ಕಳೆದ ವರ್ಷ ಬಿಡುಗಡೆಯಾದ ಯುವರತ್ನ ಚಿತ್ರದಲ್ಲೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಸೋನು. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ ಈಗ ಜುಲೈ 08ಕ್ಕೆ ಬಿಡುಗಡೆಯಾಗುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ಅವರು ವಾಪಸ್ಸಾಗುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೃತ್ತಿಜೀವನದಲ್ಲೇ ಇದುವರೆಗೂ ಯಾವ ಚಿತ್ರದಲ್ಲೂ ಮಾಡದಂತಹ ಒಂದು ಪಾತ್ರದಲ್ಲಿ ಅವರು ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಈ ಚಿತ್ರದಲ್ಲಿ ತಾನು ಚೆನ್ನಾಗಿ ಮಾಡಿದ್ದರೆ, ಅದಕ್ಕೆ ತನ್ನ ಸಹೋದರಿಯ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಸೋನು. ‘ನಿಜ ಹೇಳಬೇಕೆಂದರೆ, ನನ್ನ ತಂಗಿಗೆ ಥ್ಯಾಂಕ್ಸ್ ಹೇಳುತ್ತೇನೆ. ಈ ತರಹದ ಪಾತ್ರ ನನ್ನ ಜೀವನದಲ್ಲಿ ಮಾಡಿದ್ದೇ ಮೊದಲು. ನೆಗೆಟಿವ್ ಶೇಡ್ ಇರುವ ಪಾತ್ರ. ಪಾತ್ರವೇನೋ ಒಪ್ಪಿಕೊಂಡೆ. ಆದರೆ, ನಂತರ ಗೊಂದಲ ಆಯಿತು. ಈ ಚಿತ್ರವನ್ನು ಜನ ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇತ್ತು. ಆಗ ನನ್ನ ತಂಗಿ , ಪಾತ್ರವನ್ನು ಪಾತ್ರದ ತರಹ ನೋಡು ಎಂದು ಅರ್ಥ ಮಾಡಿಸಿದಳು. ಬರೀ ಪಾಸಿಟಿವ್ ಆದ ಪಾತ್ರಗಳನ್ನೇ ಮಾಡಬೇಕು ಅಂತೇನಿಲ್ಲ. ನೆಗೆಟಿವ್ ಪಾತ್ರವಾದರೂ, ಇಲ್ಲೊಂದು ಒಳ್ಳೆಯ ಸಂದೇಶವಿದೆ. ಸೋನು ಆಗಿ ನೋಡಬೇಡ. ಆಕಾಂಕ್ಷ ತರಹ ನೋಡು, ಯೋಚನೆ ಮಾಡು. ಸೋನು ಆಗಿ ನೋಡಿದರೆ, ಎಲ್ಲವೂ ತಪ್ಪಾಗಿ ಕಾಣಿಸುತ್ತದೆ. ನೀನೊಬ್ಬ ನಟಿ. ನಟಿಯಾಗಿ ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬಿಸುವ ಪ್ರಯತ್ನ ಮಾಡು ಎಂದಳು. ಅವಳ ಮಾತು ನನ್ನಲ್ಲಿ ಸಾಕಷ್ಟು ಪ್ರೋತ್ಸಾಹ ತುಂಬಿತು’ ಎನ್ನುತ್ತಾರೆ.
ಇಷ್ಟು ಚಿತ್ರಗಳಲ್ಲಿ ವೆಡ್ಡಿಂಗ್ ಗಿಫ್ಟ್ ಚಿತ್ರವೊಂದೇ ಹೇಳಿದ ಸಮಯಕ್ಕೆ ಸರಿಯಾಗಿ ಮುಗಿದಿದ್ದು ಎನ್ನುತ್ತಾರೆ ಸೋನು. ‘37 ದಿನಗಳಲ್ಲಿ ಚಿತ್ರೀಕರಣ ಮುಗಿಸಿದರು. ನನ್ನ ಜೀವನದಲ್ಲೇ ಮೊದಲ ಬಾರಿಗೆ ಒಂದು ಚಿತ್ರವನ್ನು ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿದ್ದು. ಹೇಳಿದ ದಿನಕ್ಕೆ ಸರಿಯಾಗಿ ಮುಗಿಸಿದರು. ಏನಂದುಕೊಕಂಡಿದ್ದರೋ, ಅವೆಲ್ಲವೂ ಸರಿಯಾಗಿ ಬಂದಿದೆ. ಇದೊಂದು ಪಕ್ಕಾ ನಿರ್ದೇಶಕರ ಚಿತ್ರ. ಅದಕ್ಕೆ ಜೀವ ತುಂಬಿಸುವ ಪ್ರಯತ್ನ ಮಾಡಿದ್ದೇನೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದೇನೆ. ಜನ ಈ ಪಾತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಏಕೆಂದರೆ, ಈ ಚಿತ್ರವು ನೊಂದ ಮನಸ್ಸುಗಳಿಗೆ ಹತ್ತಿರವಾಗುತ್ತದೆ ಅಂದುಕೊಂಡಿದ್ದೇನೆ’ ಎನ್ನುತ್ತಾರೆ ಸೋನು.
ಈ ಚಿತ್ರದ ಮೂಲಕ ನಿಶಾನ್ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ಹಿಂದಿ, ಮಲಯಾಳಂ ಮತ್ತು ಬಂಗಾಲಿ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಕನ್ನಡಿಗ ನಿಶಾನ್, ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಈ ಕುರಿತು ಮಾತನಾಡುವ ಅವರು. ‘ಈ ಕಥೆ ಹೇಳಿದಾಗ, ಎರಡು ಮನಸ್ಸಿತ್ತು. ಒಂದು ಕೋವಿಡ್ ಸಂದರ್ಭದಲ್ಲಿ ಚಿತ್ರೀಕರಣ. ಇನ್ನೊದು ಇದೊಂದು ಹೊಸ ತಂಡ. ಹಾಗಾಗಿ, ಏನು ಮಾಡುತ್ತಾರೋ ಎಂಬ ಕುತೂಹಲ ಸಹಜವಾಗಿಯೇ ಇತ್ತು. ಆದರೆ, ಬಹಳ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಮೂಲಕ ಬಹಳ ಸೂಕ್ಷ್ಮವಾದ ವಿಷಯವೊಂದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಕಾನೂನು ಸರಿ ಇಲ್ಲ ಎಂದು ಹೇಳುತ್ತಿಲ್ಲ. ಆದರೆ, ಅದನ್ನು ಹೇಗೆ ದುರಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಒಂದು ಕಥೆಯ ಇನ್ನೊಂದು ಭಾಗ ಹೇಳುವ ಪ್ರಯತ್ನ ಇಲ್ಲಾಗಿದೆ’ ಎನ್ನುತ್ತಾರೆ.
‘ವೆಡ್ಡಿಂಗ್ ಗಿಫ್ಟ್’ ಚಿತ್ರವನ್ನು ವಿಕ್ರಂ ಪ್ರಭು ನಿರ್ಮಿಸಿ-ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ ಸಹ ಅವರದ್ದೇ. ಬಾಲಚಂದ್ರ ಪ್ರಭು ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಪ್ರೇಮ, ನಿಶಾನ್ ನಾಣಯ್ಯ, ಸೋನು ಗೌಡ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು ನಟಿಸಿದ್ದಾರೆ.