ಅನೇಶ್ ಯಾವಾಗಲೂ ಅಷ್ಟೇ. ಅವರು ಆರಂಭದಿಂದಲೇ ದೊಡ್ಡ ಸದ್ದು ಅಥವಾ ಸುದ್ದಿ ಮಾಡುವುದಿಲ್ಲ. ಸದ್ದಿಲ್ಲದೆ ಚಿತ್ರ ಮುಗಿಸಿ, ಆ ನಂತರ ಅದರ ಬಗ್ಗೆ ಮಾತನಾಡುವುದಕ್ಕೆ ಮುಂದಾಗುತ್ತಾರೆ. ಈಗಲೂ ಅಷ್ಟೇ. ಅವರು ‘ಬೆಂಕಿ’ ಎಂಬ ಚಿತ್ರ ಮಾಡುತ್ತಿರುವುದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಸದ್ದಿಲ್ಲದೆ ಕೆಲಸ ಮುಗಿಸುತ್ತಿದ್ದ ಅನೀಶ್, ಮೂರು ತಿಂಗಳ ಹಿಂದೆ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದರು. ಈಗ ಆ ಚಿತ್ರ ಜುಲೈ 15ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದುವರೆಗೂ ಅನಿಶ್ ಅಭಿನಯದ ಚಿತ್ರಗಳಲ್ಲೇ ಇದೊಂದು ವಿಭಿನ್ನವಾದ ಚಿತ್ರವಾಗಲಿದೆ ಎಂದು ನೋಡಿದವರೇ ಹೇಳುತ್ತಿದ್ದಾರೆ.
‘ಬೆಂಕಿ’, ಅನೀಶ್ ಅಭಿನಯದ 10ನೇ ಚಿತ್ರವಾದರೆ, ನಿರ್ಮಾಪಕರಾಗಿ ಮೂರನೆಯ ಚಿತ್ರ. ‘ನನಗೆ ಆಫರ್ ಕಡಿಮೆಯಾಗಿಲ್ಲ. ಆದರೆ, ನನಗೆ ಇಷ್ಟವಾದ ಕಂಟೆಂಟ್ ಸಿಗುತ್ತಿರಲಿಲ್ಲ. ಹಾಗಾಗಿ, ಇಷ್ಟದ ಕಥೆಯ ಜತೆಗೆ ನಾನೇ ನನ್ನ ವಿಂಕ್ವಿಷಲ್ ಸ್ಟುಡಿಯೋಸ್ ಮೂಲಕ ನಿರ್ಮಾಣಕ್ಕಿಳಿದೆ. ಅದಕ್ಕೆ ಸ್ನೇಹಿತರ ಸಹಕಾರ ಅಪಾರ. ಸ್ನೇಹಿತರ ಸಹಕಾರವಿಲ್ಲದಿದ್ದರೆ ಈ ಚಿತ್ರ ಸಾಧ್ಯವಾಗುತ್ತಿರಲಿಲ್ಲ. ನಟನೆಗಿಂತ ಪ್ರೊಡಕ್ಷನ್ ನೋಡಿಕೊಳ್ಳುವುದು ನನಗೆ ಸವಾಲು ಆಗಿತ್ತು. ಇದೊಂದು ಟಚ್ಚಿಂಗ್ ಸಿನಿಮಾ. ಅಣ್ಣ-ತಂಗಿ ಸೆಂಟಿಮೆಂಟ್ ಇರುವ ಸಿನಿಮಾ’ ಎಂದು ಚಿತ್ರದ ಬಗ್ಗೆ ಅವರು ಮಾಹಿತಿ ಕೊಡುತ್ತಾರೆ.
ಈ ಚಿತ್ರವನ್ನು ದಿವಂಗತ ಎ.ಆರ್. ಬಾಬು ಅವರ ಮಗ ಶಾನ್ ನಿರ್ದೇಶನ ಮಾಡಿದ್ದಾರೆ. ‘ಇದೊಂದು ಕಂಪ್ಲೀಟ್ ಪ್ಯಾಕೇಜ್ ಸಿನಿಮಾ ಎನ್ನುವ ಅವರು, ಇದರಲ್ಲಿ ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಅನೀಶ್ ಅವರ ವಿಂಕ್ವಿಷಲ್ ಸ್ಟುಡಿಯೋಸ್ನಿಂದ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಹೊಸ ಹುಡುಗರಿಗೆ ಅವಕಾಶ ಸಿಗುತ್ತಿವೆ. ಈ ಸಂಸ್ಥೆಯು ಇನ್ನಷ್ಟು ಚಿತ್ರಗಳನ್ನು ನಿರ್ಮಿಸಲಿ’ ಎಂದು ಹಾರೈಸುತ್ತಾರೆ ಶಾನ್.
ನಿಖಿಲ್ ಕುಮಾರ್ ಅಭಿನಯದ ‘ರೈಡರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಂಪದ ಹುಲಿವಾನ, ಈ ಚಿತ್ರದಲ್ಲಿ ಅನೀಶ್ಗೆ ನಾಯಕಿಯಾಗಿ ನಟಿಸಿದ್ದಾರೆ. ಶ್ರುತಿ ಪಾಟೀಲ್ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಅಚ್ಯುತ್ ಕುಮಾರ್, ಹರಿಣಿ, ‘ಉಗ್ರಂ’ ಮಂಜು ಮುಂತಾದವರು ನಟಿಸಿದ್ದಾರೆ. ಕೌಶಿಕ್ ಹರ್ಷ ಸಂಗೀತ ಸಂಯೋಜಿಸಿದರೆ, ವೀನಸ್ ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ.