ಕನ್ನಡ ಚಿತ್ರರಂಗದಲ್ಲಿ ಶ್ವಾನಗಳನ್ನು ಬಳಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ‘777 ಚಾರ್ಲಿ’ ಘೋಷಣೆಯಾದ ಮೇಲೆ, ನಾನು ಮತ್ತು ಗುಂಡ ಎಂಬ ಶ್ವಾನದ ಕುರಿತಾದ ಚಿತ್ರ ಪ್ರಾರಂಭವಾಯಿತು. ಈ ವಾರ ಬಿಡುಗಡೆಯಾಗುತ್ತಿರುವ ‘ಚೇಸ್’ ಚಿತ್ರದಲ್ಲೂ ಮ್ಯಾಕ್ಸ್ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸುತ್ತಿದೆ.
ಈ ಚಿತ್ರದ ಕುರಿತು ಮಾತನಾಡುವ ಮ್ಯಾಕ್ಸ್ನ ತರಬೇತುದಾರ, ‘ಈ ಚಿತ್ರದಲ್ಲಿ ಮ್ಯಾಕ್ಸ್ ಜೊತೆಗೆ ಅತೀ ಹೆಚ್ಚು ನಟಿಸಿರುವುದು ರಾಧಿಕಾ ಮೇಡಮ್. ಆರಂಭದಲ್ಲಿ ಅವರಿಗೆ ಸ್ವಲ್ಪ ಭಯವಿತ್ತು. ಮೇಲಾಗಿ ಮೂಕಪ್ರಾಣಿಯಿಂದ ನಟನೆ ತೆಗೆಸುವುದರ ಹಿಂದೆ ಹಲವರ ಕೈವಾಡವಿರುತ್ತದೆ. ಮುಖ್ಯವಾಗಿ ನಾಯಿಯು ಆರಾಮವಾಗಿರುವಂತೆ ನೋಡಿಕೊಳ್ಳಬೇಕು. ಅದು ಎಷ್ಟು ಆರಾಮಾಗಿರುತ್ತದೋ, ಅಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗಾಗಿ, ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಚಿತ್ರಕ್ಕಾಗಿ ಹಲವು ದಿನಗಳ ಕಾಲ ಮ್ಯಾಕ್ಸ್ ಚಿತ್ರೀಕರಣ ಮಾಡಿದ್ದಾನೆ. ತೆರೆಯ ಮೇಲೆ ಅರ್ಧ ಗಂಟೆಯವರೆಗೂ ಕಾಣಿಸಿಕೊಳ್ಳುತ್ತಾನೆ’ ಎನ್ನುತ್ತಾರೆ.
ರಾಧಿಕಾ ನಾರಾಯಣ್ ಸಹ ಮ್ಯಾಕ್ಸ್ ಜೊತೆಗೆ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾರೆ. ‘ಈ ಚಿತ್ರ ನನಗೆ ಹಲವು ಕಾರಣಗಳಿಗೆ ಬಹಳ ವಿಶೇಷ. ಏಕೆಂದರೆ, ಇದುವರೆಗೂ ಬೇರೆ ಚಿತ್ರಗಳಲ್ಲಿ ಮಾಡದ ಕೆಲವು ವಿಷಯಗಳನ್ನು ನಾನು ಈ ಚಿತ್ರದಲ್ಲಿ ಮಾಡೊದ್ದೇನೆ. ಮೊದಲಿಗೆ ನಾನು ಶ್ವಾನದ ಜೊತೆಗೆ ನಟನೆ ಮಾಡಿದ್ದೇನೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಫೈಟ್ಗಳನ್ನು ಸಹ ಮಾಡಿದ್ದೇನೆ. ಇದೊಂದು ವಿಶೇಷವಾದ ಪಾತ್ರ. ಈ ಬಗ್ಗೆ ಹೆಚ್ಚಿಗೆ ಹೇಳುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ರಾಧಿಕಾ ನಾರಾಯಣ್.
ಈ ಚಿತ್ರದ ನಿಜವಾದ ಹೀರೋ ಮ್ಯಾಕ್ಸ್ ಎನ್ನುತ್ತಾರೆ ರಾಧಿಕಾ ನಾರಾಯಣ್. ‘ಚಿತ್ರೀಕರಣ ಸಮಯದಲ್ಲಿ ನಮ್ಮನ್ನು ಹೆಚ್ಚು ವಿಚಾರಿಸಿಕೊಳ್ಳುತ್ತಿರಲಿಲ್ಲ. ಆದರೆ, ಮ್ಯಾಕ್ಸ್ಗೆ ಮಾತ್ರ ಸಖತ್ ಒಳ್ಳೆಯ ಟ್ರೀಟ್ಮೆಂಟ್ ಸಿಗುತ್ತಿತ್ತು. ಮ್ಯಾಕ್ಸ್ನನ್ನು ಎಲ್ಲರೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಏಕೆಂದರೆ, ಮೂಕಪ್ರಾಣಿಯಿಂದ ಕೆಲಸ ತೆಗೆಸುವುದು ಅಷ್ಟು ಸುಲಭದ ಮಾತಲ್ಲ’ ಎನ್ನುತ್ತಾರೆ ರಾಧಿಕಾ.
‘ಚೇಸ್’ ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಮ್ಯಾಕ್ಸ್ ಜೊತೆಗೆ ರಾಜೇಶ್ ನಟರಂಗ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗೇಶ್, ಶ್ವೇತಾ ಸಂಜೀವಲು, ಶೀತಲ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ವಿಲೋಕ್ ಶೆಟ್ಟಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.