ಹೆಸರು ಕೇಳಿದರೆ ಇದು ಹರಿ ಎನ್ನುವವನ ಕಥೆಯಲ್ಲ, ಗಿರಿ ಎನ್ನುವ ಕಥೆ ಇರಬಹುದು ಎಂದನಿಸಬಹುದು. ಅದಕ್ಕೆ ಸರಿಯಾಗಿ, ನಾಯಕನ ಪಾತ್ರದ ಹೆಸರು ಗಿರಿ ಎಂದಿರುವುದರಿಂದ ಇದು ಅವನ ಕುರಿತಾದ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಬಹುದು.
ಆದರೆ, ಇದು ಒಬ್ಬ ಗಿರಿಯ ಕಥೆಯಲ್ಲ, ಮೂವರು ಗಿರಿಯರ ಕಥೆ ಎನ್ನುತ್ತಾರೆ ರಿಷಭ್ ಶೆಟ್ಟಿ. ‘ಇಲ್ಲಿ ನಾನೊಬ್ಬನೇ ಗಿರಿಯಲ್ಲ. ಇಲ್ಲಿ ಮೂವರು ಗಿರಿಯರಿದ್ದಾರೆ. ಒಂದು ನಾನಾದರೆ, ಇನ್ನೊಂದು ನಾಯಕಿ, ಮತ್ತೊಂದು ವಿಲನ್ ಪಾತ್ರಗಳ ಹೆಸರು ಸಹ ಇಲ್ಲಿ ಗಿರಿ ಎಂದಿರುತ್ತದೆ. ನಾಯಕಿಯ ಹೆಸರು ಗಿರಿಜಾ ಥಾಮಸ್. ಆಕೆಯನ್ನು ಎಲ್ಲರೂ ಗಿರಿ ಎಂದು ಕರೆಯುತ್ತಿರುತ್ತಾರೆ. ಇನ್ನು, ವಿಲನ್ ಹೆಸರು ಸಹ ಗಿರಿ. ಹಾಗಾಗಿ, ಯಾವ ಗಿರಿಯ ಕಥೆ ಇದು ಎಂಬ ಕುತೂಹಲ ಮತ್ತು ಗೊಂದಲಕ್ಕೆ ಚಿತ್ರ ನೋಡಿದ ನಂತರವಷ್ಟೇ ಉತ್ತರ ಸಿಗಬೇಕು’ ಎನ್ನುತ್ತಾರೆ ಅವರು.
ರಿಷಭ್ ಪ್ರಕಾರ, ಇದೊಂದು ಪಕ್ಕಾ ಮನರಂಜನೆಯ ಪ್ಯಾಕೇಜ್ ಅಂತೆ. ಇತ್ತೀಚೆಗಷ್ಟೇ ಪ್ರೇಕ್ಷಕರು ಒಂದು ಪಕ್ಕಾ ಸೆಂಟಿಮೆಂಟ್ ಚಿತ್ರ ನೋಡಿ ಅತ್ತಿದ್ದು, ಈಗ ಒಂದು ಪಕ್ಕಾ ಮನರಂಜನೆಯ ಚಿತ್ರ ನೋಡಿ ನಗುವ ಸಮಯ ಬಂದಿದೆ ಎನ್ನುತ್ತಾರೆ ಅವರು. ‘ಇದೊಂದು ಮನರಂಜನೆಯ ಚಿತ್ರ. ಪ್ರೇಕ್ಷಕರನ್ನು ಎರಡೂವರೆ ತಾಸು ನಗಿಸಿ ಕಳಿಸಬೇಕು ಎಂಬುದು ಉದ್ದೇಶ. ಟ್ರೇಲರ್ ನೋಡಿದರೆ, ಚಿತ್ರದಲ್ಲೇನಿರಬಹುದು ಮತ್ತು ಕಥೆ ಹೇಗಿರಬಹುದು ಎಂಬ ಅಂದಾಜು ಸಿಗಬಹುದು. ಇಲ್ಲಿ ನನ್ನ ಪಾತ್ರ ಬೇರೆ ತರಹ ಇದೆ. ಸ್ವಲ್ಪವೂ ಹೀರೋಯಿಸಂ ಇಲ್ಲ. ಅವನು ಒಂದು ಇಕ್ಕಟ್ಟಿನಲ್ಲಿ ಸಿಕ್ಕಿಕ್ಕೊಳ್ಳುತ್ತಾನೆ. ಅದರಿಂದ ಹೇಗೆ ಆಚೆ ಬರುತ್ತಾನೆ ಎನ್ನುವುದರ ಜೊತೆಗೆ ಆತ ಏನೆಲ್ಲ ಕಥೆ ಹೇಳುತ್ತಾನೆ ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ ರಿಷಭ್ ಶೆಟ್ಟಿ.
‘ಹರಿಕಥೆ ಅಲ್ಲ ಗಿರಿಕಥೆ’, ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಹೊಸ ಚಿತ್ರ. ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಈ ಸಂಸ್ಥೆಯು ಇದೇ ಮೊದಲ ಬಾರಿಗೆ ರಿಷಭ್ ಜತೆಗೆ ಕೈಜೋಡಿಸಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಈ ಸಂಸ್ಥೆಯ ಚಿತ್ರವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಹೊಸಬರು ಕೆಲಸ ಮಾಡಿದ್ದಾರೆ. ಚಿತ್ರವನ್ನು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಜತೆಯಾಗಿ ನಿರ್ದೇಶನ ಮಾಡಿದರೆ, ಗಿರಿಕೃಷ್ಣ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಇನ್ನು, ಚಿತ್ರದಲ್ಲಿ ರಿಷಭ್ ಜತೆಗೆ ರಚನಾ ಇಂದರ್, ತಪಸ್ವಿನಿ ಪೂಣಾಚ್ಛ, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ಯೋಗರಾಜ್ ಭಟ್ ಸಹ ಕಾಣಿಸಿಕೊಂಡಿದ್ದಾರೆ.