮತ್ತು ತಂಡದವರು ಅದೆಷ್ಟು ಚೆನ್ನಾಗಿ ತಮ್ಮ ಕೆಲಸ ಮಾಡಿದ್ದರೆಂದರೆ, ಪಕ್ಕಾ ತಯಾರಾಗಿ ಬಂದಿದ್ದರು. ಒಂದು ಬೌಂಡ್ ಸ್ಕ್ರಿಪ್ಟ್ ತೆಗೆದುಕೊಂಡು ಬಂದು ಕಥೆ ಮತ್ತು ಪಾತ್ರವನ್ನು ನನಗೆ ವಿವರಿಸಿದರು. ಅವರು ಅಚ್ಚುಕಟ್ಟುತನ ನೋಡಿ ನನಗೆ ಬಹಳ ಖುಷಿಯಾಯಿತು. ಅವರ ಪ್ಲಾನಿಂಗ್ ಅದೆಷ್ಟು ಚೆನ್ನಾಗಿತ್ತು ಎಂದರೆ ಚಿತ್ರೀಕರಣದಲ್ಲಿ ಒಂದೇ ಒಂದು ದಿನ ಸಮಸ್ಯೆ ಆಗಲಿಲ್ಲ ಎಂದು ಹೇಳಿಕೊಳ್ಳುತ್ತಾರೆ ಸುಧಾರಾಣಿ.
ಕಥೆಯ ಬಗ್ಗೆ ಏನಾದರೂ ಹೇಳಿ ಎಂದರೆ, ಅವರು ಹೆಚ್ಚೇನೂ ವಿಷಯಗಳನ್ನು ಬಿಟ್ಟುಕೊಡುವುದಿಲ್ಲ. ಇದೊಂದು ಫ್ಯಾಂಟಸಿ ಚಿತ್ರ ಎನ್ನುತ್ತಾರೆ. ಸೈನ್ಸ್ ಫಿಕ್ಷನ್ ಮತ್ತು ಟೈಮ್ ಲೂಪ್ ಅಂಶಗಳು ಚಿತ್ರದಲ್ಲಿವೆ. ಇಂಥದ್ದೊಂದು ಚಿತ್ರವು ಎಲ್ಲರಿಗೂ ಇಷ್ಟವಾಗುವ ನಂಬಿಕೆ ಇದೆ ಎನ್ನುವ ಅವರು, ಮುಂದೆ ಇಂಥ ಹಲವು ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ. ನಾನು ಈ ಹಿಂದೆಯೂ ಹಲವು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದೇನೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈ ಅನುಭವವೇ ಬೇರೆ. ಈ ಪಾತ್ರ ಪ್ರೇಕ್ಷಕರಿಗೆ ಇಷ್ಟವಾದರೆ, ಮುಂದೆ ಈ ತರಹದ ಇನ್ನಷ್ಟು ಪ್ರಯೋಗಗಳನ್ನು ಮಾಡಬಹುದು ಎಂಬುದು ಅವರ ಅಭಿಪ್ರಾಯ.
ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸಿರುವ ತುರ್ತು ನಿರ್ಗಮನ ಚಿತ್ರವನ್ನು ಹೇಮಂತ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಸುನೀಲ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಹಿತಾ ಚಂದ್ರಶೇಖರ್, ಸಂಯುಕ್ತಾ ಹೆಗ್ಡೆ, ರಾಜ್ ಬಿ ಶೆಟ್ಟಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ ಮತ್ತು ಧೀರೇಂದ್ರ ದಾಸ್ ಸಂಗೀತ ಈ ಚಿತ್ರಕ್ಕಿದೆ.