ಝೈದ್ ಖಾನ್ ಅಭಿನಯದ ‘ಬನಾರಸ್’ ಚಿತ್ರದ ಬಿಡುಗಡೆಗೆ ಇನ್ನು ಮೂರು ದಿನಗಳಷ್ಟೇ ಇದೆ. ನವೆಂಬರ್ 4ರಂದು ಚಿತ್ರವು ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಚಿತ್ರವಾಗಿ, ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿಲ್ಲ.
‘ಬನಾರಸ್’ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಝೈದ್. ಈ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಒಂದು ಪಕ್ಷ ಚತ್ರ ಗೆಲ್ಲದಿದ್ದರೆ, ಅಂದು ತಮ್ಮೊಳಗಿನ ಕಲೆ ಸಾಯುತ್ತದೆ ಎಂದು ಭಾವುಕರಾಗಿ ನುಡಿಯುತ್ತಾರೆ ಝೈದ್.
‘ಈ ಚಿತ್ರ ಚೆನ್ನಾಗಿಲ್ಲ ಎಂದರೆ ಅಂದು ಒಬ್ಬ ಮನುಷ್ಯ ಸಾಯುತ್ತಾನೆ. ಅದು ನನ್ನೊಳಗಿರುವ ಕಲೆ. ನನ್ನಲ್ಲಿರುವ ನಟ ಸಾಯುತ್ತಾನೆ. ನಾನು ಸಾಯಬೇಕೋ ಅಥವಾ ಜನರು ಕಾಪಾಡುತ್ತಾರೋ ಎಂಬುದನ್ನು ನೋಡಬೇಕು. ನನಗೆ ಈ ಚಿತ್ರದ ಬಗ್ಗೆ ಖುಷಿ ಮತ್ತು ಭಯ ಎರಡೂ ಇದೆ. ಒಂದು ಮಾತನ್ನಂತೂ ಹೇಳುತ್ತೇನೆ. ಅಪ್ಪ ತಲೆ ಬಗ್ಗಿಸುವಂತಹ ಕೆಲಸವನ್ನು ನಾನು ಯಾವತ್ತೂ ಮಾಡುವುದಿಲ್ಲ. ತಲೆ ಎತ್ತುವ ಕೆಲಸ ಮಾಡುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ಹಿಂದೆ, ತಮ್ಮ ತಂದೆ ಶಾಸಕ ಜಮೀರ್ ಅಹ್ಮದ್ ಖಾನ್ ತನಗೆ ಸಪೋರ್ಟ್ ಮಾಡಲಿಲ್ಲ ಎಂದು ಝೈದ್ ಬೇಸರಿಸಿಕೊಂಡಿದ್ದರು. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ, ತಮ್ಮ ಕುಟುಂಬದವರಿಂದ ಯಾವುದೇ ಸಹಕಾರ ಸಿಕ್ಕಿರಲಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ತಮ್ಮ ತಂದೆಯವರಿಂದ ದೈಹಿಕವಾದ ಸಹಕಾರ ಸಿಗದಿದ್ದರೂ, ಮಾನಸಿಕವಾಗಿ ಸಹಕಾರ ಯಾವತ್ತೂ ಇತ್ತು ಎನ್ನುತ್ತಾರೆ ಝೈದ್.
‘ಅಪ್ಪ ನನಗೆ ಸಪೋರ್ಟ್ ಮಾಡಿಲ್ಲ ಅಂತ ಹೇಳಿದ್ದೆ. ಆದರೆ, ಇವತ್ತು ಹೇಳುತ್ತಿದ್ದೇನೆ, ಅವರ ಸಪೋರ್ಟ್ ನನಗೆ ಯಾವತ್ತೂ ಇತ್ತು. ಫಿಸಿಕಲ್ ಆಗಿ ಇರದಿದ್ದರೂ, ಅವರ ಪ್ರಾರ್ಥನೆ ಯಾವತ್ತೂ ನನ್ನ ಜೊತೆಗೆ ಇತ್ತು. ಇನ್ನು, ದರ್ಶನ್ ಅವರ ಸಹಕಾರವಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅವರು ನನ್ನ ಅಣ್ಣನ ತರಹ. ಅವರಿಗೆ ಫೋನ್ ಮಾಡಿದರೆ ಬಾ ಚಿನ್ನ ಅಂತಾರೆ. ಹೃದಯದಿಂದ ಮಾತನಾಡಿಸುತ್ತಾರೆ. ಹಾಗೆಯೇ ಜನರ ಪ್ರೀತಿ ಸಹ ಬಹಳ ಮುಖ್ಯ. ಎಲ್ಲರ ಪ್ರೀತಿ ಸಿಕ್ಕರೆ ಬರೀ ಇಂಡಿಯಾ ಅಲ್ಲ, ಇಡೀ ಜಗತ್ತು ಗೆದ್ದು ಬರ್ತೀನಿ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಝೈದ್.
ಇನ್ನು, ಚಿತ್ರದ ಬಗ್ಗೆ ಮಾತನಾಡುವ ಅವರು, ‘’ಬನಾರಸ್ನ’ಲ್ಲಿ ತುಂಬಾ ಶೆಡ್ಸ್ ಇದೆ. ಮಿಸ್ಟ್ರಿ ಪ್ರೇಮಕಥೆ ಇದೆ. ಆಕ್ಷನ್, ಥ್ರಿಲ್, ಸಸ್ಪೆನ್ಸ್, ಕಾಮಿಡಿ ಎಲ್ಲವೂ ಇದೆ. ಇದನ್ನೆಲ್ಲ ಪಕ್ಕಕ್ಕೆ ಇಟ್ಟರೂ, ಒಂದು ಹೊಸ ಪ್ರಯೋಗ ಇದೆ. ಅದು ಇಷ್ಟ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಝೈದ್.