Benki 3.5/5
ಒಂದು ಹಳ್ಳಿ, ಅಲ್ಲಿ ತಂಗಿಯನ್ನೇ ಜೀವದಂತೆ ಪೊರೆಯುವ ಅಣ್ಣ. ಅವಳಿಗೂ ಅಣ್ಣನೆಂದರೆ ಪ್ರಾಣ. ಆರಿಹೋದ ಬೆಂಕಿಯಂತೆ ಕಂಡರೂ, ಒಳಗೊಳಗೇ ಧಗಧಗಿಸುವ ಕೆಂಡ ಅವನು. ತಂಗಿಯ ತಂಟೆಗೆ ಬಂದವರ ಮೇಲೆ ಬಗ್ಗನೆ ಹತ್ತಿ ಉರಿಯುತ್ತಾನೆ. ಇಂಥ ಅಣ್ಣ ಬಯಸಿದ್ದಕ್ಕೆಲ್ಲಾ ವಿರುದ್ಧವಾದ ಘಟನೆಗಳು ಜರುಗುತ್ತವೆ. ಇಂಥದ್ದೊಂದು ಕಥೆ ಕನ್ನಡ ಸಿನಿಮಾದಿಂದ ದೂರ ನಿಂತು ತುಂಬಾನೇ ವರ್ಷಗಳಾಗಿದ್ದವು. ಜನ ಎತ್ತೆತ್ತಲೋ ಓಡುತ್ತಿರುವಾಗ ಮತ್ತೆ ಹಳ್ಳಿ ಸೊಗಡನ್ನು ಮನಸಿಗೆ ತಾಕಿಸುವ ಸಿನಿಮಾ ʻಬೆಂಕಿʼ.
ಎಲ್ಲವೂ ತನ್ನಿಚ್ಚೆಯಂತೆ ನಡೆಯುತ್ತಿದೆ. ಒಳ್ಳೇ ಸಂಬಂಧವೂ ಕೂಡಿಬಂದಿದೆ. ತಂಗಿ ಬದುಕು ಬಂಗಾರವಾಯ್ತು… ಅಂತಾ ಸಮಾಧಾನ ಪಡುವಷ್ಟರಲ್ಲಿ ಅರಗಿಸಿಕೊಳ್ಳಲಾರದ ಸಂಗತಿ ಎದುರಾಗುತ್ತದೆ. ಏನದು? ಆ ನಂತರ ಏನೆಲ್ಲಾ ತಿರುವುಗಳು ಎದುರಾಗಬಹುದು? ಅನ್ನೋದು ʻಬೆಂಕಿʼಯ ತೀವ್ರತೆಯನ್ನು ಹೆಚ್ಚಿಸುತ್ತದೆ.
ಮೊದಲ ಭಾಗ ಬಹುತೇಕ ಕಾಮಿಡಿ ದೃಶ್ಯಗಳ ಮೂಲಕವೇ ಕತೆ ಸಾಗುತ್ತದೆ. ನಗಿಸುತ್ತಲೇ ಭಾವುಕ ಕ್ಷಣಗಳಿಗೆ ಕರೆದೊಯ್ಯುವುದು ಬಹುಶಃ ಉದ್ದೇಶವಾಗಿರಬಹುದು. ಆದರೆ ಹಾಸ್ಯ ಪ್ರಸಂಗಗಳು ಯಾಕೋ ಹೇಳಿಕೊಳ್ಳುವ ಮಟ್ಟಕ್ಕೆ ವರ್ಕೌಟ್ ಆಗಿಲ್ಲ. ಆದರೆ ದ್ವಿತೀಯಾರ್ಧ ಎಂಥವರ ಕಣ್ಣುಗಳನ್ನೂ ತೇವ ಮಾಡಿಸುತ್ತವೆ. ಕೆಲವೊಂದು ದೃಶ್ಯಗಳು ನಿಜಕ್ಕೂ ಪ್ರೇಕ್ಷಕರನ್ನು ಬಿಕ್ಕಿ ಬಿಕ್ಕಿ ಅಳುವಂತೆ ಮಾಡುತ್ತವೆ. ಏಕಾಏಕಿ ಚಿತ್ರಕತೆಯೂ ಬಿಗಿಯಾಗುತ್ತದೆ.
ಅನೀಶ್ ಯಾವ ಕೊರತೆಯೂ ಇಲ್ಲದ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಹೀರೋ. ನಟನೆ, ಡ್ಯಾನ್ಸು, ಫೈಟು ಎಲ್ಲವನ್ನೂ ಅದ್ಭುತವಾಗಿ ನಿರ್ವಹಿಸುವವರು. ಇಲ್ಲಿ ಅಕ್ಕರೆಯ ಅಣ್ಣನಾಗಿ, ಸುಡುಸುಡುವ ʻಬೆಂಕಿʼಯ ಜ್ವಾಲೆಯಾಗಿದ್ದಾರೆ. ಶೃತಿ ಪಾಟೀಲ್ ತಂಗಿ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ. ನಾಯಕಿ ಸಂಪದಾ ಹುಲಿವಾನ ಪಾತ್ರ ಪರವಾಗಿಲ್ಲ. ಉಗ್ರಂ ಮಂಜು ಪಾತ್ರದ ಕಲ್ಪನೆ ಮತ್ತು ಅವರ ಅಭಿನಯ ಎರಡೂ ಚೆಂದ. ತೂತುಮಡಿಕೆ ಚಂದ್ರಕೀರ್ತಿ ಕೂಡಾ ಊಹೆ ಮಾಡಲಾರದಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಮೈತ್ರೇಯ ಬಗ್ಗೆ ಹೊಸದಾಗಿ ಹೇಳಲೇನೂ ಇಲ್ಲ. ಈ ನಟ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಅಮೂಲ್ಯ ಸಂಪತ್ತಷ್ಟೇ. ʻಬೆಂಕಿʼಯಲ್ಲಿ ಕಡಿಮೆ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಹೆಚ್ಚು ಸ್ಕೋರು ಮಾಡಿದ್ದಾರೆ. ಏನದು ಅನ್ನೋದು ತೆರೆ ಮೇಲೆ ನೋಡಿದರಷ್ಟೇ ಸರಿ.
ಹಿರಿಯ ನಿರ್ದೇಶಕ ಎ.ಆರ್ ಬಾಬು ಪುತ್ರ ಎ.ಆರ್. ಶಾನ್ ನಿರ್ದೇಶಿಸಿರುವ ಚಿತ್ರ ಇದು. ಇನ್ನೊಂದಿಷ್ಟು ಶ್ರಮಿಸಿದ್ದಿದ್ದರೆ ಬೇರೆ ಲೆವೆಲ್ಲಿಗೆ ತೆಗೆದುಕೊಂಡು ಹೋಗಬಹುದಿತ್ತು ಅನ್ನೋದನ್ನು ಬಿಟ್ಟರೆ ʻಬೆಂಕಿʼ ಎಲ್ಲೂ ಬೇಸರ ಮೂಡಿಸದೆ ನೋಡಿಸಿಕೊಂಡು ಹೋಗುವ ಗುಣ ಹೊಂದಿದೆ. ಸೆಂಟಿಮೆಂಟ್ ಸಿನಿಮಾಗಳನ್ನು ಇಷ್ಟ ಪಡುವವರು ಮಾತ್ರವಲ್ಲ, ಆಕ್ಷನ್ ಪ್ರಿಯರೂ ನೋಡಬಹುದಾದ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು.