ಒಂದು ಚಿತ್ರ ಜನರನ್ನು ಆಕರ್ಷಿಸುವಲ್ಲಿ ಶೀರ್ಷಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದ್ದೇ ಸ್ಪೆಷಲ್ ಟೈಟಲ್ ನಡಿ ಪ್ರಾರಂಭವಾಗುತ್ತಿರುವ ಚಿತ್ರದ ಹೆಸರು ಆರ್ಎಂ ? (ರಕ್ಷಿತಾ ಮಂಜುಳ). ಇಬ್ಬರು ಯುವತಿಯರು ಹಾಗೂ ಯುವಕನೊಬ್ಬನ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು ವಿಭಿನ್ನ ಪ್ರೇಮಕಥೆಯೊಂದನ್ನು ಹೇಳಹೊರಟಿದ್ದಾರೆ ನಿರ್ದೇಶಕ ದೇವು.
ಪ್ರೇಮಕಥೆಯ ಜೊತೆಗೆ ಥ್ರಿಲ್ಲರ್ ಕಂಟೆಂಟ್ ಇರುವ ಚಿತ್ರ ಇದಾಗಿದ್ದು, ದೇವು ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರವನ್ನು ಓ.ವಿ.ಎಂ. ಮೂವೀಸ್ ಮೂಲಕ ಭರತ್ಕುಮಾರ್ ಚಂದ್ರಶೇಖರ್ ಹೂಗಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು, ಚಿತ್ರದ ಟೈಟಲ್ ಯಾವುದೇ ಇರಲಿ, ಕಥೆಯಮೇಲೆ ಹಿಡಿತವಿದ್ದರೆ ಆ ಸಿನಿಮಾವನ್ನು ಗೆಲ್ಲಿಸಬಹುದು, ನಿರ್ದೇಶಕರು ಇಬ್ಬರು ಹೆಣ್ಣುಮಕ್ಕಳ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪನವರ್ ಸುಂದರೇಶ್ ನರಗಲ್ ಉಪಸ್ಥಿತರಿದ್ದರು.ಆಗಸ್ಟ್ ಕೊನೆಯಲ್ಲಿ ಈ ಚಿತ್ರದ ಮುಹೂರ್ತವನ್ನು ಗದುಗಿನ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ನಡೆಸಲಾಗುವುದು. ಬೆಂಗಳೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಗದಗ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣವನ್ನು ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಆರ್ಎಂ(ರಕ್ಷಿತಾಮಂಜು) ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು, ಸದ್ಯ ಚಿತ್ರದ ತಾಂತ್ರಿಕವರ್ಗ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.