Sheela 3/5
ಶೀಲ ಹೆಸರಿನ ಚಿತ್ರವೊಂದು ಈ ವಾರ ತೆರೆ ಕಂಡಿದೆ. ಇದು ಏಕಕಾಲದಲ್ಲಿ ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ರಾಗಿಣಿ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂನಲ್ಲಿ ಕಳೆದವಾರವೇ ಈ ಚಿತ್ರ ಬಿಡುಗಡೆಗೊಂಡಿತ್ತು. ಈಗ ಕನ್ನಡದಲ್ಲೂ ತೆರೆಗೆ ಬಂದಿದೆ.
ಗಂಡನನ್ನು ಕಳೆದುಕೊಂಡ ಹೆಣ್ಣುಮಗಳು. ಸಾಲ ಕೊಟ್ಟವರ ಹಿಂಸೆ ತಡೆಯಲಾರದೆ, ತನ್ನ ರೆಸಾರ್ಟನ್ನು ಮಾರಾಟ ಮಾಡಲು ಹೊರಟಿರುತ್ತಾಳೆ. ಇನ್ನೇನು ಬೆಳಗಾದರೆ ಆ ಪ್ರಾಪರ್ಟಿ ಮಾರಾಟವಾಗಿ, ಅದರ ಬಾಬ್ತು ಈಕೆಯ ಕೈಸೇರಬೇಕಿರುತ್ತದೆ. ಅಷ್ಟರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ. ತನ್ನ ಸುತ್ತ ಏನಾಗುತ್ತಿದೆ. ಯಾಕೆ ದುಷ್ಟಕೂಟ ತನ್ನನ್ನು ಆವರಿಸಿಕೊಂಡಿದೆ? ಅಂತಾ ತಿಳಿದುಕೊಳ್ಳುವ ಮುಂಚೆಯೇ ಆಕ್ರಮಣ, ಅನಾಹುತಗಳೆಲ್ಲಾ ಘಟಿಸುತ್ತವೆ. ಇದು ಶೀಲ ಚಿತ್ರದ ಒಟ್ಟಾರೆ ಸಾರಾಂಶ. ತೀರಾ ಸಣ್ಣದೊಂದು ಎಳೆಯನ್ನಿಟ್ಟುಕೊಂಡು ನೋಡುಗರಿಗೆ ಥ್ರಿಲ್ಲಾಗುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದ ಕತೆ ಬಹುತೇಕ ಒಂದು ರೆಸಾರ್ಟ್ ಥರದ ಬಿಲ್ಡಿಂಗಿನಲ್ಲೇ ನಡೆದುಹೋಗುತ್ತದೆ. ಒಂದೇ ಲೊಕೇಷನ್ನಿನಲ್ಲಿ, ರಾತ್ರಿ ನಡೆಯುವ ಘಟನೆಯ ಸುತ್ತ ಈ ಸಿನಿಮಾ ಸುತ್ತುವರೆದಿದೆ. ಅರುಣ್ ಕೂತೇದತ್ ಕ್ಯಾಮೆರಾ ಕೆಲಸ, ಅಲೋಶ್ಯಾ ಪೀಟರ್ ಸಂಗೀತ ಸಿನಿಮಾದ ಕಂಟೆಂಟ್‌ಗೆ ಪೂರಕವಾಗಿದೆ. ಅವಿನಾಶ್, ಶೋಭರಾಜ್, ಚಿತ್ರಾ ಶೆಣೈ, ರಾಗಿಣಿಯನ್ನು ಹೊರತುಪಡಿಸಿ ಮಿಕ್ಕ ಕಲಾವಿದ, ತಂತ್ರಜ್ಞರೆಲ್ಲಾ ಕೇರಳದವರೇ ಆಗಿದ್ದಾರೆ. ನಿರ್ದೇಶಕ ಬಾಲು ನಾರಾಯಣ್ ಈ ಚಿತ್ರವನ್ನು ದ್ವಿಭಾಷೆಯಲ್ಲಿ ಯಾವ ಕಾರಣಕ್ಕೆ ರೂಪಿಸಿದರೋ ಗೊತ್ತಿಲ್ಲ. ಹೆಚ್ಚೂ ಕಮ್ಮಿ ಇದು ಮಲಯಾಳದ ಪ್ರೇಕ್ಷಕರಿಗೆ ಮಾತ್ರ ಹಿಡಿಸುವಂತಾ ಕಥಾವಸ್ತುವನ್ನು ಹೊಂದಿದೆ. ಕಣ್ಮುಂದೆ ನಡೆಯುತ್ತಿರುವ ಘಟನೆಯ ಹೊರತಾಗಿ, ಅನೇಕ ವಿವರಗಳನ್ನು ದಾಖಲಿಸುವ ಪ್ರಯತ್ನವನ್ನೇ ನಿರ್ದೇಶಕ ಬಾಲು ನಾರಾಯಣ್ ಮಾಡಿಲ್ಲ. ಒಟ್ಟಾರೆ ಘಟನಾವಳಿಗಳ ಹಿಂದಿರುವ ಉದ್ದೇಶ ಹಣ ಅನ್ನೋದೇನೋ ನಿಜ. ಆದರೆ, ನಿಖರವಾದ ಉದ್ದೇಶ, ವಿಚಾರಗಳೇನು ಅನ್ನೋದೇ ಇಲ್ಲಿ ಅನಾವರಣಗೊಂಡಿಲ್ಲ.
ಕೆಲವಾರು ಲಾಜಿಕ್ಕುಗಳು ಮಿಸ್ಸಾಗಿವೆ ಅನ್ನೋದನ್ನು ಬಿಟ್ಟರೆ, ಮಿಕ್ಕಂತೆ ಶೀಲಾ ಎಲ್ಲೂ ಬೋರು ಹೊಡೆಸದಂತೆ ನೋಡಿಸಿಕೊಂಡು ಹೋಗುತ್ತದೆ. ರಾಗಿಣಿ ಇಲ್ಲಿ ಗುಣಮಟ್ಟದ ಅಭಿನಯ ನೀಡಿದ್ದಾರೆ. ಮಹಿಳಾ ಪ್ರಧಾನ ಥ್ರಿಲ್ಲರ್ ಸಿನಿಮಾಗಳನ್ನು ನೋಡಲು ಬಯಸುವ ಪ್ರೇಕ್ಷಕರು ಒಮ್ಮೆ ಶೀಲಾ ನೋಡಬಹುದು!