ಹಲವಾರು ವರ್ಷಗಳಿಂದ ಚಿತ್ರರಂಗದ ಜೊತೆ ಸಂಪರ್ಕ ಇಟ್ಟುಕೊಂಡಿರುವ ರಘು ಸಿಂಗಂ ಅವರು ಯಾವ ಹಂತದಲ್ಲೂ ಕಾಂಪ್ರಮೈಸ್ ಆಗದೆ, ಅಪಾರ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಗೌಳಿ. ‘ಸೂರ’ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ನಾಯಕನಾಗಿ ಶ್ರೀನಗರ ಕಿಟ್ಟಿ ಹಿಂದೆಂದೂ ಮಾಡಿರದಂಥ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕನ ಹೆಸರು ಗೌಳಿ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ
ಈ ಚಿತ್ರದ ಮೂಲಕ ನಿರ್ದೇಶಕರು ತುಂಬಾ ಎಮೋಷನಲ್ ಆಗಿರುವ ವ್ಯಕ್ತಿಯೊಬ್ಬನ ಜೀವನದ ಏಳು, ಬೀಳುಗಳ ಪಯಣವನ್ನು ಹೇಳುತ್ತಿದ್ದಾರೆ.
ಸದ್ಯ ಡಬ್ಬಿಂಗ್ ಕೊನೇ ಹಂತದಲ್ಲಿರುವ ಗೌಳಿ ಚಿತ್ರವು ತನ್ನ ಅದ್ದೂರಿ ಮೇಕಿಂಗ್, ಹೀರೋ ವಿಶೇಷ ಲುಕ್, ಕಾಸ್ಟೂಮ್ಸ್, ಲೊಕೇಶನ್, ಹೀಗೆ ಹಲವಾರು ವಿಶೇಷತೆಗಳಿಂದ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ವೈರಲ್ ಆಗಿರುವ ಟೀಸರ್ ನಲ್ಲಿರುವ ಹಾಲಿವುಡ್ ಸ್ಟೈಲ್ ಮೇಕಿಂಗ್ ಕಂಡು ಕನ್ನಡ ಅಲ್ಲದೆ ಅನ್ಯ ಭಾಷೆಯ ಚಿತ್ರೋದ್ಯಮಿಗಳೂ ಬೆರಗಾಗಿದ್ದಾರೆ.
ಪಾತ್ರಕ್ಕಾಗಿಯೇ ನಾಯಕ ಕಿಟ್ಟಿ ಅವರು ಉದ್ದವಾದ ಕುರುಚಲು ಗಡ್ಡ ಬಿಟ್ಟುಕೊಂಡಿದ್ದು, ಇಡೀ ಸಿನಿಮಾದಲ್ಲಿ ಕಿಟ್ಟಿ ಅವರದು ಇದೇ ಗೆಟಪ್ ಇರುತ್ತದೆ. ವಿಶೇಷವಾಗಿ ಹೀರೋ, ವಿಲನ್ ಗುಂಪಿನ ನಡುವಿನ ಭರ್ಜರಿ ಸಾಹಸ ದೃಶ್ಯಕ್ಕಾಗಿ ಬೆಳೆದುನಿಂತ ೩ ಎಕರೆ ಬಾಳೆತೋಟ ಹಾಗೂ ೨ ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಅಲ್ಲಿ ವಿಶೇಷ ಸೆಟ್ ಹಾಕಿ ಫೈಟ್ ಸೀನ್ ಸೆರೆಹಿಡಿಯಲಾಗಿದೆ. ಕಿಟ್ಟಿ,ಯಶ್ ಶೆಟ್ಟಿ ಜೊತೆಗೆ ೧೩೦ಕ್ಕೂ ಹೆಚ್ಚು ಸಾಹಸ ಕಲಾವಿದರಲ್ಲದೆ ನುರಿತ ಫೈಟರ್ಸ್ ಭಾಗವಹಿಸಿದ್ದ ಇದೊಂದೇ ಆ್ಯಕ್ಷನ್ ಗೆ ನಿರ್ಮಾಪಕರು ಸುಮಾರು ೩೫ ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ. ಇದಲ್ಲದೆ ಯಲ್ಲಾಪುರ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲೂ ಇಂಥದ್ದೇ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಉತ್ತರ ಕರ್ನಾಟಕದ ಸೊಗಡಿನ ಕಥೆ ಇದಾಗಿರುವುದರಿಂದ ಶಿರಸಿ, ಯಲ್ಲಾಪುರ, ಹೊನ್ನಾವರ ಹಾಗೂ ಹುಬ್ಬಳ್ಳಿ ಹೀಗೆ ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡುವಂಥ ಲೊಕೇಶನ್ ಗಳಲ್ಲೇ ಶೂಟ್ ಮಾಡಲಾಗಿದೆ.
ರಘು ಸಿಂಗಂ ಅವರು ಪುತ್ರ ಸೋಹನ್ ಹೆಸರಿನಲ್ಲಿ ಸೋಹನ ಫಿಲಂ ಫ್ಯಾಕ್ಟರಿ ಎಂಬ ಬ್ಯಾನರ್ ಆರಂಭಿಸಿ ಆ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗೌಳಿಗ ಕುಟುಂಬದ ನಾಯಕನಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ನಾಯಕಿ ಪಾವನಾಗೌಡ ಮೊದಲಬಾರಿಗೆ ಪಕ್ಕಾ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಚಿತ್ರದ ಪ್ರತಿ ಪಾತ್ರಗಳ ವಸ್ತ್ರವಿನ್ಯಾಸವೂ ಗಮನ ಸೆಳೆಯುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಶೈಲಿಯ ಕಾಸ್ಟೂಮ್ಸ್ ಎಲ್ಲಾ ಪಾತ್ರಗಳಲ್ಲಿದೆ. ರಂಗಾಯಣ ರಘು, ಯಶ್ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ಒಂದಷ್ಟು ಪಾತ್ರಗಳ ಲುಕ್ಕೇ ವಿಭಿನ್ನವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸಮಾಡಿ ಅನುಭವ ಹೊಂದಿರುವ ಸೂರ ಇದೇ ಮೊದಲಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕುವ ಮೂಲಕ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಕೂಡ ಶೂರ ಅವರದೇ. ನಿರ್ಮಾಪಕ, ನಿರ್ದೇಶಕ ಇಬ್ಬರಿಗೂ ಈ ಚಿತ್ರ ಮೊದಲ ಪ್ರಯತ್ನ.
ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ೩ ಹಾಡುಗಳು ಮೂಡಿಬಂದಿವೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂ ಮೋರ್, ಅರ್ಜುನ್ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.