Dr.56 4/5
ಕೆಲವೊಂದು ಕೊಲೆಗಳಿಗೆ ಕಾರಣವೇ ಗೊತ್ತಾಗೋದಿಲ್ಲ. ಅದೂ ಹೈ ಪ್ರೊಫೈಲ್ ಮರ್ಡರ್ ಕೇಸುಗಳು ಕಗ್ಗಂಟಾಗೇ ಉಳಿದುಬಿಡುತ್ತವೆ. ಸ್ಥಳೀಯ ಪೊಲೀಸರು ಕಂಡು ಹಿಡಿಯಲಾರದೇ ಕೈಬಿಟ್ಟ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗುತ್ತದೆ. ಒಂದಕ್ಕೊಂದು ಸೂತ್ರ ಸಂಬಂಧ ಇಲ್ಲದ, ಸಣ್ಣ ಸುಳಿವೂ ಸಿಗದ ಕೊಲೆ ಕೇಸುಗಳನ್ನು ಬೇಧಿಸುವುದು ಬಲು ತ್ರಾಸದ ಕೆಲಸ. ಭಯಾನಕ ಕೊಲೆಗಳು ಮತ್ತು ಅದರ ಸುತ್ತಲಿನ ವಿದ್ಯಮಾನಗಳನ್ನು ರೋಚಕತೆಯೊಂದಿಗೆ ಬೆರೆಸಿ ಸಿನಿಮಾ ರೂಪ ಕೊಡಲಾಗಿದೆ. ಅದಕ್ಕಿಟ್ಟ ಹೆಸರು ಡಾ. 56…!
ಇವತ್ತು ವೈದ್ಯಕೀಯ ವಿಜ್ಞಾನ ಜಗತ್ತು ವಿಪರೀತ ಮುಂದುವರೆದಿದೆ. ಅದರ ಜೊತೆಗೆ ಹಣಬಾಕ ವೈದ್ಯರ ದುರಾಸೆ ಕೂಡಾ ಅಷ್ಟೇ ಮಿತಿಮೀರಿಹೋಗಿದೆ. ಆರಂಭದಲ್ಲಿ ಇಲಿ, ಹೆಗ್ಗಣ, ಕಪ್ಪೆಗಳ ಮೇಲೆ ಪ್ರಯೋಗ ನಡೆಸುವ ವೈದ್ಯ ವಿಜ್ಞಾನಕ್ಕೆ ನರಬಲಿಯೂ ಬೇಕು ಅನ್ನೋದು ಡಾ. 56 ಚಿತ್ರದ ಮೂಲ ಧಾತು. ಭಾರತದಂಥಾ ದೇಶದಲ್ಲಿ ಮೆಡಿಕಲ್ ಎಕ್ಸ್ ಪರಿಮೆಂಟು, ರಿಸರ್ಚುಗಳಿಗೆ ಬಲಿಯಾಗುತ್ತಿರೋದು ಬಡ ಜೀವಗಳು. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಆವಿಷ್ಕಾರಗಳು ನಡೆಯಲಿ. ಆದರೆ, ಲಾಭ, ಲೋಭಕ್ಕೆ ಬಿದ್ದ ವೈದ್ಯರು ಮಾಫಿಯಾದ ಭಾಗವಾಗಿದ್ದಾರೆ. ಕಾನೂನು ಬಾಹಿರ ಕೆಲಸಕ್ಕೆ ಮುಂದಾಗಿದ್ದಾರೆ.
ಏನೇನೂ ಅರಿಯದ ಅಮಾಯಕರ ಜೀವಗಳನ್ನು ಆಪೋಶನ ತೆಗೆದುಕೊಳ್ಳುತ್ತಿದ್ದಾರೆ.
ಇಂಥ ಮೆಡಿಕಲ್ ಮಾಫಿಯಾಗೂ ಹೀರೋಗೂ ಏನು ಸಂಬಂಧ ಅನ್ನೋದೇ ಡಾ. 56 ಚಿತ್ರದಲ್ಲಿ ಕುತೂಹಲ ಮೂಡಿಸುವ ಅಂಶ. ಸ್ವತಃ ಕತೆ ಬರೆದು ನಾಯಕನಾಗಿ ಅಭಿನಯಿಸಿರುವ ಪ್ರವೀಣ್ ರೆಡ್ಡಿ (ಪಿ.ಆರ್) ಪಾಲಿಗೆ ಇದು ಮೊದಲ ಸಿನಿಮಾ ಅನ್ನಿಸುವುದೇ ಇಲ್ಲ. ಪ್ರಿಯಾಮಣಿ ಸಿಬಿಐ ಅಧಿಕಾರಿಣಿಯ ಗತ್ತು ಗಾಂಭೀರ್ಯವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಯತಿರಾಜ್ ಕೂಡಾ ಅದಕ್ಕೆ ಸಾಥ್ ನೀಡಿದ್ದಾರೆ. ಮಂಜುನಾಥ್ ಹೆಗ್ಡೆ ತುಂಬಾ ಇಷ್ಟವಾಗುತ್ತಾರೆ. ಪ್ರದೀಪ್ ಬಂದು ಇಡೀ ಚಿತ್ರಕ್ಕೆ ಮಹಾ ತಿರುವು ನೀಡಿ ಹೋಗುತ್ತಾರೆ. ಚಿತ್ರದಲ್ಲಿ ನಾಯಿ ಕೂಡಾ ಕೀ ರೋಲ್ ಪ್ಲೇ ಮಾಡಿದೆ.ಇನ್ನೊಂದಿಷ್ಟು ವಿವರವಾಗಿ ತೋರಿಸಬಹುದಾದ ದೃಶ್ಯಗಳನ್ನು ಸಂಭಾಷಣೆಯಲ್ಲೇ ಮುಗಿಸಿದ್ಧಾರೆ ಅನ್ನೋದು ಬಿಟ್ಟರೆ ಡಾ. 56 ಪಕ್ವವಾದ ಚಿತ್ರ. ರಾಕೇಶ್ ಸಿ. ತಿಲಕ್ ಕ್ಯಾಮೆರಾ ಕೆಲಸ ಸಿನಿಮಾದ ತಾಕತ್ತು. ನಿರ್ದೇಶಕ ರಾಜೇಶ್ ಆನಂದಲೀಲಾ ಥ್ರಿಲ್ಲರ್ ಸಬ್ಜೆಕ್ಟನ್ನು ಎಲ್ಲೂ ಎಳೆದಾಡದೆ ಅಷ್ಟೇ ಚುಟುಕಾಗಿ ನಿರೂಪಿಸಿದ್ದಾರೆ. ಇತ್ತೀಚೆಗೆ ಯಾವುದೇ ಸಿನಿಮಾ ನೋಡಿದಾಗ ಇದು ʻಲ್ಯಾಗ್ʼ ಎನ್ನುವ ಉದ್ಘಾರ ಕೇಳಿಬರುತ್ತದೆ. ಅದಕ್ಕೆಲ್ಲಾ ಅವಕಾಶವೇ ಕೊಡದ ಡಾ.56 ಚಿತ್ರತಂಡ ಎಷ್ಟು ಬೇಕೋ ಅಷ್ಟನ್ನೇ ಉಳಿಸಿಕೊಂಡು ಮೊಟಕು ಮಾಡಿದ್ದಾರೆ. ಸಿನಿಮಾ ಸಾಗುವುದೇ ಗೊತ್ತಾಗೋದಿಲ್ಲ. ಒಂದಿಷ್ಟೂ ಕಷ್ಟ ಕೊಡದೆ ಸಲೀಸಾಗಿ ನೋಡಿಸಿಕೊಂಡು ಹೋಗುವ ಗುಣ ಹೊಂದಿರುವ ಡಾ. 56 ಅನ್ನು ನೀವೂ ಒಮ್ಮೆ ನೋಡಿಬಿಡಿ!