ಸಚಿನ್ ಧನಪಾಲ್ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ ‘ಚಾಂಪಿಯನ್’ ಚಿತ್ರವು ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಸಚಿನ್ ಸಹ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
‘ಚಾಂಪಿಯನ್’ ಕುರಿತು ಮಾತನಾಡುವ ಸಚಿನ್, ‘ಇದೊಂದು ಕ್ರೀಡೆ ಆಧಾರಿತ ಸಿನಿಮಾ. ನಾನು ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ, ಎರಡ್ಮೂರು ಕಥೆಗಳನ್ನು ಕೇಳಿದೆ. ಆ ಪೈಕಿ ಈ ಚಿತ್ರ ನನಗೆ ಬಹಳ ಇಷ್ಟವಾಯಿತು. ಕ್ರೀಡೆ ಚಿತ್ರಗಳಲ್ಲಿ ಹಲವು ಅಂಶಗಳಿರುತ್ತವೆ. ಪ್ರಮುಖವಾಗಿ ಒಂದು ಜರ್ನಿ ಇರುತ್ತದೆ. ಸಂದೇಶ ಇರುತ್ತದೆ. ಹಾಗಾಗಿ, ಈ ಚಿತ್ರವನ್ನು ಒಪ್ಪಿಕೊಂಡೆ. ಅವೆಲ್ಲವೂ ಈ ಚಿತ್ರದಲ್ಲಿ ಇದ್ದುದರಿಂದ ಇದನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಸಚಿನ್.
ಈ ಸಿನಿಮಾ ಮೂಲಕ ಹಳ್ಳಿ ಹುಡುಗನೊಬ್ಬ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಲಾಗಿದೆಯಂತೆ. ‘ಸಿಟಿ ಹುಡುಗರಷ್ಟೇ ಅಲ್ಲ, ಅವರಿಗೆ ಎಲ್ಲ ಸೌಲಭ್ಯಗಳು ಇರುತ್ತವೆ. ಆದರೆ, ಹಳ್ಳಿ ಹುಡುಗರಿಗೆ ಹಲವು ಸೌಲಭ್ಯಗಳು ಇರುವುದಿಲ್ಲ. ಆದರೆ, ಮನಸ್ಸು ಮಾಡಿದರೆ, ಕಷ್ಟಪಟ್ಟರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬ ಮೆಸೇಜ್ ಇದೆ. ಡೆಡಿಕೇಷನ್ ಇದ್ದರೆ ಜೀವನದಲ್ಲಿ ಏನೆಲ್ಲಾ ಮಾಡಬಹುದು ಎಂದು ತೋರಿಸಲಾಗಿದೆ. ತಂದೆ-ತಾಯಿ ಮಕ್ಕಳ ಮೇಲೆ ಪ್ರೀತಿ, ಕನಸು ಇರುತ್ತದೆ. ಆ ಬಾಂಡಿಂಗ್ ಬಹಳ ಚೆನ್ನಾಗಿ ತೋರಿಸಲಾಗಿದೆ. ತಂದೆ, ಮಗ ಇಬ್ಬರೂ ಕನಸು ನನಸಾಗುವುದಕ್ಕೆ ಶ್ರಮಪಡುತ್ತಾರೆ. ಜೊತೆಗೆ ಕಾಮಿಡಿ, ಕ್ಯೂಟ್ ಲವ್ಸ್ಟೋರಿ ಇದೆ’ ಎನ್ನುತ್ತಾರೆ ಸಚಿನ್.
ಇಲ್ಲಿ ಪ್ರೇಮಕಥೆ ಇದ್ದರೂ, ಮಾಮೂಲಿಯಲ್ಲ, ಡಿಸ್ಟನ್ಸ್ ಲವ್ಸ್ಟೋರಿ ಇದೆ ಎಂಬುದು ಅವರ ಅಭಿಪ್ರಾಯ. ‘ಈಗ ಸೋಷಿಯಲ್ ಮೀಡಿಯಾ ಯುಗ. ಕ್ಷಣದಲ್ಲಿ ಡೇಟಿಂಗ್ ಶುರುವಾಗುತ್ತದೆ. ಮುಂಚೆ ಹಾಗಾಗುತ್ತಿರಲಿಲ್ಲ. ಪ್ರೇಮಿಗಳ ನಡುವೆ ಒಂದು ಅಂತರ ಇತ್ತು. ಅಷ್ಟು ಸುಲಭಕ್ಕೆ ಮೀಟ್ ಆಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. 90ರ ದಶಕದವರೆಗೂ ಅದು ಸಾಧ್ಯವಾಗಿತ್ತು. ಈ ಕಾಲದಲ್ಲಿ ಅದು ಬಹಳ ಕಡಿಮೆಯಾಗಿದೆ. ಆ ತರಹದ್ದೊಂದು ಪ್ರೇಮಕಥೆ ಈ ಚಿತ್ರದಲ್ಲೂ ಇದೆ’ ಎನ್ನುತ್ತಾರೆ ಸಚಿನ್.
ಇನ್ನು, ಚಿತ್ರದ ಕುರಿತು ಮತನಾಡುವ ಅವರು, ‘ತುಂಬಾ ಜಾಲಿಯಾಗಿ ಚಿತ್ರೀಕರಣ ಮುಗಿಸಿದೆವು. ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ ದುಃಖದ ವಿಷಯ ಏನೆಂದರೆ, ನಿರ್ದೇಶಕರು ನಿಧನರಾದರು. ಮುಂದೇನು ಎಂಬ ಸ್ಟ್ರೆಸ್ ಇತ್ತು. ಅಷ್ಟರಲ್ಲಿ ಮಾತಿನ ಭಾಗದ ಬಹುತೇಕ ಮುಗಿದಿತ್ತು. ಹಾಡುಗಳ ಚಿತ್ರೀಕರಣ ಮಾತ್ರ ಇತ್ತು. ನಮಗೆ ಒಳ್ಳೆಯ ನೃತ್ಯ ನಿರ್ದೇಶಕರು ಸಿಕ್ಕರು. ಹಾಡುಗಳನ್ನು ಬಹಳ ಚೆನ್ನಾಗಿ ಶೂಟ್ ಮಾಡಿಕೊಟ್ಟರು. ಅಜನೀಶ್ ಸಾರ್ ಬಹಳ ಚೆನ್ನಾಗಿ ಸಂಗೀತ ಸಂಯೋಜಿಸಿಕೊಟ್ಟರು. ಜನ ಹಾಡುಗಳನ್ನು ಇಷ್ಟಪಡುತ್ತಿದ್ದಾರೆ. ಒಂದು ಹಾಡಿಗೆ ಸನ್ನಿ ಲಿಯೋನ್ ಕುಣಿದಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಹಾಡು. ಸನ್ನಿ ಇತ್ತೀಚೆಗೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ತುಂಬಾ ಗ್ಯಾಪ್ ಇತ್ತು. ಹಾಗಾಗಿ, ಅವರನ್ನು ಡಿಂಗರ್ ಬಿಲ್ಲಿ ಎಂಬ ಹಾಡಿಗೆ ಕರೆಸಲಗಿದೆ. ಅವರು ಇಷ್ಟಪಟ್ಟು ಬಂದು ಚಿತ್ರದಲ್ಲಿ ನಟಿಸಿ ಹೋದರು’ ಎನ್ನುತ್ತಾರೆ ಸಚಿನ್.
ಸಚಿನ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ದೇವರಾಜ್, ಸುಮನ್, ಅವಿನಾಶ್, ರಂಗಾಯಣ ರು, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ದಿವಂಗತ ಶಾಹುರಾಜ್ ಶಿಂಧೆ ನಿರ್ದೇಶಿಸಿರುವ ಈ ಚಿತ್ರವನ್ನು ಶಿವಾನಂದ ನೀಲಣ್ಣನವರ್ ನಿರ್ಮಿಸಿದ್ದಾರೆ.