ಇದು ನೈಜ ವ್ಯಕ್ತಿಯೊಬ್ಬರ ಕಥೆ. ಹಾಗಂತ ಇದು ಸಂಪೂರ್ಣವಾಗಿ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಲ್ಲ. ಒಂದಿಷ್ಟು ನೈಜ ಅಂಶಗಳಿಗೆ, ಸಾಕಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ, ಮಾಡಿರುವ ಪ್ರಯತ್ನವೇ ಈ ವಾರ ಬಿಡುಗಡೆಯಾಗುತ್ತಿರುವ ಹರಿಕಥೆ ಅಲ್ಲ ಗಿರಿಕಥೆ.
ಕಳೆದ ವರ್ಷ ಬಿಡುಗಡೆಯಾದ ಹೀರೋ ಚಿತ್ರದಲ್ಲಿ ನಗಿಸುವ ಪ್ರಯತ್ನ ಮಾಡಿದ್ದರು ರಿಷಭ್. ನಂತರ ಗರುಡ ಗಮನ ರಿಷಭ ವಾಹನ ಗಂಭೀರ ಚಿತ್ರವಾಗಿತ್ತು. ಈಗ ಮತ್ತೊಮ್ಮೆ ಕಾಮಿಡಿ ಚಿತ್ರವೊಂದರ ಮೂಲಕ ವಾಪಸ್ಸಾಗುತ್ತಿದ್ದಾರೆ ರಿಷಭ್. ಅವರು ಹೇಳುವಂತೆ ಇದೊಂದು ಸಂಪೂರ್ಣ ಮನರಂಜನೆಯ ಪ್ಯಾಕೇಜ್ ಅಂತೆ.ಇದು ಚಿತ್ರ ನಿರ್ದೇಶನ ಮಾಡಬೇಕೆಂದು ಕನಸು ಹೊತ್ತಿರುವ ಮಿಡ್ಲ್ ಕ್ಲಾಸ್ ಯುವಕನೊಬ್ಬನ ಕಥೆಯಂತೆ. ಆತ ಚಿತ್ರವೊಂದರ ನಿರ್ದೇಶನ ಮಾಡುವುದಕ್ಕೆ ಹೊರಟಾಗ, ಏನೆಲ್ಲ ಆಗುತ್ತದೆ ಎಂಬುದನ್ನು ಕಾಮಿಡಿ ರೂಪದಲ್ಲಿ ಈ ಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ರಿಷಭ್.
ಇದೊಂದು ಕಾಲ್ಪನಿಕ ಚಿತ್ರವಾದರೂ, ಹಿಂದೊಮ್ಮೆ ತಾವು ಒಮ್ಮೆ ಸ್ಟ್ರಗ್ಲಿಂಗ್ ನಿರ್ದೇಶಕನಾಗಿದ್ದ ಸಂದರ್ಭದಲ್ಲಿ ನೋಡಿದ ಕೆಲವು ಸಂಗತಿಗಳನ್ನು ಈ ಚಿತ್ರದಲ್ಲಿ ಅಲ್ಲಲ್ಲಿ ಬಳಸಿಕೊಂಡಿರುವುದಾಗಿ ಅವರು ಹೇಳುತ್ತಾರೆ. 2004ರ ಕೊನೆಯಲ್ಲಿ ನಾನು ಎ.ಎಂ.ಆರ್. ರಮೇಶ್ ಅವರ ಸೈನೈಡ್ ಚಿತ್ರದಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಂತರ ಗಂಡ-ಹೆಂಡತಿ ಚಿತ್ರದಲ್ಲಿ ನನಗೆ ಕ್ಲಾಪ್ ಬಾಯ್ ಕೆಲಸ ಸಿಕ್ಕಿತು. ಆ ನಂತರ ಒಂದಿಷ್ಟು ಚಿತ್ರಗಳಿಗೆ ಕೆಲಸ ಮಾಡಿದರೂ, ನಿರ್ದೇಶಕನಾಗುವುದಕ್ಕೆ ಅವಕಾಶ ಸಿಗಲಿಲ್ಲ. ಒಳ್ಳೆಯ ಕಾರ್ ಇಟ್ಟುಕೊಂಡವರು, ಮೈತುಂಬಾ ಒಡವೆ ಹಾಕಿದವರೆಲ್ಲ ನಮಗೆ ನಿರ್ಮಾಪಕರಾಗಿ ಕಾಣುತ್ತಿದ್ದರು. ಅವರನ್ನು ಚಿತ್ರ ನಿರ್ಮಿಸುವುದಕ್ಕೆ ಕ್ಯಾಚ್ ಹಾಕುವ ಪ್ರಯತ್ನ ಮಾಡುತ್ತಿದ್ದೆವು. ಆದರೆ, ಯಾವುದೂ ಸೆಟ್ ಆಗುತ್ತಿರಲಿಲ್ಲ. ಹೀಗೆ ಸ್ಟ್ರಗ್ಲಿಂಗ್ ಸಮಯದಲ್ಲಿ ಆದ ಒಂದಿಷ್ಟು ಅಂಶಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ರಿಷಭ್.
ಇನ್ನು, ಅವರು ಈ ಚಿತ್ರದಲ್ಲಿ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರ ಮಗನ ಪಾತ್ರ ಮಾಡಿದ್ದಾರೆ. ಇಲ್ಲಿ ಕೃಷ್ಣ ಅವರು ತಮ್ಮ ನಿಜಜೀವನದ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಕೃಷ್ಣ ಅವರು ತಮ್ಮ ನಿಜಜೀವನದಲ್ಲಿ ನಿರ್ದೇಶಕನಾಗುವುದಕ್ಕೆ ಎಷ್ಟು ಕಷ್ಟಪಟ್ಟರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಸಾವಿರ ಚಿತ್ರಗಳಲ್ಲಿ ನಟಿಸಿದರೂ, ಅವರಿಗೆ ಕೊನೆಗೂ ನಿರ್ದೇಶಕರಾಗುವುದಕ್ಕೆ ಸಾಧ್ಯವಾಗಲೇ ಇಲ್ಲ. ಅವರ ಮಗನಾಗಿ ರಿಷಭ್ ಇಲ್ಲಿ ನಟಿಸಿದ್ದಾರೆ.
ರಿಷಭ್ಗೆ ನಾಯಕಿಯರಾಗಿ ರಚನಾ ಇಂದರ್ ಮತ್ತು ತಪಸ್ವಿನಿ ಪೊಣ್ಣಚ್ಚ ಇದ್ದಾರೆ. ಪ್ರಮೋದ್ ಶೆಟ್ಟಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ಮೈಸೂರಿನ ಭಾಗದಲ್ಲೇ ಚಿತ್ರೀಕರಣಗೊಂಡಿದೆ. ಸಂದೇಶ್ ಪ್ರೊಡಕ್ಷನ್ಸ್ನಡಿ ಸಂದೇಶ್ ಎನ್ ನಿರ್ಮಿಸಿರುವ ಈ ಚಿತ್ರವನ್ನು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಜೊತೆಯಾಗಿ ನಿರ್ರ್ದೇಶಿಸಿದ್ದಾರೆ.