Garadi 3/5
ಮಲ್ಟಿ ಜಿಮ್ಮುಗಳ ಜಮಾನಾದಲ್ಲಿ ಗರಡಿಮನೆ ಕಲ್ಚರು ಬಹುತೇಕ ಕಾಣೆಯಾಗಿದೆ. ಈ ಹೊತ್ತಿನಲ್ಲಿ ಯೋಗರಾಜ ಭಟ್ಟರು ಧಿಗ್ಗನೆ ಎದ್ದು ಕುಂತು ʻಗರಡಿʼ Garadi Review ಎನ್ನುವ ಸಿನಿಮಾವನ್ನು ರೂಪಿಸಿದ್ದಾರೆ. ಇದೇ ವಾರ ಈ ಚಿತ್ರ ತೆರೆಗೆ ಬಂದಿದೆ.
ಗರಡಿ ಮನೆಯಲ್ಲಿ ತಯಾರಾದವರ ಜಂಗೀ ಕುಸ್ತಿಯ ಜೊತೆಗೆ ಶ್ರೀಮಂತ ಮನೆತನದ ಪ್ರತಿಷ್ಟೆಯೂ ಸೇರಿಕೊಂಡಿರುತ್ತದೆ. ಕುಸ್ತಿ ಮತ್ತು ಅದರ ಗೆಲುವು ತನ್ನ ಮನೆತನಕ್ಕಷ್ಟೇ ಸೀಮಿತವಾಗಿರಬೇಕು ಅಂತಾ ಬಯಸಿದವನು ರಾಣೆ. ನಿಯತ್ತಿನಿಂದ ಆಡಿ ಗೆದ್ದ ಬಂಡೆ ಸೀನಪ್ಪನ ಕುತ್ತಿಗೆ ಮುರಿದು ಕೊಂದಿರುತ್ತಾನೆ. ಬಂಡೆ ಸೀನನ ಇಬ್ಬರು ಮಕ್ಕಳು ಅನಾಥರಾಗಿರುತ್ತಾರೆ. ಒಬ್ಬ ಅಪರಾಧ ಮಾಡಿ ಜೈಲು ಸೇರುತ್ತಾನೆ. ಮತ್ತೊಬ್ಬನನ್ನು ಗರಡಿ ಮನೆಯ ಕೋರಾಪಿಟ್ ರಂಗಪ್ಪ ಸಾಕಿ ಬೆಳೆಸಿರುತ್ತಾನೆ. ಯಾವ ಕಾರಣಕ್ಕೂ ಈ ಹುಡುಗ ಕುಸ್ತಿ ಪಟ್ಟುಗಳನ್ನು ಕಲಿಯಬಾರದು ಅನ್ನೋದು ರಂಗಪ್ಪನ ನಿರ್ಧಾರ. ಆದರೆ ಹೀರೋ ಸೂರ್ಯ ಅಖಾಡಕ್ಕೆ ಇಳಿಯದೇನೇ ಏಕಲವ್ಯನಂತೆ ಹೇಗೆ ಕುಸ್ತಿ ಕಲಿಯುತ್ತಾನೆ? ಮೊಬೈಲು ಹಿಡಿದು ವಿಡಿಯೋ ಮಾಡುತ್ತಾ ತಿರುಗುವ ಹುಡುಗಿಯಿಂದ ಎದುರಾಗುವ ಘಟನೆಗಳೇನು? ರಾಣೆ ಕುಟಂಬದ ಕುಡಿಗಳು ಏನೇನು ಅನಾಹುತ ಮಾಡುತ್ತಾರೆ? ಅದರ ಪ್ರತಿಫಲಗಳೇನು? ಎಂಬಿತ್ಯಾದಿ ವಿಚಾರಗಳ ಸುತ್ತ ಬೆಸೆದುಕೊಂಡ ಕತೆ ʻಗರಡಿʼ ಚಿತ್ರದ್ದು.
ದನ ಕಾಯೋನು ನಂತರ ಯೋಗರಾಜಭಟ್ಟರು ಕೈಯಿಟ್ಟಿರುವ ಭಿನ್ನ ಪ್ರಾಕಾರದ ಕಲಾಕೃತಿ ಇದು. ಯಾವಾಗಲೂ ಪ್ರೀತಿ, ತುಂಟಾಟಗಳ ಜೊತೆ ಗಂಭೀರವಾದ ಪ್ರೇಮಕತೆಯನ್ನು ಹೇಳುವ ಯೋಗರಾಜ ಭಟ್ಟರು ಈ ಸಲ ತಮ್ಮದಲ್ಲದ ಕಥಾಸ್ತುವನ್ನು ಕೈಗೆತ್ತಿಕೊಂಡು ಪ್ರಯೋಗ ನಡೆಸಿದ್ದಾರೆ. ಇಡೀ ಸಿನಿಮಾವನ್ನು ಒಂದು ಹಿಡಿಯಲ್ಲಿಡಿದು ನೋಡಿದಾಗ ಇನ್ನೊಂದಿಷ್ಟು ಗಟ್ಟಿತನ ಬೇಕಿತ್ತು ಅನ್ನಿಸುತ್ತದೆ. ಯಶಸ್ ಸೂರ್ಯ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತೀ ದೊಡ್ಡ ಅವಕಾಶ ಇದು. ಸಾಧ್ಯವಾದಷ್ಟೂ ಶ್ರಮಿಸಿ ಯಶಸ್ ಪಾತ್ರ ನಿರ್ವಹಿಸಿದ್ದಾರೆ. ತೆರೆಮೇಲೆ ಕೋರಾಪಿಟ್ ರಂಗಣ್ಣನ ಪಾತ್ರದಲ್ಲಿ ಸ್ವತಃ ನಿರ್ಮಾಪಕರಾಗಿರುವ ಬಿ.ಸಿ.ಪಾಟೀಲ್ ಮತ್ತು ಅವರ ಖಾಸಾ ಅಳೀಮಯ್ಯ ಸುಜಯ್ ಬೇಲೂರು ಪ್ರಮುಖ ಖಳನಾಗಿ ಕಾಣಿಸಿರುವುದು ಬಹುಶಃ ಯಶಸ್ ಸೂರ್ಯ ಸ್ಕ್ರೀನ್ ಸ್ಪೇಸನ್ನು ಕಡಿಮೆ ಮಾಡಿರಲೂ ಬಹುದು!
ಇದರ ಜೊತೆಗೆ ಕಡೆಯ ಹದಿನೈದು ನಿಮಿಷಗಳಷ್ಟು ನಟ ದರ್ಶನ್ ಅವರ ಪಾಲಾಗಿದೆ. ಹಿಂದೆ ʻಚೌಕʼ ಸಿನಿಮಾದಲ್ಲಿ ದರ್ಶನ್ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡು ಮ್ಯಾಜಿಕ್ ಸೃಷ್ಟಿಸಿದ್ದರು. ʻಗರಡಿʼ ಸಿನಿಮಾದಲ್ಲಿ ಕೂಡಾ ಹೆಚ್ಚೂ ಕಡಿಮೆ ಅದೇ ರಿಪೀಟ್ ಆಗಿದೆ. ದರ್ಶನ್ ಪಾಲ್ಗೊಂಡಿರುವ ದೃಶ್ಯ ಬೇರೆಯದ್ದೇ ಕ್ವಾಲಿಟಿಯಲ್ಲಿ ರೂಪುಗೊಂಡಿದೆ. ದರ್ಶನ್ ಅವರ ಭಾಗವನ್ನು ಹೊರತು ಪಡಿಸಿ ಉಳಿದಂತೆ ಚಿತ್ರದ ಬೇರೆ ದೃಶ್ಯಗಳ ಛಾಯಾಗ್ರಹಣ ಅಲ್ಲಲ್ಲಿ ಕೈಕೊಟ್ಟಿದೆ. ನಿರಂಜನ್ ಬಾಬು ಸುಮ್ಮನೇ ಕ್ಯಾಮೆರಾವನ್ನು ಅಲುಗಾಡಿಸಿ ಡಿಸ್ಟರ್ಬ್ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ನಿರ್ದೇಶನದ ʻಅನಿಸಬಹುದು ನಿನಗೆ…ʼ ಹಾಡು ತುಂಬಾನೇ ಮುದ್ದಾಗಿದೆ. ಶಶಾಂಕ್ ಶೇಷಗಿರಿ ಹಾಡಿರುವ ಗರಡಿ ಟೈಟಲ್ ಸಾಂಗ್ ಸಖತ್ತಾಗಿದೆ. ನಿಶ್ವಿಕಾ ನಾಯ್ಡು ಹಲಿಗಿಯನ್ನು ಜಬರ್ದಾಸ್ತಾಗಿ ಕುಣಿಸಿದ್ದಾರೆ!
ನಟನೆಯ ವಿಚಾರಕ್ಕೆ ಬಂದರೆ, ಕೋರಾಪಿಟ್ ರಂಗಪ್ಪನ ಪಾತ್ರಕ್ಕೆ ಬಿಸಿ ಪಾಟೀಲ್ ಹೇಳಿಮಾಡಿಸಿದಂತಿದ್ದಾರೆ. ಸುಜಯ್ ಬೇಲೂರು ದನಿ ಚೆಂದ ಇದೆ. ಇನ್ನೊಂದಿಷ್ಟು ಪಳಗಿದರೆ ಪರ್ಮನೆಂಟಾಗಿ ನಟನಾಗಿ ಉಳಿಯಬಹುದು. ದೊಡ್ಡ ಗಾತ್ರದ ರಘು ಎನ್ನುವ ನಟ ನೋಡಲಷ್ಟೇ ಶಕ್ತಿಶಾಲಿ. ನಟನೆ ತುಂಬಾನೇ ವೀಕು. ರವಿಶಂಕರ್ ಎಂದಿನ ನಟನೆಯ ಜೊತೆಗೆ ಅಲ್ಲಲ್ಲಿ ಕಣ್ಣು ಮಿಟುಕಿಸಿ ಬೋನಸ್ಸು ಕೊಟ್ಟಿದ್ದಾರೆ. ಸೋನಲ್ ಪಾತ್ರದ ರೀತಿಯೇ ಕೃತಕವಾಗಿರುವುದರಿಂದ ಸಹಜವಾಗಿ ಏನೂ ಬಯಸುವಂತಿಲ್ಲ. ಧರ್ಮಣ್ಣ ಕಡೂರು ಮಾತ್ರ ಯಥಾಪ್ರಕಾರವಾಗಿ ಸೀರಿಯಸ್ಸಾಗಿ ನಟಿಸಿ, ನಗಿಸುತ್ತಾರೆ!
ಘಮಘಮ ಪುಳಿಯೋಗರೆ ಮಾಡುವ ಅಡುಗೆ ಭಟ್ಟ ಏಕಾಏಕಿ ಬಿರಿಯಾನಿ ಬೇಯಿಸಿ ಬಡಿಸಿದಂತೆ ಭಟ್ಟರು ʻಗರಡಿʼಯನ್ನು ಕಟ್ಟಿ ತೆರೆಗರ್ಪಿಸಿದ್ದಾರೆ. ತೀರಾ ಫ್ಲೇವರು ಕೆಟ್ಟಿಲ್ಲ ಎನ್ನುವ ಸಮಾಧಾನದೊಂದಿಗೆ ʻಗರಡಿʼಯನ್ನು ಎಲ್ಲ ವರ್ಗದವರೂ ಕೂತು ನೋಡಬಹುದು!